ಮನುಷ್ಯರು ಮನುಷ್ಯರಾಗಿ ಬದುಕಲು ಅವಕಾಶ ಕಲ್ಪಿಸಿದ ವಿಶ್ವ ಮಾನವತಾವಾದಿ ಡಾ: ಬಿ.ಆರ್. ಅಂಬೇಡ್ಕರ್- ಎಡಿಸಿ

ತುಮಕೂರು : ಸಮಾಜದಲ್ಲಿ ಜಾತಿ, ಧರ್ಮಗಳ ಸಂಕೋಲೆಗಳಿಂದ ಮುಕ್ತರಾಗಿ ಸಂವಿಧಾನದ ಮೂಲಕ ಮನುಷ್ಯರು ಮನುಷ್ಯರಾಗಿ ಬದುಕಲು ಅವಕಾಶ ಕಲ್ಪಿಸಿದ ವಿಶ್ವ ಮಾನವತಾವಾದಿ ಡಾ: ಬಿ.ಆರ್. ಅಂಬೇಡ್ಕರ್ ಅವರು ನವ ಭಾರತದ ನಿರ್ಮಾಣಕ್ಕೆ ಶ್ರಮಿಸಿದವರಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಎಂಪ್ರೆಸ್ ಶಾಲಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ದಿನಾಚರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿ ಅಸ್ಪಶ್ಯತೆಯೆಂಬ ಸಾಮಾಜಿಕ ಪಿಡುಗಿನಿಂದ ಜಡ್ಡುಗಟ್ಟಿದ ಸಮಾಜವನ್ನು ಪುನರ್ ನಿರ್ಮಾಣ ಮಾಡಲು ಸಮಾಜ ಸುಧಾರಕರಾಗಿ, ಅರ್ಥಶಾಸ್ತ್ರಜ್ಞರಾಗಿ ಅಂಬೇಡ್ಕರ್ ಅವರು ತೊಡಗಿಸಿಕೊಂಡಿದ್ದನ್ನು ಯಾರೂ ಅಲ್ಲಗಳೆಯುವಂತಿಲ್ಲ.   ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ರಚಿಸಿ ಎಲ್ಲರ ಮನಸ್ಸಿನಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಅಂಬೇಡ್ಕರ್ ಅವರ ತತ್ವಾದರ್ಶಗಳು ಸಮಾಜದ ಶೋಷಿತರು, ದಮನಿತರು, ದೀನ-ದಲಿತರ ಪರವಾಗಿ ಚಿಂತಿಸುವಂತೆ ಮಾಡಿದವು. ದೇಶದ ಜನತೆ ಸಮಾನತೆಯಿಂದ ಬದುಕಲು ಮಾರ್ಗ ತೋರಿದ   ಭಾರತ ಸಂವಿಧಾನದ ಪಿತಾಮಹರೆಂದೆಸಿಕೊಂಡಿರುವ ಅಂಬೇಡ್ಕರರ ಅಸ್ಪøಶ್ಯತೆ ವಿರುದ್ಧದ ಹೋರಾಟವು  ತಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಪ್ರಶ್ನಿಸಲು ಬಡವರು, ಹಿಂದುಳಿದ ವರ್ಗಗಳಿಗೆ ಶಕ್ತಿ ನೀಡಿತು ಎಂದು ತಿಳಿಸಿದರು.


ಅನ್ಯ ದೇಶಗಳ ಭಾಷೆ, ಧರ್ಮ, ಸಂವಿಧಾನವನ್ನು ಅಧ್ಯಯನ ಮಾಡಿ ಭಾರತ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಆಳುವ ವರ್ಗ, ಪರಕೀಯರ ಕಪಿಮುಷ್ಟಿಯಲ್ಲಿದ್ದ ಅಧಿಕಾರ, ಸಂಪತ್ತು, ನ್ಯಾಯವನ್ನು ಪ್ರತಿಯೊಬ್ಬರಿಗೂ  ದಕ್ಕುವಂತೆ ಈ ಸಂವಿಧಾನ ಅವಕಾಶ ಕಲ್ಪಿಸಿದೆ.  ಸಂವಿಧಾನ ನಮಗೆ ನೀಡಿದ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ: ನಾಗಣ್ಣ ಮಾತನಾಡಿ, ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳು, ಸಾಂವಿಧಾನಿಕ ತತ್ವಗಳು ಮಹಿಳೆಯರ ಬದುಕಿನ ಘನತೆಯನ್ನು ಹೆಚ್ಚಿಸಿವೆ.  ಎಲ್ಲಾ ಜಾತಿ, ಧರ್ಮ, ವರ್ಣ, ತಾರತಮ್ಯಗಳನ್ನು ಹೋಗಲಾಡಿಸಲು ಭಾರತ ಸಂವಿಧಾನ ರಚಿಸಿ ಜನರ ಮನದಲ್ಲಿ ಮನೆ ಮಾಡಿರುವ ಅಂಬೇಡ್ಕರ್ ಅವರು ಆಧುನಿಕ ಭಾರತದ ಅವತಾರ ಪುರುಷ ಎಂದರೆ ತಪ್ಪಾಗಲಾರದು  ಎಂದು ಭಾವಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಸುಧಾಕರ್ ರೆಡ್ಡಿ ಉಪನ್ಯಾಸ ನೀಡಿದರು. 

ಚಿತ್ರದುರ್ಗ ಜಿಲ್ಲೆ ಸರ್ಕಾರಿ ಕಲಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ: ಪಿ.ಎಸ್. ಗಂಗಾಧರ ಉಪನ್ಯಾಸ ನೀಡುತ್ತಾ ಸಂವಿಧಾನವು ದೇಶದ ಜನರನ್ನು ಸಶಕ್ತಗೊಳಿಸಿದೆ. ಸಂವಿಧಾನದಿಂದ ದೊರೆತಿರುವ ಮೂಲಭೂತ ಹಕ್ಕುಗಳಿಂದ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಬೆಂಗಳೂರಿನ ಭೂಮಿ ತಾಯಿ ಕಲಾತಂಡದ ಡಾ: ನಿರ್ಮಲಾ ಮತ್ತು ಸಂಗಡಿಗರು ಪ್ರಸ್ತುತ ಪಡಿಸಿದ “ಕತ್ತಲ ಜಗತ್ತಿಗೆ ಬೆಳಕನು ನೀಡಿದ ಅರಿವೇ ಅಂಬೇಡ್ಕರ ಗುರುವೇ ಅಂಬೇಡ್ಕರ ದಿಕ್ಕು-ದಿಕ್ಕಿಗೂ ಹೊಂಗಿರಣ ಬೀರಿದ ಗುರುವೇ ಅಂಬೇಡ್ಕರ”, ಜಯಹೇ ಭಾರತ ಭಾಗ್ಯವಿಧಾತ-ಜಯಹೇ ಸಂವಿಧಾನ ಪಿತ ಸೇರಿ ಹಲವಾರು ಕ್ರಾಂತಿಗೀತೆಗಳು ಡಾ: ಬಿ.ಆರ್. ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಪರಿಚಯಿಸಿದವು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ರಾಜೇಶ್ವರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ತ್ಯಾಗರಾಜು, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಬ್ಬೀರ್ ಅಹಮ್ಮದ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಭಾರತ ಸಂವಿಧಾನ ದಿನಾಚರಣೆ ಅಂಗವಾಗಿ ಮಹಾನಗರ ಪಾಲಿಕೆಯ ಟೌನ್ ಹಾಲ್ ವೃತ್ತದಿಂದ ಚರ್ಚ್ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಎಂಪ್ರೆಸ್ ಕಾಲೇಜು ಆವರಣದವರೆಗೆ ಡಾ|| ಬಿ.ಆರ್. ಅಂಬೇಡ್ಕರ್ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *