ಕಾಂಗ್ರೆಸ್‍ನಿಂದ ಮನೆ ಮನೆ ಪ್ರಚಾರ

ತುಮಕೂರು:ಏಪ್ರಿಲ್ 26 ರಂದು ನಡೆಯುವ 2024ನೇ ಸಾಲಿನ 18ನೇ ಲೋಕಸಭಾ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರ ಪರವಾಗಿ ಕಾಂಗ್ರೆಸ ಮುಖಂಡರಾದ ಮಾಜಿ ಶಾಸಕ ಡಾ.ರಫೀಕ್ ಅಹಮದ್,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್,ಎಸ್.ಪಿ.ಮುದ್ದಹನುಮೇಗೌಡರ ಪುತ್ರಿ ರಚನಾ ಸೇರಿದಂತೆ ನಗರಪಾಲಿಕೆ ಮಾಜಿ ಕಾರ್ಪೋರೇಟರ್‍ಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಮರಳೂರಿನ ಶ್ರೀವೀರಾಂಜನೇಯ ಸ್ವಾಮೀಗೆ ಪೂಜೆ ಸಲ್ಲಿಸುವ ಮೂಲಕ ಮನೆ ಮನೆ ಪ್ರಚಾರ ಆರಂಭಿಸಿದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್, ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರ ಪರವಾಗಿ ನಗರದ 35 ವಾರ್ಡುಗಳ ಮನೆ ಮನೆಗೂ ಭೇಟಿ ನೀಡಿ, ಕಾಂಗ್ರೆಸ್ ಪಕ್ಷದ ಕರಪತ್ರಗಳನ್ನು ಹಂಚುವ ಮೂಲಕ ಮತ ಕೇಳುವ ಕಾರ್ಯಕ್ಕೆ ಇಂದು 28ನೇ ವಾರ್ಡಿನ ಮರಳೂರು ಗ್ರಾಮದಿಂದ ಚಾಲನೆ ನೀಡಲಾಗಿದೆ.ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ನಗರಪಾಲಿಕೆಯ ಸದಸ್ಯರುಗಳು ಹಾಗೂ ಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷರು, ಬೂತ್ ಮಟ್ಟದ ಪದಾಧಿಕಾರಿಗಳು ಒಗ್ಗೂಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷದ ಸಾಧನೆಗಳು, ಹಾಗೂ 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ನ್ಯಾಯಪತ್ರ ಐದು ಗ್ಯಾರಂಟಿಗಳ ಪತ್ರವನ್ನು ನೀಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೈಗೊಳ್ಳುವ ಕಾರ್ಯಕ್ರಮಗಳ ಕರಪತ್ರ ನೀಡುವ ಮೂಲಕ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೇಳಿಕೊಳ್ಳಲಾಗುವುದು. ತುಮಕೂರು ನಗರದಲ್ಲಿ ಸುಮಾರು 2.71 ಲಕ್ಷ ಮತಗಳಿದ್ದು, ಇವುಗಳಲ್ಲಿ 1.71 ಲಕ್ಷ ಮತ ಚಲಾವಣೆಯಾದರೆ ಶೇ50ರಷ್ಟು ಮತಗಳು ಬಂದರೆ ನಮ್ಮ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ಗೆಲ್ಲುವುದರಲ್ಲಿ ಸಂಶಯವೇ ಇಲ್ಲ ಎಂದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನೊಂದಿಗೆ 2023ರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾಗಿದ್ದ ಇಕ್ಬಾಲ್ ಅಹಮದ್, ಜೆಡಿಎಸ್ ಅಭ್ಯರ್ಥಿಯಾಗಿದ್ದ ಗೋವಿಂದರಾಜು ಅವರುಗಳ ಜೊತೆಗೆ ಎಲ್ಲಾ ಕಾರ್ಪೋರೆಟರ್‍ಗಳು ಕೈಜೋಡಿಸಿದ್ದಾರೆ. ಅಲ್ಲದೆ ರಾಜ್ಯ ಸರಕಾರದ ಗ್ಯಾರಂಟಿಗಳು ಎಲ್ಲಾ ಸಮುದಾಯಗಳನ್ನು ತಲುಪಿದೆ. ನಮ್ಮ ಪರವಾಗಿ ಜನತೆ ಮತಚಲಾಯಿಸಲು ಸಿದ್ದರಿದ್ದು, ಪಕ್ಷದ ಕಾರ್ಯಕರ್ತರು ಜನರ ಬಳಿ ಹೋಗಿ ಮತ ಕೇಳುವ ಕೆಲಸ ಮಾಡಬೇಕಾಗಿದೆ. ಮುಂದಿನ 8 ದಿನಗಳ ಕಾಲ ಈ ಕೆಲಸವನ್ನು ನಗರದಲ್ಲಿ ಮಾಡಲಾಗುವುದು ಎಂದು ಡಾ.ರಫೀಕ್ ಅಹಮದ್ ನುಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ,ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಪಿ.ಮುದ್ದ ಹನುಮೇಗೌಡರು ಜನಾನುರಾಗಿಗಳು, 2014-19ರವರೆಗೆ ಸಂಸದರಾಗಿ ಜಿಲ್ಲೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸ್ಮಾರ್ಟ್‍ಸಿಟಿ, ಹೆಚ್.ಎ.ಎಲ್, ಇಸ್ರೋ,ರಾಷ್ಟ್ರೀಯ ಹೆದ್ದಾರಿ 206ರ ಚತುಸ್ಪಥ ರಸ್ತೆ, ರೈಲ್ವೆ ಲೈನ್ ವಿದ್ಯುತ್ತೀಕರಣ ಸೇರಿದಂತೆ ಹಲವಾರು ಯೋಜನೆಗಳು ಜಾರಿಯಲ್ಲಿವೆ.ಅಲ್ಲದೆ ನಡೆದಾಡುವ ದೇವರು ಎಂದು ಭಕ್ತರಿಂದ ಕರೆಯಿಸಿಕೊಂಡ ಡಾ.ಶ್ರೀಶಿವಕುಮಾರಸ್ವಾಮೀಜಿಗಳಿಗೆ ಭಾರತರತ್ನ ನೀಡಬೇಕೆಂದು ಕನ್ನಡದಲ್ಲಿ ಮಾತನಾಡಿ ದೇಶದ ಗಮನ ಸೆಳೆದಿದ್ದಾರೆ. ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಸರಳ, ಸಜ್ಜನರಾಗಿರುವ ಮುದ್ದಹನುಮೇಗೌಡರನ್ನು ಜನತೆ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ.ಹಾಗಾಗಿ ಇಂದಿನಿಂದ ಮನೆ ಮನೆ ಪ್ರಚಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಪುತ್ರಿ ರಚನಾ ಮಾತನಾಡಿ, ಕಾಂಗ್ರೆಸ್ ಪಕ್ಷ ಬಡವರು, ರೈತರು, ಕಾರ್ಮಿಕರ ಪರವಾದ ಪಕ್ಷ.ಹಾಗಾಗಿ ನಮ್ಮ ತಂದೆಯವರ ಪರವಾಗಿ ಅವರ ಅಭಿಮಾನಿಯಾಗಿ ಪ್ರಚಾರಕ್ಕೆ ಇಳಿದಿದ್ದೇನೆ.ಸರಳ ಸಜ್ಜನಿಕೆಯ ಎಸ್.ಪಿ.ಮುದ್ದಹನುಮೇಗೌಡರ ಅವರ ಐದು ವರ್ಷಗಳ ತಮ್ಮ ಸಂಸದರ ಅವಧಿಯಲ್ಲಿ 15 ವರ್ಷಗಳಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಕೊಬ್ಬರಿಗೆ ಬೆಂಬಲ ಬೆಲೆ,ರೈತರ ಆತ್ಮಹತ್ಯೆ,ಮಹಾದಾಯಿ, ಮೇಕೆದಾಟು ನೀರಾವರಿ ಯೋಜನೆಗಳು ಸೇರಿದಂತೆ ಸುಮಾರು 700ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.100ಕ್ಕೂ ಹೆಚ್ಚು ಚರ್ಚೆಗಳಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಅವರು ಮತ್ತೊಮ್ಮೆ ಸಂಸತ್ತಿಗೆ ಹೋಗಿ, ಈ ಭಾಗದ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.

ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಲ್ತಾನ್ ಮೊಹಮದ್,ವೆಂಕಟೇಶಗೌಡ,ನಾಗರಾಜು, ಇಸ್ಮಾಯಿಲ್,ಮರಳೂರು ನಾರಾಯಣಪ್ಪ, ಮೆಹಬೂಬ್ ಪಾಷ, ಆಟೋ ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹೇಶ್, ಫಯಾಜ್, ಪಾಲಿಕೆ ಸದಸ್ಯರುಗಳಾದ ನಯಾಜ್,ಜೆ.ಕುಮಾರ್, ಇನಾಯತ್,ಗುರುಪ್ರಸಾದ್,ಚಿಕ್ಕಸ್ವಾಮಿ, ಮುಬೀನಾಭಾನು,ಅನಿಲ್, ಶಫೀಕ್ ಖಾಲಿದ್,ರಂಗನಾಥ್,ದೀಪಕ್‍ಗೌಡ, ನರಸೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *