ಶಿಕ್ಷಣವು ವ್ಯಕ್ತಿತ್ವ ವಿಕಸನದ ಜೊತೆಗೆ ರಾಷ್ಟ್ರದ ಪ್ರಗತಿಗೆ ಆಧಾರ: ರಾಜ್ಯಪಾಲ ಗೆಹ್ಲೋಟ್

ತುಮಕೂರು : “ಶಿಕ್ಷಣವು ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜ ಮತ್ತು ರಾಷ್ಟ್ರದ ಪ್ರಗತಿಗೆ ಆಧಾರವಾಗಿರುವುದರಿಂದ ಶಿಕ್ಷಣವನ್ನು ಅತ್ಯುತ್ತಮ ಮತ್ತು ಸುರಕ್ಷಿತ ಸಂಪತ್ತು ಎಂದು ಕರೆಯಲಾಗಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಜರುಗಿದ 18ನೇ ಘಟಿಕೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಶಿಕ್ಷಣವನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಹಣ, ಆಸ್ತಿ ಕಾಲಾನಂತರದಲ್ಲಿ ಅಂತ್ಯವಾಗಬಹುದು. ಆದರೆ ಶಿಕ್ಷಣವು ಜೀವಿತಾವಧಿಯವರೆಗೆ ಇರುತ್ತದೆಯಲ್ಲದೆ, ವ್ಯಕ್ತಿಯನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಹಾಗೂ ಯೋಚಿಸುವ ಶಕ್ತಿಯನ್ನು ನೀಡುತ್ತದೆ ಎಂದರು.

ಇಂದಿನ ಜಗತ್ತಿನಲ್ಲಿ ಹೊಸ ಆವಿಷ್ಕಾರಗಳು, ಹೊಸ ತಂತ್ರಜ್ಞಾನಗಳು ಪ್ರತೀ ದಿನ ಹೊರಹೊಮ್ಮುತ್ತಿವೆ. ಇದರಿಂದ ಯುವಪೀಳಿಗೆಯು ಜೀವನಪಯರ್ಂತ ವಿದ್ಯಾರ್ಥಿಯಾಗಿ ಕೆಲಸ ಮಾಡುವ ಅನಿವಾರ್ಯತೆಯಿದೆ. ಇಂದು ಹೊಸದಾಗಿರುವ ತಂತ್ರಜ್ಞಾನವು ನಾಳೆ ಹಳೆಯದಾಗುತ್ತದೆ. ಈ ನಿಟ್ಟಿನಲ್ಲಿ ಯುವಕರು ಡಿಜಿಟಲ್ ಸಾಕ್ಷರತೆ, ನವೀನ ಚಿಂತನೆ, ಜಾಗತಿಕ ದೃಷ್ಟಿಕೋನ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಸ್ತುತ ಜಗತ್ತು ಪರಿಸರ ಅಸಮತೋಲನ, ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ವಿಕೋಪಗಳೊಂದಿಗೆ ಹೋರಾಡುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾವಂತ ಯುವಕರು ಪರಿಸರದ ಬಗ್ಗೆ ಜಾಗೃತರಾಗಿರಬೇಕು. ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ತಾಂತ್ರಿಕ, ಕೈಗಾರಿಕಾ ಸಾಮಾಜಿಕ ಅಥವಾ ಯಾವುದೇ ಕ್ಷೇತ್ರವಿರಲಿ, ನಿಮ್ಮ ಪ್ರತಿಯೊಂದು ನಿರ್ಧಾರ ಹಾಗೂ ಪ್ರಯತ್ನಗಳು ಸುಸ್ಥಿರ ಅಭಿವೃದ್ಧಿಯ ಕಲ್ಪನೆಯನ್ನು ಹೊಂದಿರಬೇಕು. ನೀವು ಯಾವುದೇ ಕ್ಷೇತ್ರಕ್ಕೆ ಹೋದರೂ, ಹಸಿರು ಭಾರತ, ಸ್ವಚ್ಛ ಭಾರತ ಮತ್ತು ಬಲಿಷ್ಠ ಭಾರತವನ್ನು ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪ್ರಸ್ತುತ ನಮ್ಮ ದೇಶವು 100ಕ್ಕೂ ಹೆಚ್ಚು ಯುನಿಕಾರ್ನ್ ಸ್ಟಾರ್ಟ್‍ಅಪ್‍ಗಳನ್ನು ಹೊಂದಿದೆ. ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯು ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯವಸ್ಥೆಯಾಗಿದೆ. ಚಂದ್ರಯಾನದಿಂದ AI ವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಪ್ರಮುಖ ಪಾತ್ರ ವಹಿಸುತ್ತಿದ್ದೇವೆ. ಇಂದಿನ ಯುವಕರು ನಾವೀನ್ಯತೆ, ಕಠಿಣ ಪರಿಶ್ರಮ ಮತ್ತು ದೇಶಭಕ್ತಿಯನ್ನು ತಮ್ಮ ಮೂಲ ಮಂತ್ರವನ್ನಾಗಿ ಮಾಡಿಕೊಂಡಿರುವುದರಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ಹೇಳಿದರು.

ಉದ್ಯೋಗ ಪಡೆಯುವುದರ ಜೊತೆಗೆ, ಜೀವನವನ್ನು ಅರ್ಥಪೂರ್ಣಗೊಳಿಸುವುದು, ರಾಷ್ಟ್ರವನ್ನು ಸಮೃದ್ಧಗೊಳಿಸುವುದು ವಿದ್ಯಾರ್ಥಿಗಳ ಗುರಿಯಾಗಬೇಕು. ನಿಮ್ಮಲ್ಲಿ ಕೆಲವರು ಉನ್ನತ ಶಿಕ್ಷಣಕ್ಕೆ ಹೋಗುತ್ತೀರಿ, ಕೆಲವರು ಉದ್ಯೋಗವನ್ನು ಪಡೆದುಕೊಳ್ಳುತ್ತೀರಿ, ಕೆಲವರು ಉದ್ಯಮಿಗಳಾಗುತ್ತೀರಿ, ಕೆಲವರು ಸಂಶೋಧನೆ ಅಥವಾ ಆಡಳಿತಕ್ಕೆ ಕೊಡುಗೆ ನೀಡುತ್ತೀರಿ. ನೀವು ಆರಿಸಿಕೊಳ್ಳುವ ಯಾವುದೇ ಕ್ಷೇತ್ರದಲ್ಲಿ ನೈತಿಕತೆ ಮತ್ತು ಸಾಮಾಜಿಕ ದೃಷ್ಟಿಕೋನವನ್ನು ಕಾಪಾಡಿಕೊಳ್ಳಬೇಕು ಎಂದು ಮಾರ್ಗದರ್ಶನದ ಮಾತು ಹೇಳಿದರು.

ಘಟಿಕೋತ್ಸವದಲ್ಲಿ ಶಿಕ್ಷಣ, ಸಾಹಿತ್ಯ, ಆರೋಗ್ಯ ಮತ್ತು ಸಮಾಜಕಾರ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಎಸ್.ನಾಗಣ್ಣ, ಹಂಪ ನಾಗರಾಜಯ್ಯ ಹಾಗೂ ದಿಲೀಪ್ ಸುರಾನಾ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ ಅವರು, ಡಾಕ್ಟರೇಟ್ ಗೌರವ ಪಡೆದವರು ತಮ್ಮ ಸಾಮಾಜಿಕ ಸೇವೆಗಳನ್ನು ಇದೇ ರೀತಿ ಮುಂದುವರೆಸಬೇಕು ಎಂದು ಮನವಿ ಮಾಡಿದರು.

ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಪ್ರೊ. ಟಿ.ಜಿ.ಸೀತಾರಾಮ್ ಅವರು ತಮ್ಮ ಘಟಿಕೋತ್ಸವ ಭಾಷಣದಲ್ಲಿ ವಿಶ್ವವಿದ್ಯಾನಿಲಯದಿಂದ ಈ ದಿನ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡುತ್ತಾ, ಹಲವು ವರ್ಷಗಳ ಕಠಿಣ ಪರಿಶ್ರಮ, ಶಿಸ್ತು, ಜಾಗರಣೆ, ಕ್ಯಾಂಪಸ್ ಕಲಿಕೆಯು ಜೀವನದುದ್ದಕ್ಕೂ ನಿಮ್ಮೊಂದಿಗಿರುವ ಅಧ್ಯಯನದ ಸಾಧನೆಯ ಫಲಿತಾಂಶ. ನಿಮ್ಮ ಪೋಷಕರು ಮತ್ತು ಕುಟುಂಬದ ತ್ಯಾಗ, ಪ್ರೋತ್ಸಾಹ, ನಂಬಿಕೆಯೇ ಈ ಯಶಸ್ಸಿಗೆ ಕಾರಣವಾಗಿದೆ. ಔಪಚಾರಿಕವಾಗಿ ಪದವಿ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವ ಈ ದಿನ ನಿಮಗೆ ಮಹತ್ತರವಾದ ಪ್ರಾರಂಭದ ದಿನವಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರಲ್ಲದೆ, ತಾವು ಅಧ್ಯಕ್ಷರಾಗಿರುವ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ಪರಿಚಯ ಹಾಗೂ ಅದರಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ವಿವರಿಸಿದರು.

ಘಟಿಕೋತ್ಸವದಲ್ಲಿಂದು ವಿವಿಧ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿ ಪದವಿ ಪಡೆದಿರುವ 76 ವಿದ್ಯಾರ್ಥಿಗಳಿಗೆ 106 ಚಿನ್ನದ ಪದಕ ಹಾಗೂ 4 ವಿದ್ಯಾರ್ಥಿಗಳಿಗೆ 6 ನಗದು ಬಹುಮಾನವನ್ನು ಪ್ರದಾನ ಮಾಡಲಾಯಿತು. ಅಲ್ಲದೆ ಇಬ್ಬರಿಗೆ ಡಿ.ಲಿಟ್, 59 ಮಂದಿಗೆ ಪಿಹೆಚ್.ಡಿ, 1911 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ, 9438 ವಿದ್ಯಾರ್ಥಿಗಳಿಗೆ ಪದವಿ ಸೇರಿದಂತೆ 11,349 ಮಂದಿಗೆ ಪದವಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಪ್ರಭಾರ ಕುಲಸಚಿವ ಪ್ರೊ. ಕೊಟ್ರೇಶ್ ಎಂ., ಕುಲಸಚಿವ(ಪರೀಕ್ಷಾಂಗ) ಪ್ರೊ. ಸತೀಶ್ ಗೌಡ ಎನ್., ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ವಿವಿಧ ಇಲಾಖಾಧಿಕಾರಿಗಳು, ವಿಶ್ವವಿದ್ಯಾನಿಲಯದ ವಿದ್ಯಾವಿಷಯಕ ಪರಿಷತ್ ಮತ್ತು ಸಿಂಡಿಕೇಟ್‍ನ ಸದಸ್ಯರು, ಬೋಧಕ ಮತ್ತು ಬೋಧಕೇತರ ವರ್ಗ, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *