ತುಮಕೂರು : ಏಪ್ರಿಲ್ 23ರಂದು ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕ ವಾದ್ರ ತುಮಕೂರಿಗೆ ಆಗಮಿಸಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರಿಂದು ಕಾಂಗ್ರಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿತ್ರದುರ್ಗದಲ್ಲಿ ಅಂದು ಚುನಾವಣಾ ಪ್ರಚಾರದ ನಂತರ ತುಮಕೂರಿಗೆ ಆಗಮಿಸಲಿದ್ದಾರೆ, ಇವರ ಜೊತೆಗೆ ಕೆಪಿಸಿಸಿ ಅಧ್ಯಕ್ಷರೂ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪ್ರಿಯಾಂಕ ವಾದ್ರ ಅವರುಗಳು ಆಗಮಿಸುತ್ತಿದ್ದು, ಚುನಾವಣಾ ಪ್ರಚಾರಸಭೆಯು ತುಮಕೂರಿನ ಯಲ್ಲಾಪುರದಲ್ಲಿ ಏಪ್ರಿಲ್ 23ರ ಸಂಜೆ 5ಗಂಟೆಗೆ ನಡೆಯಲಿದೆ ಎಂದು ತಿಳಿಸಿದರು.
ಈ ಚುನಾವಣಾ ಪ್ರಚಾರ ಸಭೆಯಲ್ಲಿ ತುಮಕೂರು, ತುಮಕೂರು ಗ್ರಾಮಾಂತರ, ಕೊರಟಗೆರೆ ಮತ್ತು ಮಧುಗಿರಿ ಈ ನಾಲ್ಕು ವಿಧಾನಸಭೆಯ ಕ್ಷೇತ್ರಗಳಿಂದ ಸುಮಾರು 40ರಿಂದ 50 ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮೊದಲ ಹಂತದ ಚುನಾವಣೆ ನಡೆದಿರುವ ಕ್ಷೇತ್ರಗಳ ಬಗ್ಗೆ ಕೆಲ ಮಾಧ್ಯಮಗಳು ಸರ್ವೆ ನಡೆಸಿದ್ದು, ಇಂಡಿಯಾ ಮೈತ್ರಿ ಒಕ್ಕೂಟಕ್ಕೆ ಹೆಚ್ಚು ಸೀಟುಗಳು ದೊರೆಯಲಿವೆ ಎಂದು ಹೇಳಲಾಗುತ್ತಿದೆ ಎಂದರು.
ಈ ಹಿನ್ನಲೆಯಲ್ಲಿಯೇ ಇಂಡಿಯಾ ಒಕ್ಕೂಟಕ್ಕೆ ಹೆಚ್ಚು ಸೀಟು ಸಿಗಲಿವೆ, ರಾಜ್ಯದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಲಿದ್ದೇವೆ ಎಂದು ಹೇಳಿದರು.
ಪತ್ರಕರ್ತರೊಬ್ಬರ ಪ್ರಶ್ನೆಗೆ ನಾವೂ ಶ್ರೀರಾಮನ ಭಕ್ತರೇ ನಾವೂ ಶ್ರೀರಾಮನವಮಿ ದಿನ ಜೈ ಶ್ರೀರಾಮ್ ಎಂದು ಹೇಳಿದ್ದೇವೆ, ನಾನೇ ಖುದ್ದಾಗಿ ಹತ್ತಾರು ಕಡೆ ಪಾನಕ, ಹೆಸರುಬೇಳೆ, ಮಜ್ಜಿಗೆ ಹಂಚಿದ್ದೇನೆ. ಬಿಜೆಪಿಯವರು ಜೈಶ್ರೀರಾಮ್ ಎಂದು ಬೇರೆ ಟೋನ್‍ನಲ್ಲಿ ಹೇಳುತ್ತಾರೆ, ಆದರೆ ನಾವು ಸೀತಾರಾಮ ಎಂದು ಎಲ್ಲರನ್ನೂ ಸೇರಿಸಿ ಹೇಳುತ್ತೇವೆ, ಅಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ಎಲ್ಲಾ ಇರುತ್ತಾರೆ, ನಾವು ಈ ಎಲ್ಲಾರ ಪೋಟೋವನ್ನು ಇಟ್ಟಿದ್ದೆವು ಎಂದು ಹೇಳಿದರು.
ಬಿಜೆಪಿಯವರು ಆಯೋಧ್ಯೆಯನ್ನು ಕಟ್ಟುತ್ತೇವೆ ಎನ್ನುವಾಗನಿಂದಲೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಅದಕ್ಕೂ ಮುಂಚೆ ಶ್ರೀರಾಮ ಎಲ್ಲರಿಗೂ ರಾಮ ಇದ್ದೇ ಇದ್ದ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಮಾಜಿ ಶಾಸಕರಾದ ಷಫೀ ಅಹ್ಮದ್, ಡಾ.ರಫೀಕ್ ಅಹ್ಮದ್, ಗಂಗಹನುಮಯ್ಯ, ಕೆಪಿಸಿಸಿ ಕಾರ್ಯದರ್ಶಿ ಆರ್.ರಾಮಕೃಷ್ಣ, ಇಕ್ಬಾಲ್ ಅಹ್ಮದ್, ಡಾ.ಫರ್ಹಾನ ಬೇಗಂ ಉಪಸ್ಥಿತರಿದ್ದರು.