ತುಮಕೂರು : ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬ್ಯಾನರ್, ಫ್ಲೆಕ್ಸ್, ಬಂಟಿಂಗ್, ಹೋರ್ಡಿಂಗ್, ಜನಪ್ರತಿನಿಧಿಗಳ ಭಾವಚಿತ್ರ-ಹೆಸರು, ಗೋಡೆಬರಹ ಸೇರಿದಂತೆ ಈವರೆಗೂ ಸುಮಾರು 5000 ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ.ವಿ.ಅಶ್ವಿಜ ಮಾಹಿತಿ ನೀಡಿದರು.
ತಮ್ಮ ಕಚೇರಿಯಲ್ಲಿಂದು ನಿಷ್ಪಕ್ಷಪಾತ ಲೋಕಸಭಾ ಚುನಾವಣೆ ನಡೆಸಲು ಪಾಲಿಕೆಯಿಂದ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡು ಮಾತನಾಡಿದ ಅವರು, ಚುನಾವಣಾ ವೇಳಾಪಟ್ಟಿಯ ಬಗ್ಗೆ ಮಾಹಿತಿ ನೀಡಿದರಲ್ಲದೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 129047 ಪುರುಷ, 135456 ಮಹಿಳೆ ಹಾಗೂ 26 ಇತರೆ ಸೇರಿ ಒಟ್ಟು 212500 ಮತದಾರರಿದ್ದು, ಈ ಪೈಕಿ 1404 ವಿಕಲಚೇತನ, 528 ವಿಐಪಿ, 48 ಸೇವಾ, 4580 ಯುವ, 85 ವರ್ಷ ಮೇಲ್ಪಟ್ಟ 2649 ಮತದಾರರದ್ದಾರೆ ಎಂದು ತಿಳಿಸಿದರು.
ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವರ್ಗಾವಣೆ-ಸ್ಥಳಾಂತರಗೊಂಡ, ಎರಡು ಬಾರಿ ನಮೂದಾಗಿರುವ, ಮೃತಪಟ್ಟಿರುವ ಮತದಾರರು ಸೇರಿದಂತೆ ಒಟ್ಟು 7324 ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದರು.
ಚುನಾವಣಾ ಆಯೋಗವು ವಿಕಲಚೇತನರು ಹಾಗೂ 85 ವರ್ಷ ಮೇಲ್ಪಟ್ಟ ಮತದಾರರಿಗೆ ಅಂಚೆ ಮತಪತ್ರಗಳ ಮೂಲಕ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಮನೆಯಿಂದಲೇ ಮತದಾನ ಮಾಡಲಿಚ್ಛಿಸುವ ವಿಕಲಚೇತನ ಹಾಗೂ 85+ ಮತದಾರರು ನಮೂನೆ 12ಡಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ನಮೂನೆ 12ಡಿ ಭರ್ತಿ ಮಾಡಿ ಸಲ್ಲಿಸಿದವರಿಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಲು ಅವಕಾಶವಿರುವುದಿಲ್ಲ ಎಂದು ಮಾಹಿತಿ ನೀಡಿದರು.
ಚುನಾವಣಾ ಮಾದರಿ ನೀತಿ ಸಂಹಿತೆ ಸಮರ್ಪಕ ಅನುಷ್ಠನಕ್ಕಾಗಿ 21 ಸೆಕ್ಟರ್ ಅಧಿಕಾರಿ, 3 ಎಸ್ಎಸ್ಟಿ ತಂಡ, 6 ಎಫ್ಎಸ್ಟಿ ತಂಡ, 1 ವಿವಿಟಿ ತಂಡ, 2 ವಿಎಸ್ಟಿ ತಂಡ, 1 ಎಟಿ(ವೆಚ್ಚ)ತಂಡ ಹಾಗೂ ಚುನಾವಣಾ ಕರ್ತವ್ಯಕ್ಕಾಗಿ 940 ಪಿಆರ್ಓ-ಎಪಿಆರ್ಓ-ಪಿಓಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರು ಶಾಂತಿಯುತವಾಗಿ ಮತದಾನ ಮಾಡಲು ಅನುವಾಗುವಂತೆ 97 ಸ್ಥಳಗಳಲ್ಲಿ 235(36 ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ) ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಮಹಿಳೆಯರೇ ನಿರ್ವಹಿಸುವ 5 ಮತಗಟ್ಟೆ, ವಿಕಲಚೇತನ ಹಾಗೂ ಯುವ ಅಧಿಕಾರಿಗಳೇ ನಿರ್ವಹಿಸುವ ತಲಾ ಒಂದೊಂದು ಮತಗಟ್ಟೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದಲ್ಲದೆ ಎಲ್ಲ ಮತಗಟ್ಟೆಗಳಿಗೂ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದರು.
ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ದಾಖಲೆಯಿಲ್ಲದ 50,000ಕ್ಕಿಂತ ಹೆಚ್ಚಿನ ಹಣ-ಸ್ವತ್ತು ಸಾಗಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲು ನಗರದ ಬಟವಾಡಿ, ಶಿರಾ ಗೇಟ್ ಹಾಗೂ ಕುಣಿಗಲ್ ವೃತ್ತದ ಬಳಿ 3 ಚೆಕ್ ಪೋಸ್ಟ್ಗಳನ್ನು ನಿರ್ಮಿಸಿ 3 ಪಾಳಿ ಆಧಾರದಲ್ಲಿ 24*7 ಕಾರ್ಯನಿರ್ವಹಿಸಲು ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಹೆಚ್ಚಿನ ನಿಗಾ ವಹಿಸಲು ಪ್ರತಿ ಚೆಕ್ಪೋಸ್ಟ್ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಮೇಲುಸ್ತುವಾರಿಗಾಗಿ ಚೆಕ್ಪೋಸ್ಟ್ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳನ್ನು ಕಮ್ಯಾಂಡ್ ಸೆಂಟರ್, ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಪಾಲಿಕೆ ಕಚೇರಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ನಗರ ವ್ಯಾಪ್ತಿಯಲ್ಲಿ ಕಳೆದ ಬಾರಿ 120 ಮತಗಟ್ಟೆಗಳಲ್ಲಿ ಶೇ.65 ಹಾಗೂ 1 ಮತಗಟ್ಟೆಯಲ್ಲಿ ಶೇ.50ಕ್ಕಿಂತ ಕಡಿಮೆ ಮತದಾನವಾಗಿದ್ದು, ಈ ಮತಗಟ್ಟೆ ವ್ಯಾಪ್ತಿಯ ಎಲ್ಲ ಮನೆಗಳಿಗೂ ಭೇಟಿ ನೀಡಿ ಕಡ್ಡಾಯ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆಯಲ್ಲದೆ, ಮತದಾನಕ್ಕಾಗಿ ಯುವ ಜನರನ್ನು ಸೆಳೆಯಲು ಸ್ವೀಪ್ ಕಾರ್ಯಕ್ರಮದಡಿ ಮಹಿಳೆಯರಿಗಾಗಿ ರಂಗೋಲಿ, ಅಡುಗೆ ಸ್ಪರ್ಧೆ ಹಾಗೂ ಪುರುಷರಿಗಾಗಿ ಕ್ರಿಕೆಟ್, ಬೈಕ್ ರ್ಯಾಲಿ, ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ನೀತಿ ಸಂಹಿತೆ ಜಾರಿ ಅವಧಿಯಲ್ಲಿ ಚುನಾವಣಾ ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕ ದೂರು/ಸಲಹೆ/ಅಭಿಪ್ರಾಯಗಳನ್ನು ನೀಡಲು ಕಂಟ್ರೋಲ್ ರೂಂ ತೆರೆಯಲಾಗಿದ್ದು, ದೂರವಾಣಿ ಸಂಖ್ಯೆ 0816-2272200,9449872599ಕ್ಕೆ ಕರೆ ಮಾಡಿ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿಂದು ಮೊದಲ ಇವಿಎಂ ಮತ್ತು ವಿವಿಪ್ಯಾಟ್ಗಳ ರ್ಯಾಂಡಮೈಸೇಷನ್ ನಡೆಸಲಾಗಿದ್ದು, ಚುನಾವಣೆಗೆ ಬಳಸಲು 235 ಮತಗಟ್ಟೆಗಳಿಗೆ 282 ಕಂಟ್ರೋಲ್ ಯುನಿಟ್, 282 ಬ್ಯಾಲೆಟ್ ಯೂನಿಟ್ ಹಾಗೂ 305 ವಿವಿ ಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ಸದರಿ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯೂನಿಟ್ ಹಾಗು ವಿವಿಪ್ಯಾಟ್ಗಳನ್ನು ನಗರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಂಗೆ ಸ್ಥಳಾಂತರಿಸಲಾಗುವುದೆಂದು ತಿಳಿಸಿದರು.
ಮತದಾರರ ಅನುಕೂಲಕ್ಕಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ ಬಗ್ಗೆ ಮಾಹಿತಿ ಪಡೆಯಲು ವೋಟರ್ ಹೆಲ್ಪ್ ಲೈನ್ ಆಪ್, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವೀಡಿಯೋ-ಆಡಿಯೋ-ಛಾಯಚಿತ್ರವನ್ನು ದಾಖಲಿಸಲು ಸಿ-ವಿಜಿಲ್ ಆಪ್, ವಿಕಲಚೇತನ ಮತದಾರರು ವೀಲ್ ಚೇರ್ ಕೋರಿಕೆಗಾಗಿ ಸಕ್ಷಮ್ ಆಪ್ , ರಾಜಕೀಯ ಪಕ್ಷ-ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು-ಪರಿಶೀಲಿಸಲು ಹಾಗೂ ಸಭೆ-ಸಮಾರಂಭಗಳಿಗೆ ಅನುಮತಿ ಪಡೆಯಲು ಸುವಿಧಾ ಆಪ್ ಅನ್ನು ಬಳಸಬಹುದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.