ತುಮಕೂರು : ಇಂದು ಸಂವಿಧಾನಾತ್ಮಕ ಹಕ್ಕು ಮತ್ತು ಕರ್ತವ್ಯ ಗಳಲ್ಲಿ ಒಂದಾಗಿರುವ ಶಿಕ್ಷಣ ಹಿಂದೆ , ಮೇಲ್ವರ್ಗದ ಗಂಡು ಮಕ್ಕಳಿಗೆ ಮಾತ್ರ ಸಿಗ್ತಾ ಇತ್ತು .ಅಂಥಹ ದಿನಗಳಲ್ಲಿ ಹೆಣ್ಣುಮಕ್ಕಳ ,ಶೂದ್ರರ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಫುಲೆ ದಂಪತಿಗಳು ಎಂದು ಲೇಖಕಿ ಉಮಾದೇವಿ ಗ್ಯಾರಳ್ಳ ರವರು ತಿಳಿಸಿದರು.
ಕರ್ನಾಟಕ ಲೇಖಕಿಯರ ಸಂಘ ,ತುಮಕೂರು ಜಿಲ್ಲಾ ಶಾಖೆಯು , ತುಮಕೂರು ವಿ.ವಿ.ಕಲಾ ಕಾಲೇಜು ಸ್ನಾತಕ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ
ಸಾವಿತ್ರಿ ಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮ ದಲ್ಲಿ ಮಾತನಾಡುತ್ತಾ ಅವರು ,” ಇಂದು ಕಲ್ಪನಾ ಚಾವ್ಲಾ ,ಸುನೀತಾ ವಿಲಿಯಂ ರಂಥಹ ಹೆಣ್ಣುಮಕ್ಕಳು ಗಗನಯಾತ್ರಿಗಳಾಗಲು ಸಾಧ್ಯವಾಗಿದ್ದು ಶಿಕ್ಷಣದಿಂದ .
ರೇಣುಕಾ ಪೂಜಾರಿ ರವರು ಮೊದಲ ಟ್ರಾನ್ಸ್ ಜೆಂಡರ್ ಅಧ್ಯಾಪಕಿ ಆಗಲು ಸಾಧ್ಯವಾಗಿದ್ದು ಶಿಕ್ಷಣದಿಂದ .ಶಿಕ್ಷಣದ ಮಹತ್ವ ಅರಿತಿದ್ದ ಜ್ಯೋತಿ ಬಾ ಫುಲೆ ರವರು ತಮ್ಮ ಪತ್ನಿ ಸಾವಿತ್ರಿ ಬಾಯಿ ಫುಲೆ ರವರಿಗೆ ಅಕ್ಷರ ಕಲಿಸಿದರು.
13 ವರ್ಷದ ಜ್ಯೋತಿ ಬಾ ಫುಲೆ ರವರನ್ನು ವಿವಾಹವಾದಾಗ ಸಾವಿತ್ರಿ ಬಾಯಿ ಫುಲೆರವರಿಗೆ ಕೇವಲ 9 ವರ್ಷ .ತಮ್ಮ ಪತಿಯಿಂದ ಅಕ್ಷರ ಕಲಿತ ಅವರು , ಅವರ ಪ್ರೋತ್ಸಾಹದಿಂದ ಶಿಕ್ಷಕ ತರಬೇತಿ ಪಡೆದರು.
1848 ರಲ್ಲಿ ಬಾಲಿಕಾ ಶಾಲೆಯನ್ನು ಪ್ರಪ್ರಥಮ ವಾಗಿ ತೆರೆದರು . ಅವರು ಶಾಲೆಗೆ ಹೋಗುವಾಗ ದಾರಿಯಲ್ಲಿ ಪಟ್ಟಭದ್ರ ಹಿತಾಸಕ್ತಿಯವರು ಅವರನ್ನು ಅಡ್ಡಗಟ್ಟಿ ತೊಂದರೆ ಕೊಟ್ಟರು ,ನಿಂದಿಸಿದರು .ಸಗಣಿ ಎರಚಿದರು .ಅದರೆ ಸಾವಿತ್ರಿ ಬಾಯಿ ಫುಲೆ ರವರು ಹಿಂಜರಿಯಲಿಲ್ಲ
ಹೆಣ್ಣು ಮಕ್ಕಳಿಗೆ ,ಹಿಂದುಳಿದವರಿಗೆ ,ಶೋಷಿತರಿಗೆ ಶಿಕ್ಷಣ ಕೊಡುವುದು ಅವರ ಗುರಿಯಾಗಿತ್ತು.1848 ರಿಂದ 1852 ರ ಅವಧಿಯಲ್ಲಿ ಅವರು 18 ಶಾಲೆಗಳನ್ನು ತೆರೆದರು.ಇವರ ಶಾಲೆಗೆ ಬ್ರಿಟಿಷ್ ಅಧಿಕಾರಿ ಭೇಟಿ ನೀಡಿ ಅಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದನ್ನು ಹೊಗಳಿದರು .1852 ರಲ್ಲಿ ಅವರಿಗೆ ನಾಗರೀಕ ಸನ್ಮಾನ ಮಾಡಿದರು .
ಸಾಮಾಜಿಕ ಹೋಗಲಾಡಿಸಲು ಸತ್ಯ ಶೋಧಕ ಸಮಾಜ ಸ್ಥಾಪಿಸಿದರು .ಬಾಲ್ಯ ವಿವಾಹ ನಿಷೇಧ ,ವಿಧವಾ ವಿವಾಹಗಳಿಗೆ ಪ್ರೋತ್ಸಾಹ ನೀಡಿದರು.ಸರಳ ವಿವಾಹಗಳನ್ನು ಮಾಡಿಸಿದರು.ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿಯರಾದ ವಿಧವೆಯರು ಪ್ರಾಣಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಪ್ರಸೂತಿ ಗೃಹಗಳನ್ನೂ ,ವಿಧವೆಯರ ಮಕ್ಕಳಿಗಾಗಿಯೇ ಶಿಶು ಪಾಲನಾ ಕೇಂದ್ರಗಳನ್ನು ತೆರೆದರು.ವಿಧವೆಯೊಬ್ಬರ ಮಗನನ್ನು ದತ್ತು ಪಡೆದು ವಿದ್ಯಾಭ್ಯಾಸ ನೀಡಿ ಡಾಕ್ಟರ್
ಮಾಡಿಸಿದರು .
ಮಹಾರಾಷ್ಟ್ರದ ಲ್ಲಿ ಕ್ಷಾಮ ಬಂದಾಗ ನೀರಿನ ,ಊಟದ ವ್ಯವಸ್ಥೆ ಮಾಡಿದರು .ಜ್ಯೋತಿ ಬಾ ರವರನ್ನು ,ಗಾಂಧೀಜಿ ಯವರು ನಿಜವಾದ ಮಹಾತ್ಮ ಎಂದು ಕರೆದರು.
ಅಂಬೇಡ್ಕರ್ ರವರು ,ಫುಲೆರವರು ಮತ್ತು ಕಬೀರರು ತಮಗೆ ಮಾದರಿ ಎಂದಿರುವರು.ದಲಿತ ಪದ ಮೊದಲು ಬಳಸಿದ್ದು ಜ್ಯೋತಿ ಬಾ ಫುಲೆ ರವರು ” ಎಂದು ಅವರು ತಿಳಿಸಿದರು.
ಕಲೇಸಂ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಮಾತನಾಡುತ್ತಾ ಸಾವಿತ್ರಿ ಬಾಯಿ ಫುಲೆ ರವರು ಎಲ್ಲಾ ಜಾತಿ ವರ್ಗದ ಮಹಿಳೆಯರನ್ನು ಒಗ್ಗೂಡಿಸಿ ಮಹಿಳಾ ಮಂಡಲ ಗಳನ್ನು ರಚಿಸಿದರು ,ಕಾರ್ಮಿಕರಿಗಾಗಿ ಕೃಷಿಕರಿಗಾಗಿ ರಾತ್ರಿ ಶಾಲೆಗಳನ್ನು ತೆರೆದರು . ್ಷೌರಿಕರನ್ನು ಒಗ್ಗೂಡಿಸಿ ವಿಧವೆಯರ ತಲೆ ಬೋಳಿಸುವುದನ್ನು ತಡೆದರು .ಜ್ಯೋತಿ ಬಾ ರವರ ನಿಧನದ ನಂತರ ಸಾವಿತ್ರಿ ಬಾಯಿ ಫುಲೆ ರವರು ಸತ್ಯ ಶೋಧಕ ಸಮಾಜವನ್ನು ಮುನ್ನಡೆಸಿದರು . ಸಾವಿತ್ರಿ ಬಾಯಿರವರು ಸ್ವತಃ ಕವಯತ್ರಿ ಆಗಿದ್ದು ಕಾವ್ಯ ರಚನೆ ಮಾಡಿರುವರು.
ಇಂದು ಶಿಕ್ಷಣ ಕಲಿತ ,ಕಲಿಯುತ್ತಿರುವ ಹೆಣ್ಣುಮಕ್ಕಳೆಲ್ಲರೂ ಸಾವಿತ್ರಿ ಬಾಯಿ ರವರಿಗೆ ಋಣಿಯಾಗಿರಬೇಕು ಎಂದರು .
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿ.ವಿ.ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೊನ್ನಗಾನಹಳ್ಳಿ ಕರಿಯಣ್ಣ ರವರು ಮಾತನಾಡುತ್ತಾ , ತಾಳ್ಮೆಯನ್ನೇ ತಾಯಿ ಮಾಡಿಕೊಂಡು ,ಅನ್ನದ ಹಸಿವಿನ ಜೊತೆಗೆ ಜ್ಞಾನದ ಹಸಿವನ್ನು ಈಡೇರಿಸಿಕೊಳ್ಳ ಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು .
ಕಾರ್ಯಕ್ರಮದಲ್ಲಿ ಬಾ.ಹ.ರಮಾ ಕುಮಾರಿ , ಡಾ. ವನಜಾಕ್ಷಿ ಉಪಸ್ಥಿತರಿದ್ದರು .
ಪಾರ್ವತಮ್ಮ ರಾಜಕುಮಾರ್ ರವರು ಪ್ರಾರ್ಥನೆ ಮಾಡಿದರು. ಪಾವಗಡ ಸಣ್ಣರಂಗಮ್ಮ ಸ್ವಾಗತಿಸಿ ,ಗೀತಾರವರು ವಂದನಾರ್ಪಣೆ ಮಾಡಿದರು
ಸಿ.ಎಲ್.ಸುನಂದಮ್ಮನವರು ಕಾರ್ಯಕ್ರಮದ ನಿರೂಪಣೆ ಮಾಡಿದರು.