ಬಲಿಷ್ಠ ಭಾರತದ ಬೆಳವಣಿಗೆಗೆ ಶಿಕ್ಷಣವೇ ಆಧಾರ_ ಡಾ: ಜಿ. ಪರಮೇಶ್ವರ

ತುಮಕೂರು : ಬಲಿಷ್ಠ ಭಾರತದ ಬೆಳವಣಿಗೆಗೆ ಶಿಕ್ಷಣವೇ ಆಧಾರ ಆಧುನಿಕ ಭಾರತದಲ್ಲಿ ಶಿಕ್ಷಣ ಎಲ್ಲರಿಗೂ ಲಭ್ಯವಾಗುವ ಉತ್ತಮ ವ್ಯವಸ್ಥೆ ರೂಪುಗೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ತಂದ ಹೊಸ-ಹೊಸ ಆವಿಷ್ಕಾರ, ಅನ್ವೇಷಣೆಗಳಿಂದ ಇಂದು ಭಾರತವನ್ನು ಪ್ರಪಂಚದ ಭೂಪಟದಲ್ಲಿ ಬಲಿಷ್ಠ ರಾಷ್ಟ್ರವನ್ನಾಗಿ ಕಾಣುತ್ತಿದ್ದೇವೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ನಗರದ ಹೊರವಲಯ ಹೆಗ್ಗೆರೆಯಲ್ಲಿರುವ ಡಾಃ ಹೆಚ್. ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಭಾರತರತ್ನ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ರವರ 138ನೇ ಜನ್ಮ ದಿನಾಚರಣೆ ಮತ್ತು ಶಿಕ್ಷಕರ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರ ದಿನಾಚರಣೆಯು ದೇಶದಾದ್ಯಂತ ಗುರುಗಳಿಗೆ ಗೌರವ ಸಲ್ಲಿಸುವ ದಿನವಾಗಿದೆ. ಡಾ: ರಾಧಾಕೃಷ್ಣನ್ ಅವರು ತತ್ವಜ್ಞಾನಿ, ಮಹಾನ್ ಶಿಕ್ಷಕ ಹಾಗೂ ಭಾರತದ ರಾಷ್ಟ್ರಪತಿ (ಮೊದಲ ಉಪ ರಾಷ್ಟ್ರಪತಿ)ಯಾಗಿದ್ದರು. ವಿದ್ಯಾರ್ಥಿಗಳು ಅವರ ಹುಟ್ಟುಹಬ್ಬವನ್ನು ಆಚರಿಸಲು ಬಯಸಿದಾಗ, “ಈ ಗೌರವ ನನಗೆ ಅಲ್ಲ; ದೇಶದ ಪ್ರತಿಯೊಬ್ಬ ಶಿಕ್ಷಕರಿಗೂ ಸಲ್ಲಬೇಕು” ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಪ್ರತೀ ವರ್ಷ ಸೆಪ್ಟೆಂಬರ್ 5ರಂದು ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಭಾರತವು ಇಂದು ಶೇ.80ರಷ್ಟು ಸಾಕ್ಷರತೆ ಹೊಂದಿದ ರಾಷ್ಟ್ರವಾಗಿದೆ. ಈ ಸಾಕ್ಷರತಾ ಪ್ರಮಾಣವು ವಿವಿಧ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಗೆ ಕಾರಣವಾಗಿದೆ. ಶಿಕ್ಷಣದ ಬುನಾದಿಯೇ ಭಾರತವನ್ನು ಈ ಮಟ್ಟಕ್ಕೆ ತಂದಿದೆ ಎಂದು ತಿಳಿಸಿದರು.

ಭಾರತ ಇಂದು ಇಡೀ ಜಗತ್ತಿಗೆ ಆಹಾರ ನೀಡುವ ಸಾಮಥ್ರ್ಯವಿರುವ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದೆ. ಕೃಷಿ, ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ, ಇಂಜಿನಿಯರಿಂಗ್ ಎಲ್ಲ ಕ್ಷೇತ್ರಗಳಲ್ಲೂ ಭಾರತೀಯ ಯುವಶಕ್ತಿಯು ತನ್ನ ಪ್ರತಿಭೆಯನ್ನು ತೋರುತ್ತಿದೆ ಎಂದು ಹೇಳಿದರು.

ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಪ್ರಥಮ ಹೆಜ್ಜೆ ಇಟ್ಟ ಮತ್ತು ಇಡೀ ದೇಶಕ್ಕೆ ಮಾದರಿಯಾಗಿರುವ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಕೂಡ ಸದಾ ಸ್ಮರಣೀಯವಾಗಿದೆ. ರಾಜ್ಯದಲ್ಲಿ 5.72ಲಕ್ಷ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಅದರಲ್ಲಿ 2.5 ಲಕ್ಷಕ್ಕಿಂತ ಹೆಚ್ಚು ಮಹಿಳಾ ಶಿಕ್ಷಕಿಯರು ಇದ್ದಾರೆ ಎಂಬುದು ಹರ್ಷದ ವಿಷಯ ಎಂದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ನಮ್ಮ ಭಾರತ ದೇಶದಲ್ಲಿ ಗುರುವಿನ ಸ್ಥಾನ ಅತ್ಯಂತ ಶ್ರೇಷ್ಠವಾದುದು. ಪ್ರತಿ ವಿದ್ಯಾರ್ಥಿಗೂ ದಾರಿ ತೋರುವ ಗುರು ಇದ್ದು, ಮುಂದೆ ಗುರಿ ಇದ್ದರೆ ಅವನು ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ. ಮಗುವಿಗೆ ಮನೆಯೇ ಮೊದಲ ಪಾಠಶಾಲೆಯಾಗಿದ್ದು, ತಾಯಿಯೇ ಮೊದಲ ಗುರುವಾಗಿರುತ್ತಾಳೆ ಎಂದು ತಿಳಿಸಿದರಲ್ಲದೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಏನನ್ನಾದರೂ ಸಾಧಿಸಲು ಗುರುವಿನ ಮಾರ್ಗದರ್ಶನ ಅಗತ್ಯ. ಶಿಕ್ಷಣ ಎಲ್ಲರಿಗೂ ಹೇಗೆ ಮುಖ್ಯವೋ, ಅದೇ ರೀತಿಯಾಗಿ ಆ ಶಿಕ್ಷಣ ನೀಡುವ ಗುರುಗಳೂ ಅμÉ್ಟೀ ಮುಖ್ಯ. ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ.
ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕೆಯ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರದಾರನೇ ಶಿಕ್ಷಕ ಎಂದು ಹೇಳಿದರೆ ತಪ್ಪಾಗಲಾರದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಪ್ರತಿ ವ್ಯಕ್ತಿಯೂ ತಮ್ಮ ಜೀವನದಲ್ಲಿ ತಂದೆ-ತಾಯಿಯ ನಂತರದ ಸ್ಥಾನವನ್ನು ಒಬ್ಬ ಗುರುವಿಗೆ ನೀಡುತ್ತಾನೆ. ಶಿಕ್ಷಕರು ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಶಿಕ್ಷಣದ ಮೂಲಾರ್ಥವವನ್ನು ತಿಳಿಸಿ ವಿದ್ಯಾರ್ಥಿಗಳ ಬದಕನ್ನು ಬೆಳಗುವ ಕೆಲಸ ಮಾಡುತ್ತಾರೆ. ಗುರುಕುಲ ಶಿಕ್ಷಣದಿಂದ ಹಿಡಿದು ಆಧುನಿಕ ಶಿಕ್ಷಣದವರೆಗೂ ಶಿಕ್ಷಕರು ಇತರರ ಜೀವನನನ್ನು ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ. ಅವರು ವ್ಯಕ್ತಿಯ ಆತ್ಮ ವಿಶ್ವಾಸ, ಬದಕನ್ನು ಬಲಪಡಿಸುತ್ತಾರೆ. ಜೀವನದ ಪ್ರತಿಯೊಂದು ತಪ್ಪು-ಒಪ್ಪುಗಳನ್ನು ತಿದ್ದಿ-ತೀಡಿ ಮತ್ತು ಜವಬ್ದಾರಿಯ ಬಗ್ಗೆ ಕಲಿಸಿ ಕೊಡುತ್ತಾರೆ. ವಿದ್ಯಾರ್ಥಿಗಳ ಜೀವನ ಎಂದಿಗೂ ಹಸನಾಗಿರಲಿ ಎಂದು ತುಂಬು ಹೃದಯದಿಂದ ಹಾರೈಸಿ, ಅದಕ್ಕೆ ಪೂರಕವಾದ ಶಿಕ್ಷಣವನ್ನು ನೀಡುತ್ತಾರೆ ಎಂದು ತಿಳಿಸಿದರು.

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 250 ಕೋಟಿ ರೂ. ವೆಚ್ಚ ಮಾಡಿ ಶಾಲಾ ಆವರಣ ಗೋಡೆ, ಶೌಚಾಲಯ, ಆಟದ ಮೈದಾನ, ಮೂಲಭೂತ ಸೌಕರ್ಯ ಸೇರಿದಂತೆ 4500 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಶಾಸಕ ಬಿ. ಸುರೇಶ್‍ಗೌಡ ಮಾತನಾಡಿ, ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರ ಕೊಡುಗೆ ದೊಡ್ಡದು. ಈ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಕೇವಲ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗದೆ, ಇಡೀ ಸಮಾಜ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಮೂಲಕ ಶಿಕ್ಷಕ ಸಮುದಾಯವನ್ನು ಗೌರವಿಸಬೇಕು. ಹಾಗೆಯೇ ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿ ಶಿಕ್ಷಣ ಕ್ಷೇತ್ರವನ್ನು ಬೆಳಸಬೇಕು ಎಂದು ಹೇಳಿದರು.

ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾತನಾಡಿ, ಶಿಕ್ಷಕರ ದಿನ ಎಂದರೆ ನಮಗೆ ವಿದ್ಯಾ-ಬುದ್ಧಿ ಕಲಿಸಿ ಬದುಕಿನ ಮಾರ್ಗ ತೋರಿದ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನ. ಪ್ರತಿ ವಿದ್ಯಾರ್ಥಿಗಳ ಬಾಳಿನಲ್ಲೂ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು. ಒಮ್ಮೆ ಶಿಕ್ಷಕರಾದವರು ಜೀವನ ಪಯರ್ಂತ ಶಿಕ್ಷಕರಾಗಿರುತ್ತಾರೆ. ಸಮಾಜಕ್ಕೆ ಅವರು ಒಂದಲ್ಲಾ ಒಂದು ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಾರೆ. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ 18 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನಾಧಿಕಾರಿ ಜಿ. ಚಂದ್ರಶೇಖರ ಗೌಡ, ಹೆಗ್ಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ರೇವಣ್ಣ ಎಚ್.ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಜಿ. ರಘುಚಂದ್ರ, ಡಯಟ್ ಉಪನಿರ್ದೇಶಕ ಎಸ್.ಸಿ. ಮಂಜುನಾಥ, ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು, ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *