ತುಮಕೂರು: ಸದಾ ಆಸ್ಪತ್ರೆಯ ರೋಗಿಗಳ ವಾರ್ಡ್, ಪ್ರಯೋಗಾಲಯ ಮತ್ತು ತರಗತಿಗಳಿಗೆ ಜೋತು ಬೀಳುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳು, ತಮ್ಮೊಳಗಿನ ಕಲಾಶಾರದೆಗೊಂದು ವೇದಿಕೆ ಕಲ್ಪಿಸುವ ಸಾಹಸಕ್ಕೆ ಈ ಬಾರಿ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ 3ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಮುಂದಾಗಿದ್ದಾರೆ.
ವೈದ್ಯಕೀಯ ಪ್ರಯೋಗಾಲಯದ ಜಂಜಾಟ ಮತ್ತು ರೋಗಿಗಳೊಂದಿಗಿನ ಒಡನಾಟದ ಜೊತೆಗೆ ಮನಸ್ಸಿನ ಉಲ್ಲಾಸಕ್ಕೂ ಕಾಲಾವಕಾಶ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರುವ ವೈದ್ಯ ವಿದ್ಯಾರ್ಥಿಗಳು, ತಮ್ಮ ಕಾಲೇಜಿನಲ್ಲಿ ಈ ವರ್ಷದ ಉತ್ಸವವನ್ನು ‘ಆರೋಹಣ ’24 ಎಂಬ ‘ಸಾಂಸ್ಕøತಿಕ ಕಲಾ ಉತ್ಸವ’ ನಡೆಸಲು ಮುಂದಾಗಿದ್ದಾರೆ. ಇದು ಜೂನ್ 3 ರಿಂದ ಜೂನ್ 8 ರವರೆಗೆ ನಡೆಯಲಿದೆ. ಈ ಉತ್ಸವವು ಕಲೆ, ಸಂಗೀತ, ನೃತ್ಯ, ಸಾಹಿತ್ಯ ಮತ್ತು ರಂಗಭೂಮಿಯ ಮಿಶ್ರಣವಾಗಿರುತ್ತದೆ.

ನಗರದ ಅಗಳಕೋಟೆಯ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿರುವ ಡಾ.ಎಚ್.ಎಂ. ಗಂಗಾಧರಯ್ಯ ಮೆಮೋರಿಯಲ್ ಸಭಾಂಗಣದ ಮುಂಭಾಗ ಏರ್ಪಡಿಸಲಾದ ‘ಆರೋಹಣ-24ರ ಸಾಂಸ್ಕøತಿಕ ಕಲಾ ಉತ್ಸವದ ಟೀಸರ್ ಪರದೆಯನ್ನು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು, ಗೃಹ ಸಚಿವರಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಪಡೆಯುವವರು ಶಿಕ್ಷಣದ ಜತೆಗೆ ಸಾಹಿತ್ಯ, ಸಂಗೀತ, ಚಿತ್ರಕಲೆಯನ್ನು ಕಲಿಯಬೇಕು. ಆಗ ಅವರಲ್ಲಿ ಕೌಶಲ್ಯ, ಸೌಂದರ್ಯಪ್ರಜ್ಞೆ ಬೆಳೆಯಲು ಸಾಧ್ಯ ಎಂದರು.
ವಿದ್ಯಾರ್ಥಿಗಳಲ್ಲಿ ಅಸಾಮಾನ್ಯವಾದ ಶಕ್ತಿಯಿದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿರುವ ಈ ಶಕ್ತಿಯನ್ನು ಉತ್ತಮ ರೀತಿಯಲ್ಲಿ ಅಭಿವದ್ಧಿಪಡಿಸಿ, ಅದರ ಲಾಭ ಅವರ ಕುಟುಂಬಕ್ಕೆ, ಸಮಾಜಕ್ಕೆ ಸಿಗುವಂತೆ ಮಾಡಬೇಕು. ಇಂತಹ ಉತ್ಸವಗಳಿಗೆ ವೇದಿಕೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಜ್ಞಾನವನ್ನು ಒರೆಗೆ ಹಚ್ಚುವ ಕೆಲಸವನ್ನು ಸಂಸ್ಥೆ ಮಾಡುತ್ತದೆ ಎಂದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಾತ್ಮಕತೆ ಬೆಳೆಸಿಕೊಳ್ಳಿ ಎಂದು ಡಾ.ಜಿ.ಪರಮೇಶ್ವರ ಅವರು ಹುರಿದುಂಬಿಸಿದರು.
ಸಿಕ್ಕಿರುವ ಅವಕಾಶವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿ ಜೀವನವೆಂಬುದು ಬದುಕಿನ ತಿರುವಿನ ಮಹತ್ವದ ಘಟ್ಟ. ಈ ಅವಧಿಯಲ್ಲಿ ಹೆಚ್ಚು ಹೆಚ್ಚು ಅಧ್ಯಯನದ ಜೊತೆಗೆ ಕಲಾತ್ಮಕ ಚಟುವಟಿಕೆಗಳನ್ನು ಮಾಡುವ ಮೂಲಕ ತಮ್ಮ ಜ್ಞಾನದ ಮಿತಿಯನ್ನು ಹೆಚ್ಚಿಸಿಕೊಂಡಾಗ ಅದು ಬದುಕಿನ ಕಟ್ಟಕಡೆಯ ತನಕ ನೆರವಿಗೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.

ಸಾಂಸ್ಕøತಿಕ ಸತ್ವವನ್ನು ಅನಾವರಣಗೊಳಿಸುವ ಕಲಾ ಪ್ರದರ್ಶನದ ಸಾಂಸ್ಕøತಿಕ ಕಾರ್ಯಕ್ರಮ ಕಾಲೇಜುಗಳಲ್ಲಿ ನಡೆಯಬೇಕು. ಇಂತಹ ಕಲಾ ಸಾಧ್ಯತೆಗಳನ್ನು ಆಸ್ವಾದಿಸುವ ಮೂಲಕ ವಿದ್ಯಾರ್ಥಿಗಳು ಮತ್ತಷ್ಟು ಸುಸಂಸ್ಕøತರಾಗಿ ಬೆಳೆಯಬಹುದು. ಹಾಗಾಗಿ ಮುಂದಿನ ದಿನಗಳಲ್ಲಿ ಸಾಹೇ ವಿವಿಯಲ್ಲಿ ರಾಷ್ಟ್ರೀಯ ಮಟ್ಟದ ಅಂತರ್ ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕøತಿಕ ಸ್ವರ್ಧೆಗಳನ್ನು ಆಯೋಜನೆ ಮಾಡುವುದಾಗಿ ಡಾ.ಜಿ.ಪರಮೇಶ್ವರ ಅವರು ಘೋಷಿಸಿದರು.
ಸಾಮಾಜಿಕ ಮತ್ತು ಸಾಂಸ್ಕøತಿಕ ಪ್ರಜ್ಞೆ ಮೂಡಿಸುವಲ್ಲಿ ಶಿಕ್ಷಣ ಕಾರಣವಾದಂತೆ, ಸಮುದಾಯದ ಒಡನಾಟ, ಸಾಮಾಜಿಕ ಕಳಕಳಿ, ನಾಯಕತ್ವದ ಗುಣಗಳ ವೃದ್ಧಿಗೆ ಸಾಂಸ್ಕøತಿಕ ಚಟುವಟಿಕೆಗಳು ಕಾರಣ. ಬದುಕಿನ ಮೌಲ್ಯ ಅರಿಯುವಲ್ಲಿ, ಬೌದ್ಧಿಕ ಮತ್ತು ಕಲಾತ್ಮಕ ವ್ಯಕ್ತಿತ್ವ ಬೆಳೆಸುವಲ್ಲಿ ಸಾಂಸ್ಕøತಿಕ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಈ ಮೂಲಕ ಸುಂದರ ಬದುಕು ತಮ್ಮದಾಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಾಹೇ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಸಾಹೇ ರಿಜಿಸ್ಟ್ರಾರ್ ಡಾ.ಎಂ.ಝಡ್ ಕುರಿಯನ್, ಸಾಹೇ ವಿವಿಯ ಪರೀಕ್ಷಾ ನಿಯಂತ್ರಕ ಡಾ.ಗುರುಶಂಕರ್, ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರ ಡಾ ವಿವೇಕ್ ವೀರಯ್ಯ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಾಣಿಕೊಪ್ಪ, ಉಪಪ್ರಾಂಶುಪಾಲ ಡಾ.ಜಿ.ಎನ್. ಪ್ರಭಾಕರ್, ಸಿಇಓ ಕಿರಣ್ ಕುಮಾರ್, ಡೆಂಟಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಕುಡುವ ಅವರು ಹಾಜರಿದ್ದರು.