
ತುಮಕೂರು : ತುಮಕೂರು ಜಿಲ್ಲೆಯ ದಲಿತ ಸಂಘರ್ಷ ಸಮಿತಿಯ ಸಂಚಾಲರು ಹಾಗೂ ದಲಿತ ಹೋರಾಟಗಾರ ನಾಗರಾಜು ಬಂದಕುಂಟೆ (70 ವರ್ಷ) ಇಂದು ಬೆಳಿಗ್ಗೆ 9 ಗಂಟೆಯಲ್ಲಿ ನಿಧನ ಹೊಂದಿದ್ದಾರೆ.
ದಸಂಸ ಹೋರಾಟದ ಸಂದರ್ಭದಲ್ಲಿ ಗೂಳೂರು ಸಮೀಪದ ಹೊನ್ನೇನಹಳ್ಳಿ ಭೂ ಹೋರಾಟದಲ್ಲಿ ನಾಗರಾಜು ಅವರನ್ನು ಹೊಡೆದು ಸುಡಲು ಹುಲ್ಲು ಹಾಕಿ ಮುಚ್ಚಿ ಬೆಂಕಿ ಹಚ್ಚಬೇಕು ಅನ್ನುವ ವೇಳೆಯಲ್ಲಿ ದಸಂಸನ ಹೋರಾಟಗಾರರು, ಮಂಡಿಪೇಟೆ ಮಂಡಿ ಕೂಲಿಕಾರರು, ಹಮಾಲಿಗಳು, ಎನ್.ಆರ್.ಕಾಲೋನಿಯ ದಸಂಸ ಮುಖಂಡರು ಲಾರಿಯಲ್ಲಿ ಬಂದು ಉಳಿಸಿದ್ದರು.
ದಸಂಸ ದಿಂದ ಹಲವಾರು ಭೂ ಹೋರಾಟ, ಅಸ್ಪೃಶ್ಯ ವಿರೋಧಿ, ಹೆಂಡಬೇಡ ಶಾಲೆಬೇಕು ಹೋರಾಟದಲ್ಲಿ ರಂಗಸ್ವಾಮಿ ಬೆಲ್ಲದಮಡು ಸೇರಿ ಹೋರಾಟವನ್ನು ನಡೆಸಿದ್ದರು. ಹೇಮಾವತಿ ಯ ಹೋರಾಟದ ‘ಕಾವೇರಿ ಉಳಿಯಲಿ ಹೇಮಾವತಿ ಹರಿಯಲಿ’ ನೀರಾವರಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇವರು ಕುಣಿಗಲ್ ತಾಲ್ಲೂಕಿನ ಯಲ್ಲಿಯೂರು ಮತ್ತು ಕಗ್ಗೆರೆಯಲ್ಲಿ ಅನುದಾನಿತ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕರಾಗಿದ್ದರು, ಮುಖ್ಯ ಶಿಕ್ಷಕರಾಗಲು ಡಿಡಿಪಿಐ ಮತ್ತು ಶಿಕ್ಷಣ ಇಲಾಖೆಯ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡಿದರೂ ಮುಖ್ಯ ಶಿಕ್ಷಕ ಹುದ್ದೆ ಧಕ್ಕಿಸಿಕೊಳ್ಳಲಾಗಲಿಲ್ಲ.
ಬಂದಕುಂಟೆ ನಾಗರಾಜು ಅವರು ನಿವೃತ್ತಿ ಯ ನಂತರ ‘ಬಿತ್ತನೆ ಬೀಜ’ ಎಂಬ ತಮ್ಮ ಹೋರಾಟದ ಬದುಕಿನ ಪುಸ್ತಕವನ್ನು ಬರೆದು ಪ್ರಕಟಿಸಿದ್ದರು.
ಕಳೆದ 9 ವರ್ಷಗಳ ಹಿಂದೆ ಪಾಶ್ರ್ವವಾಯು ಗೆ ಒಳಗಾಗಿ ದ್ದ ನಾಗರಾಜು ಅವರು, ಚೇತರಿಸಿಕೊಂಡಿದ್ದರು, ಇಂದು ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಹೃದಯಾಘಾತದಿಂದ ಮೃತ ಪಟ್ಟಿ ರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಪತ್ನಿ, ಮೂವರು ಗಂಡು ಮಕ್ಕಳನ್ನ ಅಗಲಿದ್ದಾರೆ.

ಗೆಳೆಯರಾದ ಕೆ.ದೊರೈರಾಜ್, ನರಸೀಯಪ್ಪ, ನರಸಿಂಹಯ್ಯ, ಕುಂದೂರು ತಿಮ್ಮಯ್ಯ, ಹೆಚ್.ಕೆಂಚಮಾರಯ್ಯ, ಸಾಹಿತಿಗಳಾದ ತುಂಬಾಡಿ ರಾಮಯ್ಯ, ವಡ್ಡಗೆರೆ ನಾಗರಾಜಯ್ಯ, ಡಾ.ಡಿ.ಅರಂಧತಿ, ಡಾ.ಹೆಚ್.ವಿ ರಂಗಸ್ವಾಮಿ, ಚರಕ ಆಸ್ಪತ್ರೆಯ ಡಾ.ಬಸವರಾಜು, ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರಾದ ವೈ.ಕೆ.ಬಾಲಕೃಷ್ಣಪ್ಪ , ಜಿ.ಪಂ.ಮಾಜಿ ಅಧ್ಯಕ್ಷರಾದ ವೈ.ಎಚ್.ಹುಚ್ಚಯ್ಯ, ಡ್ಯಾಗೇರಹಳ್ಳಿ ವಿರೂಪಾಕ್ಷ, ಎಂ.ಸಿ.ನರಸಿಂಹಮೂರ್ತಿ ಮುಂತಾದವರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ, ಒಂದು ನಿಮಿಷದ ಮೌನ ಆಚರಿಸಿದರು.
ಮೃತರ ಅಂತ್ಯ ಸಂಸ್ಕಾರ ಶಿರಾ ತಾಲ್ಲೂಕು ಬಂದಕುಂಟೆಯಲ್ಲಿ ಸಂಜೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.