ಡಾ.ಕಮಲ ಹಂಪನಾ ಭಾರತೀಯ ಮೂಲಬೇರಿನ ಬಹುತ್ವ ಪ್ರತಿಪಾದಕಿಯಾಗಿದ್ದರು- ಡಾ.ಡಿ.ವಿ.ಪರಮ ಶಿವಮೂರ್ತಿ

ತುಮಕೂರು:ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೆಲಸ ಮಾಡಿದ್ದ ಪ್ರೊ.ಕಮಲ ಹಂಪನಾ,ಭಾರತೀಯ ಸಂಸ್ಕøತಿಯ ಮೂಲಬೇರಾದ ಬಹುತ್ವದ ಪ್ರತಿಪಾದಕಿಯಾಗಿದ್ದರು ಎಂದು ಹಂಪಿ ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮ ಶಿವಮೂರ್ತಿ ತಿಳಿಸಿದ್ದಾರೆ.

ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ವತಿಯಿಂದ ಅಯೋಜಿಸಿದ್ದ ನಾಡೋಜ ಪ್ರೊ.ಕಮಲ ಹಂಪನಾ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಅವರು,ಓರ್ವ ಸಂಶೋಧಕಿಯಾಗಿ, ಕಥೆಗಾರತಿಯಾಗಿ, ವಿಮರ್ಶಕಿಯಾಗಿ, ವೈಚಾರಿಕ ಲೇಖಕಿಯಾಗಿ ಅವರ ಬರಹಗಳಲ್ಲಿ ಬಹುತ್ವದ ಅಂಶಗಳನ್ನು ಕಾಣಬಹುದು.ಅವರ ಸಾಹಿತ್ಯ ಪ್ರಮುಖ ಧನಾತ್ಮಕ ಅಂಶ ಇದಾಗಿದೆ ಎಂದರು.

ಪ್ರೊ.ಕಮಲ ಹಂಪನಾ ಅವರ ಕೃತಿಗಳಲ್ಲಿ ವಿಶಾಲ ದೃಷ್ಟಿಕೋನ,ಸ್ವಾರ್ಥ ಮೀರಿದ ಪ್ರೀತಿಯನ್ನು ಕಾಣಬಹುದಾಗಿದೆ.ಅವರು ಸಾಹಿತ್ಯದ ಮೂಲಕ ಕ್ರಾಂತಿ ಮಾಡದಿದ್ದರೂ,ತುಂಬಿ ಹರಿಯುವ ನದಿಯೊಂದು, ತನ್ನೊಳಗೆ ಎಲ್ಲವನ್ನು ಸೆಳೆದುಕೊಳ್ಳುವಂತೆ ತನ್ನ ತೆಕ್ಕಗೆ ತೆಗೆದುಕೊಂಡಿದ್ದರು.ಸಂಶೋಧಕಿಯಾಗಿ ಕ್ಷೇತ್ರ ಕಾರ್ಯ ನಡೆಸುವುದು, ಅಕರಗಳ ಸಂಗ್ರಹ ಇವು ಸವಾಲಿನ ಕೆಲಸ.ಪಂಪನಿಂದ ಹಂಪನಾವರೆಗೆ ಸಾಹಿತ್ಯದಲ್ಲಿರುವ ಬಹುತ್ವದ ಬಗ್ಗೆ ತಮ್ಮ ಬಹುತ್ವ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ.ಮಹಿಳಾ ಚಳುವಳಿಗಳು ಪ್ರಶ್ನೆಗಳನ್ನು ಎತ್ತಿದರೆ, ಕಮಲ ಹಂಪನಾ ಅವರು ಮಹಿಳಾ ಅಧ್ಯಯನದ ಮೂಲಕ ಅವುಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದರು ಎಂದು ಡಾ.ಡಿ.ವಿ.ಪರಮಶಿವಮೂರ್ತಿ ನುಡಿದರು.

ಜೈನ ಸಾಹಿತ್ಯದ ಮೊದಲ ಸಂಶೋಧಕಿಯಾಗಿ ಕಾಲಿರಿಸಿದ್ದು ಕಮಲ ಹಂಪನಾ. ತಮ್ಮ ಅನೇಕ ಕೃತಿಗಳಲ್ಲಿ ತಾವು ಬೆಳೆದು ಬಂದ ಪರಿಸರ, ತಮ್ಮ ಬದುಕಿನ ಮೇಲೆ ಸಿದ್ದಗಂಗಾ ಮಠದ ಪ್ರಭಾವ ಕುರಿತು ಸಾಕಷ್ಟು ಬರೆದಿದ್ದಾರೆ. ಇವರ ಅಗಲಿಕೆ ಕನ್ನಡ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರ ಬಹುತ್ವದ ಪ್ರತಿಪಾದಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ಶಾಂತಲ ರಾಜಣ್ಣ ಮಾತನಾಡಿ,ಪ್ರೊ.ಕಮಲ ಹಂಪನಾ ಸಂಬಂಧದಲ್ಲಿ ನನ್ನಗೆ ಚಿಕ್ಕಮ್ಮನಾಗಬೇಕು.ಚಿಕ್ಕಂದಿನಿಂದಲೂ ಅವರನ್ನು ಬಲ್ಲೆ,ಮಹಿಳೆಯರನ್ನು ಪ್ರೋತ್ಸಾಹಿಸುವ ಗುಣ ಅವರಲ್ಲಿ ಇತ್ತು.ಅವರ ಸಾಂಸಾರಿಕ ಕಲ್ಪನೆ ಆಗಾಧವಾದುದ್ದು, ಬರೆದಂತೆ ಬದುಕಿದವರು ಕಮಲ ಹಂಪನಾ ಎಂದರು.

ನಾಡೋಜ ಹಂಪಾ ನಾಗರಾಜಯ್ಯ ಮಾತನಾಡಿ,ತುಮಕೂರು ನನ್ನ ಬದುಕಿಗೆ ಮಹತ್ವದ ತಿರುವುಕೊಟ್ಟ ಸ್ಥಳ:1953ರಲ್ಲಿ ಕಮಲ ಅವರ ಸ್ನೇಹದೊಂದಿಗೆ ಆರಂಭಗೊಂಡು 63 ವರ್ಷಗಳ ದಾಂಪತ್ಯ ಜೀವನ ಅವಿಸ್ಮರಣೀಯ.ಕೌಟುಂಬಿಕ ಕೆಲಸಗಳ ಜೊತೆಗೆ, ವೃತ್ತಿಯಲ್ಲಿಯೂ ಒಳ್ಳೆಯ ಹೆಸರುಗಳಿಸಿದ್ದರು.ಮಹಿಳಾ ವಿವಿ ಸ್ಥಾಪನೆ, ಅತಿಮೊಬ್ಬೆ ಪ್ರಶಸ್ತಿ ಸ್ಥಾಪನೆಯ ಹಿಂದೆ ಕಮಲ ಅವರ ಹೋರಾಟವಿದೆ.ಬದುಕಿನುದ್ದಕ್ಕೂ ದ್ವನಿ ಇಲ್ಲದವರ ಮುಖವಾಣಿಯಾಗಿ ಬದುಕಿದ್ದ ಕಮಲ,ಬದುಕು ಮತ್ತು ಬರಹದ ಮೂಲಕ ಘನತೆಯನ್ನು ಕಾಪಾಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.ಇಂದು ತುಮಕೂರಿನ ಈ ನುಡಿನಮನ ತವರು ಮನೆಯವರು ನೀಡುವ ಉಡುಗೊರೆಯಂತಿದೆ ಎಂದರು.

ಕಸಾಪ ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ,ಪ್ರೊ.ಕಮಲ ಹಂಪನಾ ನನ್ನಂತಹ ಅನೇಕ ಲೇಖಕಿಯರಿಗೆ ಉತ್ತಮ ಮಾರ್ಗದರ್ಶಕಿಯಾಗಿದ್ದಾರೆ.ಎಲ್ಲರನ್ನು ಪ್ರೀತಿಸುವ ಅವರ ಗುಣ ಮೆಚ್ಚುವಂತಹದ್ದು,ತುಮಕೂರಿನಲ್ಲಿ ನಡೆದ ಮೊದಲ ಕನ್ನಡ ಲೇಖಕಿಯರ ಸಮ್ಮೇಳನದ ಅಧ್ಯಕ್ಷರಾಗಿ ನಮಗೆ ಮಾರ್ಗದರ್ಶನ ನೀಡಿ, ಯಶಸ್ವಿಯಾಗಲು ಕಾರಣರಾ ದವರು.ಅವರ ವಚನಗಳು ಡಿವಿಜಿಯವರ ಮಂಕುತಿಮ್ಮನ ಖಗ್ಗಕ್ಕೆ ಸಮನಾಗಿ ನಿಲ್ಲಬಲ ವಚನಗಳಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ವಹಿಸಿದ್ದರು. ವೇದಿಕೆಯಲ್ಲಿ ಜೈನ ಸಮಾಜದ ನಾಗರಾಜ್ ಜೈನ್, ಬಾಹುಬಲಿ ಬಾಬು,ಕಸಾಪ ಕಾರ್ಯದರ್ಶಿಗಳಾದ ಡಾ.ಡಿ.ಎನ್.ಯೋಗೀಶ್ವರಪ್ಪ, ಕಂಟಲಗೆರೆ ಸಣ್ಣಹೊನ್ನಯ್ಯ,ಮಹದೇವಪ್ಪ, ಉಮಾಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *