ತುಮಕೂರು: ವೈಜ್ಞಾನಿಕ ಮನೋಭಾವ ರೂಪಿಸಿಕೊಂಡಾಗ ಅಭಿವೃದ್ಧಿಯ ಹೊಸ ಪಥವೇ ನಿರ್ಮಾಣವಾಗಲಿದೆ. ಸಂಶೋಧನೆಯ ಹೆಸರಿನಲ್ಲಿ ಪರಿಸರ ನಾಶಮಾಡದೆ ಮನುಕುಲದ ಪ್ರಜ್ಞೆಯ ಸಂಕೇತವಾಗಿ ಪರಿಸರ ಕಾಪಾಡಬೇಕು,ಭೂಮಿಯ ಒಡಲು ಶಾಂತಿಯನ್ನು ಬಯಸುತ್ತದೆಯೇ ಹೊರತು ವಿನಾಶವನ್ನಲ್ಲ ಎಂದು ಭೂಗರ್ಭಶಾಸ್ತ್ರಜ್ಞ ಮತ್ತು ವಿಜ್ಞಾನ ಚಿಂತಕ ನಾಗೇಶ ಹೆಗಡೆ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗವು ಬುಧವಾರ ಆಯೋಜಿಸಿದ್ದ ‘ಇರುವುದೊಂದೆ ಭೂಮಿ-ಭವಿಷ್ಯದ ಹಿತಕ್ಕಾಗಿ ವಿಜ್ಞಾನ’ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಭೂಮಿಯೊಡಲ ತಲ್ಲಣಗಳು ಹಾಗೂ ಮನುಷ್ಯ ಜಗತ್ತು’ ವಿಚಾರದ ಕುರಿತು ವಿಶೇಷ ಉಪನ್ಯಾಸ ನೀಡಿ, ಬಂಡವಾಳಶಾಹಿ ಅರ್ಥವ್ಯವಸ್ಥೆಯೇ ಬಿಸಿ ಪ್ರಳಯಕ್ಕೆ ಕಾರಣವಾಗಿದೆ. ಜಾಗತಿಕ ತಾಪಮಾನದ ಏರಿಳಿತವನ್ನು ಹವಾಮಾನ ತಗ್ಗಿಸುವಿಕೆಯ ಮುಖಾಂತರ ತಡೆಯಹುದು. ಭೂಮಿಯ ಒಡಲು ಶಾಂತಿಯನ್ನು ಬಯಸುತ್ತದೆಯೇ ಹೊರತು ವಿನಾಶವನ್ನಲ್ಲ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ತಂತ್ರಜ್ಞಾನ ಆಧುನಿಕಗೊಂಡ ಮೇಲೆ ಪರಿಸರದಿಂದ ನಾವೆಲ್ಲರೂ ದೂರ ಉಳಿದಿದ್ದೇವೆ. ಪರಿಸರ ಚಿಂತಕರ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಂಡು, ಪರಿಸರ ಸಂರಕ್ಷಣೆಗಾಗಿ ಆ ಉತ್ತಮ ಚಿಂತನೆಗಳಿಂದ ಉತ್ಕøಷ್ಟ ಜ್ಞಾನ ಪಡೆದಾಗ ಅಭಿವೃದ್ಧಿ ಸಾಧ್ಯ. ರಾಸಾಯನಿಕ ಬಳಸದೆ, ಪರಿಸರದ ಜೊತೆ ಸಾಗಿದರೆ ಪರಿಸರ ಪ್ರಜ್ಞೆ ಬರುವುದು ಖಂಡಿತ ಎಂದರು.
ಪರಿಸರ ತಜ್ಞ ಡಾ. ಕೇಶವ ಎಚ್. ಕೊರ್ಸೆ ‘ಜೀವವೈವಿಧ್ಯ ಸಂರಕ್ಷಣೆ ಮತ್ತು ನಮ್ಮ ಬದುಕು’ ವಿಚಾರದ ಕುರಿತು ಮಾತನಾಡಿ, ವಿಜ್ಞಾನವೆಂದರೆ ದೃಷ್ಟಿಕೋನ. ವಿಜ್ಞಾನಕ್ಕೆ ವಿವೇಕದ ಅರಿವನ್ನು ತುಂಬಿಸಿದಾಗ ಮಾತ್ರ ಭ್ರಮಾ ಲೋಕದಿಂದ ಹೊರಬಂದು ವಿವೇಕಿಗಳಾಗಿ ನಮ್ಮ ಪರಿಸರ ಸಂರಕ್ಷಿಸಬಹುದು ಎಂದರು.
ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ. ಯತಿರಾಜು ‘ಪರಿಸರದ ಸ್ವಾಸ್ಥ್ಯ: ವಿಜ್ಞಾನ ತಂತ್ರಜ್ಞಾನದ ಪರಿಣಾಮ’ ಕುರಿತು ಮಾತನಾಡಿದರು.
ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ. ಶೇಟ್ ಮಾತನಾಡಿ, ವಿಜ್ಞಾನದಿಂದ ಬರುವ ಸಕಾರಾತ್ಮಕ ಅಂಶಗಳನಷ್ಟೇ ಸ್ವೀಕರಿಸೋಣ ಎಂದರು.
ತುಮಕೂರು ವಿವಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಗೀತಾ ವಸಂತ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಆಶಾ ರಾಣಿ ವಂದಿಸಿದರು.