ವಸತಿ ವಂಚಿತರಿಗೆ-ಪೌರಕಾರ್ಮಿಕರಿಗೆ ವಸತಿ ನೀಡಲು ಪ್ರಯತ್ನ- ಶಾಸಕ ಜಿ.ಬಿ ಜ್ಯೋತಿಗಣೇಶ್

 ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯ ವಸತಿ ವಂಚಿತರಿಗೆ ಹಾಗೂ ಪಾಲಿಕೆಯ ಪೌರಕಾರ್ಮಿಕರಿಗೆ ವಸತಿ ನೀಡಲು ಪ್ರಯಾಣಿಕ ಪ್ರಯತ್ನ ಮಾಡಲಾಗುವುದು ಎಂದು ತುಮಕೂರು ನಗರದ ಶಾಸಕರಾದ ಜಿ.ಬಿ ಜ್ಯೋತಿಗಣೇಶ್  ತಿಳಿಸಿದರು.


   ಅವರು ತುಮಕೂರು ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆಯಲ್ಲಿ ಮಾತನಾಡಿದ ಅವರು ತುಮಕೂರು ನಗರದ ಜಿಲ್ಲಾ ಕೇಂದ್ರವಾಗಿರುವುದರಿಂದ ವಸತಿ ವಂಚಿತರ ಸಂಖ್ಯೆ ಹೆಚ್ಚಾಗಿದ್ದು ಸರ್ಕಾರಿ ಭೂಮಿಗಳನ್ನು ಗುರುತಿಸಿ ವಸತಿ ಯೋಜನೆಗೆ ಭೂಮಿಯನ್ನು ಮೀಸಲು ಇಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.


  ತುಮಕೂರು ಮಹಾನಗರಪಾಲಿಕೆಯ ಪೌರಕಾರ್ಮಿಕರಿಗೆ ವಸತಿ ನೀಡುವುದು ಸಹ ನಮ್ಮ ಕರ್ತವ್ಯವಾಗಿದೆ ತುಮಕೂರು ನಗರದ ಸ್ವಚ್ಚತೆಗೆ ಹಗಲು ಇರುಳು ದುಡಿಯುತ್ತಿದ್ದಾರೆ. ಪೌರಕಾರ್ಮಿಕರ ಜೊತೆಗೆ ಕುಟುಂಭದವರಿಗೂ ಅನುಕೂಲವಾಗುವಂತೆ ಅಂಗನವಾಡಿ, ಶಾಲೆ, ಆಸ್ಪತ್ರೆ ಒಂದೇ ಸ್ಥಳದಲ್ಲಿ ಇರುವಂತೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಶಾಸಕರು ಸಭೆಯಲ್ಲಿ ಸೂಚನೆ ನೀಡಿದರು.


 ಕಳೆದ ವರ್ಷ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಯಾವುದೇ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರದಿಂದ ಸಾಧ್ಯವಾಗಿಲ್ಲ ಈ ಕಾರಣದಿಂದ ಈ ಹಣಕಾಸು ವರ್ಷದಿಂದ ಮಹಾನಗರಪಾಲಿಕೆ ವತಿಯಿಂದಲೇ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲು ಈ ಬಾರಿ ಪಾಲಿಕೆ ಬಜೆಟ್ ನಲ್ಲಿ 50 ಲಕ್ಷ ರೂ ಹಣ ಮೀಸಲು ಇಡಬೇಕು, ಬೆಂಕಿ ಅನಾಹುತ ಸಂಭವಿಸಿ ಹಾನಿಗೊಳಗಾದ ಮನೆಗಳಿಗೆ 25 ಲಕ್ಷ ರೂ ಹಣ ಮೀಸಲು ಇಡಲು ಸೂಚನೆ ನೀಡಿದರು.


   ಮಾರಿಯಮ್ಮ ನಗರದ ಸ್ಥಳೀಯ ಜನರ ಆದಿ ದೇವತೆ ಮಾರಿಯಮ್ಮ ದೇವಸ್ಥಾನವನ್ನು ಪಾಲಿಕೆಯ ನಿಧಿಯಿಂದ ಜೀರ್ಣೋದ್ದಾರ ಮಾಡಬೇಕು ಈ ದೇವಸ್ಥಾನದ ಜೀಣೋದ್ದಾರಕ್ಕೆ ಶಾಸಕರ ನಿಧಿಯಿಂದಲು ಅನುದಾನ ನೀಡುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು. 



        ರಾಷ್ಟ್ರೀಯ ಹೆದ್ದಾರಿ ಬಫರ್ ಜೋನ್, ರೈಲ್ವೆ ಟ್ರ್ಯಾಕ್ ಬಫರ್ ಜೋನ್‍ಗಳಲ್ಲಿ ಖಾಸಗಿ ಸ್ವತ್ತುಗಳಲ್ಲಿ ಮತ್ತು ಸರ್ಕಾರಿ ಸ್ವತ್ತುಗಳಲ್ಲಿ ಗುಡಿಸಲು ಹಾಕಿಕೊಂಡಿರುವ ವಸತಿ ವಂಚಿತರನ್ನು ಗುರುತಿಸುವಂತೆ  ಅಧಿಕಾರಿಗಳಿಗೆ ಸೂಚಿಸಿದರು.


    ಈ ಸಭೆಯಲ್ಲಿ ತುಮಕೂರು ಮಹಾನಗರಪಾಲಿಕೆಯ ಆಯುಕ್ತರಾದ ಶ್ರೀಮತಿ ಅಶ್ವಿಜ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ವಸತಿ ಶಾಖೆಯ ಅಧಿಕಾರಿಗಳು ಸ್ಮಾರ್ಟ್‍ಸಿಟಿ ಅಧಿಕಾರಿಗಳೊಳಗಂಡಂತೆ ಪಾಲಿಕೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. 

Leave a Reply

Your email address will not be published. Required fields are marked *