ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣದತ್ತಾಂಶ ಸಂಗ್ರಹಕ್ಕಾಗಿ ಮೇ 5 ರಿಂದ ಮನೆ-ಮನೆ ಸಮೀಕ್ಷೆ

ತುಮಕೂರು : ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ಮಧ್ಯಂತರ ವರದಿಯನ್ವಯ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾಗಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಲು ಸರ್ಕಾರ ನಿರ್ದೇಶನ ನೀಡಿದ್ದು, ದತ್ತಾಂಶ ಸಂಗ್ರಹಕ್ಕಾಗಿ ಜಿಲ್ಲೆಯಲ್ಲಿ ಮೇ 5 ರಿಂದ ಮನೆ-ಮನೆ ಸಮೀಕ್ಷೆ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಬುಧವಾರ ವಿಕಾಸ ಸೌಧದಿಂದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಮೀಕ್ಷೆ ಕುರಿತು ನಡೆಸಿದ ವಿಡಿಯೋ ಸಂವಾದದ ಸಭೆಯ ನಂತರ ಜಿಲ್ಲೆಯ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ, ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಲು ಗಣತಿದಾರರನ್ನಾಗಿ ಶಿಕ್ಷಕರನ್ನು ಮಾತ್ರ ನೇಮಕ ಮಾಡಲಾಗುವುದು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಈ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಬಾರದೆಂದು ಸರ್ಕಾರ ನಿರ್ದೇಶನ ನೀಡಿದೆ. ಸಮೀಕ್ಷಾ ಕಾರ್ಯವನ್ನು ಸರ್ಕಾರದ ಅಗತ್ಯ ಕಾರ್ಯವೆಂದು ಪರಿಗಣಿಸಿ ಗಣತಿದಾರರು ಕರಾರುವಾಕ್ಕಾದ ಪ್ರಮಾಣೀಕೃತ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಸೂಚಿಸಿದರು.

3 ಹಂತದಲ್ಲಿ ಸಮೀಕ್ಷೆ :-

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಸಂಬಂಧ ಸರ್ಕಾರದ ಆದೇಶದಂತೆ ಈ ಸಮೀಕ್ಷೆಯನ್ನು ಜಿಲ್ಲೆಯಲ್ಲಿ 3 ಹಂತದಲ್ಲಿ ನಡೆಸಲಾಗುವುದು. ಮೊದಲ ಹಂತದಲ್ಲಿ ಮೇ 5 ರಿಂದ 17ರವರೆಗೆ ಗಣತಿದಾರರು ಮನೆ-ಮನೆ ಭೇಟಿ ನೀಡುವ ಮೂಲಕ ಸಮೀಕ್ಷೆ ನಡೆಸಲಿದ್ದಾರೆ. ನಂತರ 2ನೇ ಹಂತದಲ್ಲಿ ಮೇ 19 ರಿಂದ 21ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ನಡೆಸಲಾಗುವುದು ಹಾಗೂ 3ನೇ ಹಂತದಲ್ಲಿ ಮೇ 19 ರಿಂದ ಮೇ 23ರವರೆಗೆ ಆನ್‍ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಸಮೀಕ್ಷೆಯ 2ನೇ ಹಂತದಲ್ಲಿ ಪ.ಜಾತಿ ಸಮುದಾಯದವರು ಮತಗಟ್ಟೆ ಪ್ರದೇಶದಲ್ಲಿ ಗುರುತಿಸಿರುವ ವಿಶೇಷ ಶಿಬಿರಗಳಿಗೆ ತೆರಳಿ ತಮ್ಮ ಜಾತಿ ಕುರಿತು ಗಣತಿದಾರರಿಗೆ ಮಾಹಿತಿ ನೀಡಲು ಮೇ 19 ರಿಂದ 21ರವರೆಗೆ ಅವಕಾಶ ಕಲ್ಪಿಸಲಾಗುವುದು. ಮನೆ-ಮನೆ ಸಮೀಕ್ಷೆ ಹಾಗೂ ವಿಶೇಷ ಶಿಬಿರದಲ್ಲಿ ಜಾತಿಯ ಬಗ್ಗೆ ಘೋಷಣೆ ಮಾಡಿಕೊಳ್ಳದವರು 3ನೇ ಹಂತದಲ್ಲಿ ಮೇ 19 ರಿಂದ 23ರವರೆಗೆ ಆಧಾರ್ ನಂಬರ್ ಮತ್ತು ಆರ್.ಡಿ. ನಂಬರ್‍ನೊಂದಿಗೆ ಆನ್‍ಲೈನ್ ಮೂಲಕ ಘೋಷಣೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು. 

ಸಮೀಕ್ಷೆ ಕಾರ್ಯಕ್ಕಾಗಿ ಮಾಸ್ಟರ್ ಟ್ರೈನರ್‍ಗಳಿಂದ ಏಪ್ರಿಲ್ 28ರಂದು ಜಿಲ್ಲಾ ಮಟ್ಟದ ತರಬೇತಿ ಹಾಗೂ ಏಪ್ರಿಲ್ 29 ಮತ್ತು 30ರಂದು ತಾಲ್ಲೂಕು/ ಪಾಲಿಕೆ/ನಗರ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಗಣತಿದಾರರಿಗೆ ಸಹಕರಿಸಲು ಮನವಿ :-

ಪರಿಶಿಷ್ಟ ಜಾತಿಯಲ್ಲಿರುವ ಉಪ ಜಾತಿಗಳ ಸಮೀಕ್ಷೆಗಾಗಿ ಮನೆ-ಮನೆ ಭೇಟಿ ನೀಡುವ ಗಣತಿದಾರರಿಗೆ ಪರಿಶಿಷ್ಟ ಜಾತಿ ಸಮುದಾಯದವರು ತಮ್ಮ ನಿರ್ಧಿಷ್ಟವಾದ ಉಪಜಾತಿಯ ವಿವರವನ್ನು ನೀಡಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ. ಮಾತನಾಡಿ ಸಮೀಕ್ಷೆ ಕಾರ್ಯಕ್ಕೆ ಕೌಶಲ್ಯವುಳ್ಳ ಮಾಸ್ಟರ್ ಟ್ರೈನರ್‍ಗಳನ್ನು ನೇಮಕ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಪ.ಜಾತಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳ ಸಮೀಕ್ಷೆಗೆ ಹೆಚ್ಚಿನ ಗಣತಿದಾರರನ್ನು ನಿಯೋಜಿಸಬೇಕು ಎಂದು ಸಲಹೆ ನೀಡಿದರು. 

ಸಭೆಯಲ್ಲಿ ಜಿಲ್ಲೆಯ ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಸಿ. ಗೋಪಾಲ್, ಉಪ ವಿಭಾಗಧಿಕಾರಿಗಳಾದ ಗೌರವ್ ಕುಮಾರ್ ಶೆಟ್ಟಿ ಹಾಗೂ ಸಪ್ತಶ್ರೀ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *