ತುಮಕೂರು : ಮಹಿಳೆಯರಿಗೆ ಹಿಂದಿನಿಂದ ಇದ್ದ ಕೆಲವು ಕಟ್ಟುಪಾಡುಗಳು ಸಡಿಲಗೊಂಡಿರುವುದರಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದು ಜನಶಿಕ್ಷಣ ಸಂಸ್ಥೆ ಉಪಾಧ್ಯಕ್ಷರಾದ ರೇಣುಮುಕುಂದ ಅಭಿಪ್ರಾಯಪಟ್ಟರು.
ನಗರದ ಸಿದ್ದಗಂಗಾ ಜನಶಿಕ್ಷಣ ಸಂಸ್ಥೆ ವತಿಯಿಂದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಿವಿಧ ತರಬೇತಿ ಸಂಪನ್ಮೂಲ ವ್ಯಕ್ತಿಗಳ ಬಲವರ್ಧನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರ ಸಬಲೀಕರಣದಿಂದಾಗಿ ಇಂದು ಮಹಿಳೆ ನಾನಾ ರಂಗಗಳಲ್ಲಿ ದುಡಿಯಲು ಸಾಧ್ಯವಾಗಿದೆ. ಆಯ್ಕೆಯ ಸ್ವಾತಂತ್ರ್ಯ ಮತ್ತು ದುಡಿಮೆಯ ಅವಕಾಶ ಇರುವ ಕಾರಣ ಮಹಿಳೆ ಮನೆಯ ಆಚೆಯೂ ದುಡಿಯುವಂತಾಗಿದೆ. ಇದರಿಂದ ಕುಟುಂಬಗಳು ಸದೃಢವಾಗಿ ಆರ್ಥಿಕ ಚೇತರಿಕೆ ಕಾಣುತ್ತಿವೆ. ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳಿಗೆ ಈಗಾಗಲೇ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಒಯ ದೃಷ್ಟಿಕೋನವಿದ್ದು ಅಸಹಾಯಕರಿಗೆ, ಕಲಿಯುವ ಆಸಕ್ತಿ ಇರುವ ಮಹಿಳೆಯರಿಗೆ ನೆರವಾಗಲಿ ಎಂದು ಆಶಿಸಿದರು.
ಮನುಷ್ಯರಾಗಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಬೇಕು ಎಂಬ ಛಲ ಇರಬೇಕು. ಆದರೆ ಹೀಗೆ ಸಾಧಿಸುವ ಛಲದಲ್ಲಿ ಇನ್ನೊಬ್ಬರಿಗೆ ತೊಂದರೆ ಕೊಡಬಾರದು. ನಾವು ದುಡಿಯುತ್ತಾ ನಮ್ಮ ಕುಟುಂಬಗಳನ್ನು ಉತ್ತಮವಾಗಿ ಇಡುವ ಹಾಗೆಯೇ ಇತರರನ್ನು ಪ್ರೀತಿಸುವ ಮನೋಭಾವ ಮೂಡಿಸಿಕೊಳ್ಳಬೇಕು ಎಂದರು.
ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಕೆ.ಎನ್. ವಾದಿರಾಜ್ ರವರು ಮಾತನಾಡಿ ನಿರ್ದಿಷ್ಟ ಗುರಿಯೊಂದಿಗೆ ಕಲಿಕೆಯಲ್ಲಿ ತೊಡಗಿದರೆ ಯಾವುದೂ ಅಸಾಧ್ಯವಲ್ಲ. ಇಲ್ಲಿ ಕಲಿತ ಮಹಿಳೆಯರೇ ತಮ್ಮ ತಮ್ಮ ಊರುಗಳಲ್ಲಿ ಸಾಧಕರಾಗಿರುವುದನ್ನು ನೋಡಿದರೆ ಹೆಮ್ಮೆಯೆನಿಸುತ್ತದೆ. ಇದಕ್ಕೆ ಮನಸ್ಸು ಮುಖ್ಯ ಎಂದರು.
ಸಮಾಜದಲ್ಲಿ ನಾವು ಏನೇ ಬದಲಾವಣೆ ಹೊಂದಬೇಕೆಂದರೂ ನಿರಂತರ ಕಲಿಕೆಯಿಂದ ಮಾತ್ರ ಸಾಧ್ಯ. ಅದಕ್ಕಾಗಿ ನಮ್ಮ ಆರೋಗ್ಯ ಮತ್ತು ಮನಸ್ಸನ್ನು ಸದಾ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಯೋಚನೆಗಳನ್ನು ಅಭಿವ್ಯಕ್ತಗೊಳಿಸುವ ಅವಕಾಶಗಳು ಸಿಗಬೇಕು ಎಂದರು.
ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಆರ್.ಎಚ್. ಸುಕನ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳೆಯರಿಗೆ ಕೌಶಲ್ಯಾಧಾರಿತ ವೃತ್ತಿ ತರಬೇತಿ ನೀಡುವ ಮೂಲಕ ಅವರಿಗೆ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಂಸ್ಥೆ ಸಹಕಾರಿಯಾಗಿದೆ. ಕಡಿಮೆ ಸೌಲಭ್ಯಗಳ ನಡುವೆಯೂ ತರಬೇತಿ ಪಡೆದು ಸಮಾಜದಲ್ಲಿ ಒಂದು ಉದ್ಯೋಗ ರೂಪಿಸಿಕೊಂಡು ನಾಲ್ಕಾರು ಮಹಿಳೆಯರಿಗೆ ತರಬೇತಿಕೊಡುವ ಅವರನ್ನೂ ಮೇಲೆತ್ತುವ ಕಾರ್ಯವನ್ನು ಇಲ್ಲಿ ಕಲಿತವರು ಮಾಡುತ್ತಿರುವುದು ಅತ್ಯಂತ ಸಂತಸ ತರಿಸಿದೆ. ಈವರೆಗೆ ಒಟ್ಟು 1,80,000 ಮಹಿಳೆಯರು ತರಬೇತಿ ಪಡೆದಿದ್ದು ಅದರಲ್ಲಿ ಸಾಕಷ್ಟು ಮಂದಿ ಸ್ವ ಉದ್ಯೋಗ ಕೈಗೊಂಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ ಇಂದಿನ ದಿನಮಾನಗಳಲ್ಲಿ ಸಾಮಾಜಿಕವಾಗಿ ಹಲವು ಸವಾಲುಗಳು ಎದುರಾಗುತ್ತಿದ್ದು ಇವುಗಳನ್ನು ದಿಟ್ಟವಾಗಿ ಎದುರಿಸಲು ಸಂಘಟನಾತ್ಮಕವಾಗಿ ಭಾಗವಹಿಸುವಿಕೆ ಮುಖ್ಯವಾಗುತ್ತದೆ. ಯಾರು ಸಮಾಜಮುಖಿಯಾಗಿ ತೆರೆದುಕೊಂಡು ಬದುಕುತ್ತಾರೋ ಅವರಿಗೆ ಅವಕಾಶಗಳೂ ಸಿಗುತ್ತವೆ. ಈ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳ ಜವಾಬ್ದಾರಿ ಹೆಚ್ಚಿದ್ದು ಆರ್ಥಿಕ ಪ್ರಗತಿಯ ಜೊತೆಗೆ ಸಾಮಾಜಿಕ ಚಿಂತನೆಗಳನ್ನೂ ಮೈಗೂಡಿಸಿಕೊಳ್ಳಲು ಮುಂದಾಗಬೇಕು ಎಂದರು.
ಜನಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಶೈಲಜಾ ವಿಠ್ಠಲ್ ಮಾತನಾಡಿ ತಾವು ಕಲಿತು ಇತರರರಿಗೆ ಕಲಿಸುವ ಕಾಯಕ ನಮಗೊದಗಿದ ಒಂದು ಅವಕಾಶ ಎಂದೇ ಭಾವಿಸಬೇಕು. ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲು ಮಾದರಿಯಾಗುವ ಇಂತಹ ಬಲವರ್ಧನೆ ಕಾರ್ಯಕ್ರಮಗಳು ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಲಿ ಎಂದು ಆಶಿಸಿದರು.
ಸಂಪನ್ಮೂಲ ವ್ಯಕ್ತಿಗಳಾದಪುನಿತ್, ರಮ್ಯ ಡಿ.ಆರ್, ಮಾತನಾಡಿದರು. ಸಹಾಯಕ ಕಾರ್ಯಕ್ರಮಾಧಿಕಾರಿ ರಾಮಕೃಷ್ಣಯ್ಯ ಕಾರ್ಯಕ್ರಮ ನಿರೂಪಿಸಿದರು.. ಸರೋಜಮ್ಮ ವಂದಿಸಿದರು.