ತುಮಕೂರು: ಶಿಕ್ಷಣ ಸಂಸ್ಥೆಗಳಿಗೆ ಭ್ರಷ್ಟಾಚಾರದ ಸೋಂಕು ತಟ್ಟಬಾರದು. ಬೋಧಕ-ಬೋಧಕೇತರ ಸಿಬ್ಬಂದಿಗಳು ಆಲಸ್ಯ, ನಕಾರಾತ್ಮಕ ಮನೋಭಾವಗಳಿಂದ ಹೊರಬರಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಬುಧವಾರ ಆಯೋಜಿಸಿದ್ದ 21ನೆಯ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಸಮಾನ ಮನಸ್ಕರಿಂದ ಗುಣಮಟ್ಟದ ವಿಶ್ವವಿದ್ಯಾನಿಲಯವನ್ನು ಕಟ್ಟಲು ಸಾಧ್ಯ. ಬೋಧಕ-ಬೋಧಕೇತರ ಸಿಬ್ಬಂದಿಗಳ ಸಹಭಾಗಿತ್ವ ವಿವಿಗಳನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಲಿದೆ ಎಂದರು.
ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಶಿಕ್ಷಕನಿಂದ ಶಿಕ್ಷಣಕ್ಕೊಂದು ಅರ್ಥ ಬರುತ್ತದೆ. ವಿವಿಗಳು ಸಂಶೋಧನಾಧಾರಿತ ಶಿಕ್ಷಣಕ್ಕೆ ಒತ್ತುಕೊಡಬೇಕು. ವಿವಿಯು ನ್ಯಾಕ್ ಮಾನ್ಯತೆಯಲ್ಲಿ ‘ಎ+’ ಶ್ರೇಣಿ ಗಳಿಸಿದರೆ ಅನುಧಾನ ಯತೇಚ್ಛವಾಗಿ ಸಿಗಲಿದೆ. ಇವೆಲ್ಲ ಸಾಧನೆಗೂ ಪ್ರಾಧ್ಯಾಪಕರ ನಡುವೆ ಗುಣಮಟ್ಟ ಸಂಬಂಧವಿರಬೇಕು. ಸಕಾರಾತ್ಮಕ ವಿಷಯಗಳನ್ನು ಸ್ವೀಕರಿಸುವ ಮನೋಭಾವವಿರಬೇಕು ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಬಿಸಿ ಊಟದ ಯೋಜನೆಯಿಂದಾಗಿ ಶೇ.47 ರಷ್ಟಿದ್ದ ವಿವಿ ಫಲಿತಾಂಶ ಶೇ.51ಕ್ಕೆ ಏರಿಕೆಯಾಗಿದೆ. ಈ ಯೋಜನೆಯಿಂದಾಗಿ ವಿದ್ಯಾರ್ಥಿಗಳು ಶಿಕ್ಷಣದ ಮೇಲೆ ಹೆಚ್ಚು ಗಮನಹರಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನ ಕುಮಾರ್ ಮಾತನಾಡಿ, ವಿವಿಯ ಬಿಸಿ ಊಟದ ಯೋಜನೆಯಿಂದ ಗ್ರಾಮೀಣ ಭಾಗದ 1500 ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಇದರ ಸಕಾರಾತ್ಮಕ ಪರಿಣಾಮ ಶಿಕ್ಷಣದ ಮೇಲೆ ಆಗಲಿದೆ ಎಂದರು.
ವಿವಿ ವಾಣಿಜ್ಯ ನಿಕಾಯದ ಡೀನ್ ಪ್ರೊ. ಬಿ. ಶೇಖರ್, ವಿಜ್ಞಾನ ನಿಕಾಯದ ಡೀನ್ ಪ್ರೊ. ಮನೋಹರ್ ಶಿಂಧೆ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ. ಶೇಟ್, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಸಹಾಯಕ ಪ್ರಾಧ್ಯಾಪಕಿ ಡಾ. ಬಿ. ಎನ್. ಹೇಮಾವತಿ, ಡಾ. ಜ್ಯೋತಿ ಮತ್ತು ಬೋಧಕೇತರ ಸಿಬ್ಬಂದಿ ಲಕ್ಮೀಪತಿ- ಇಲ್ಲಿಯವರೆಗಿನ ತುಮಕೂರು ವಿವಿಯ ಕುಲಪತಿಗಳ, ಕುಲಸಚಿವರ ಕಾರ್ಯಗಳನ್ನು ಸ್ಮರಿಸಿದರು.
ಸಂಸ್ಥಾಪನಾ ದಿನಾಚರಣೆ ಸಮಿತಿ ಸಂಚಾಲಕ ಡಾ. ಎ. ಎಂ. ಮಂಜುನಾಥ್ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಪ್ರೊ. ಬಿ. ರಮೇಶ್ ಸ್ವಾಗತಿಸಿದರು. ಪ್ರೊ. ಬಿ. ಟಿ. ಸಂಪತ್ ಕುಮಾರ್ ವಂದಿಸಿದರು.