ತುಮಕೂರು : ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಮೇಲೆ ಸಾಕಷ್ಟು ಹಾನಿಮಾಡುತ್ತಿದ್ದೇವೆ. ಇದನ್ನು ತಡೆಯಲು ನವೀಕರಿಸಬಹುದಾದ ಸಂಪನ್ಮೂಲವನ್ನು ಹೆಚ್ಚಾಗಿ ಬಳಸಿ ಸುಸ್ಥಿರ ಅಭಿವೃದ್ಧಿಗೆ ದಾರಿಮಾಡಿಕೊಡಬೇಕು ಎಂದು ಬೋಷ್ ಕಂಪನಿಯ ಮಾಜಿ ಜನರಲ್ ಮ್ಯಾನೇಜರ್ ಕೆ.ಪಿ ಮೂರ್ತಿ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಕ್ಯೂಐಸಿ, ಐಐಸಿ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಎಚ್‍ಎಂಜಿ ಎಕ್ಸ್‍ಟ್ರಾ ಮಾರಲ್ ಲೆಕ್ಚರ್ ಕಾರ್ಯಕ್ರಮದಲ್ಲಿ “ಸಸ್ಟೈನಬಲ್ ಇಂಜಿನಿಯರಿಂಗ್ ಇನ್ ಹೈಯರ್ ಏಜುಕೇಷನಲ್ ಇನ್ಸ್ಟಿಟ್ಯೂಷನ್” ಎಂಬ ವಿಷಯದ ಕುರಿತು ಮಾತನಾಡಿದ ಅವರು ಪರಿಸರಕ್ಕೆ ಆಗುತ್ತಿರುವ ಮಾಲಿನ್ಯದಿಂದ ಇಂದು ಕೋಟ್ಯಾಂತರ ಮಂದಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಕಾರ್ಖಾನೆಗಳಿಂದ, ಬಿಡುಗಡೆಯಾಗುತ್ತಿರುವ ತ್ಯಾಜ್ಯಗಳು, ವಾಹನಗಳಿಂದ ಉತ್ಪತ್ತಿಯಾಗುತ್ತಿರುವ ಕಾರ್ಬನ್ ಡೈಆಕೈಡ್ ಪರಿಸರದ ಮೇಲೆ ಆಪಾರವಾದ ಹಾನಿಯನ್ನು ಉಂಟುಮಾಡುತ್ತಿದೆ. ಇಂದು ಪರಿಸರದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತಿರುವ ಕಲ್ಲಿದ್ದಲು, ಸ್ಟೀಲ್, ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುವುದನ್ನು ಬಿಟ್ಟು ನೈಸರ್ಗಿಕವಾಗಿ ದೊರೆಯುವ ನವೀಕರಿಸಬುದಾದ ಇಂಧನವನ್ನು ಬಳಸುವ ಮೂಲಕ ಪರಿಸರಕ್ಕಾಗುತ್ತಿರುವ ಹಾನಿಯನ್ನು ತಡೆಗಟ್ಟಬಹುದು.
ಇದನ್ನು ಗಮನದಲ್ಲಿ ಇಟ್ಟುಕೊಂಡು ಇಂದಿನ ಪೀಳಿಗೆಯ ಇಂಜಿನಿಯರ್‍ಗಳು ತಾವು ಮಾಡುವ ಸಂಶೋಧನೆಯಲ್ಲಿ, ವಿನ್ಯಾಸದಲ್ಲಿ ಸುಸ್ಥಿರತೆಯನ್ನು ಅಳವಡಿಸಿಕೊಂಡರೆ ಮುಂದಿನ ತಲೆಮಾರಿಗೂ ಆರೋಗ್ಯವಾಗಿ ಬದುಕಲು ಅವಕಾಶಮಾಡಿಕೊಟ್ಟಂತಾಗುತ್ತದೆ ಎಂದು ತಿಳಸಿದರು. ಇದರ ಜೊತೆಗೆ ಬಿದಿರಿನ ಅನುಕೂಲತೆಗಳ ಬಗ್ಗೆ ಸವಿವರವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಿಳಸಿಕೊಟ್ಟರು.
ಪ್ರಾಂಶುಪಾಲರಾದ ಡಾ. ಎಂ.ಎಸ್ ರವಿಪ್ರಕಾಶ್ ಮಾತನಾಡಿ ಸುಸ್ಥಿರ ಅಭಿವೃದ್ಧಿಯ ಕಡೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚು ಗಮನಹರಿಸಬೇಕು ಪರಿಸರಕ್ಕೆ ಮಾಲಿನ್ಯ ಉಂಟುಮಾಡದ ಸಂಶೋಧನೆಗಳು ವಿದ್ಯಾರ್ಥಿಗಳಿಂದಾಗಲಿ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಸಾಮಾಜಿಕ, ನೈತಿಕ ಮೌಲ್ಯಗಳು ಹೆಚ್ಚು ಜಾಗೃತವಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಪ್ರೊ ಡಾ. ಚಿದಾನಂದ ಬಿ.ಎಲ್, ಅಕಾಡೆಮಿಕ್ ಡೀನ್ ಎಸ್ ರೇಣುಕಲತಾ, ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಹಾಜರಿದ್ದರು.