ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ನಿಧನ

ತುಮಕೂರು : ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ (84) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು.

ಉಸಿರಾಟದ ತೊಂದರೆಯಿಂದಾಗಿ ಬುಧವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ ಲಕ್ಷ್ಮಿದೇವಮ್ಮ, ಪುತ್ರಿ ಡಾ.ಕವಿತಾ, ಪುತ್ರ ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಇದ್ದಾರೆ.

ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದ ಸಿ.ಪಿ.ಮೂಡಲಗಿರಿಯಪ್ಪ ಅವರು 1985ರಲ್ಲಿ ಮೊದಲ ಪ್ರಯತ್ನದಲ್ಲೇ ಶಿರಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದರು.

ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದ ಕಡೆ ಮುಖ ಮಾಡಿದ ಅವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ 1989, 1991 ಮತ್ತು 1998ರಲ್ಲಿ ಜಯಗಳಿದ್ದರು. ಮೂರು ಬಾರಿ ಲೋಕಸಭೆ ಪ್ರತಿನಿಧಿಸಿದ್ದರು.

ಶಿರಾ ವಿಧಾನಸಭೆಗೆ 2020ರಲ್ಲಿ ನಡೆದ ಉಪಚುನಾವಣೆಯಲ್ಲಿ ಮೂಡಲಗಿರಿಯಪ್ಪ ಪುತ್ರ ಡಾ.ಸಿ.ಎಂ.ರಾಜೇಶ್‍ಗೌಡ ಶಾಸಕರಾಗಿ ಆಯ್ಕೆಯಾಗಿದ್ದರು.

ಮೂಡಲಗಿರಿಯಪ್ಪ ಅವರು ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದವರಾಗಿದ್ದು, ಜೂನ್ 24, 1940ರಂದು ಜನಿಸಿದರು. ಇವರು ತಮ್ಮ ಶಿಕ್ಷಣವನ್ನು ಸರ್ಕಾರಿ ಕಾನೂನು ಕಾಲೇಜು ಮತ್ತು ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು (ಕರ್ನಾಟಕ)ದಿಂದ ಬಿಎ ಮತ್ತು ಬಿಎಲ್ನಲ್ಲಿ ಪೂರ್ಣಗೊಳಿಸಿದರು.

ನಂತರ 1980 ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಸಂವಿಧಾನ ತಿದ್ದುಪಡಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದಾದ ಬಳಿಕ 1985 ಮತ್ತು 1989 ಸಿರಾ ಕ್ಷೇತ್ರದ ವಿಧಾನಸಭಾ ಸದಸ್ಯರಾದರು. ಜೊತೆಗೆ ಅಧೀನ ಶಾಸನ ಸಮಿತಿಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದರು. 1989 ಹಾಗೂ 1991 ಚಿತ್ರದುರ್ಗದಿಂದ 9ನೇ ಲೋಕಸಭೆಯಲ್ಲಿ ಸಂಸದರಾಗಿ ಆಯ್ಕೆಯಾದರು. ಇದರ ಜೊತೆಗೆ ಕಾನೂನು ಮತ್ತು ನ್ಯಾಯ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿ ನೇಮಕವಾದರು. 1991 ಮತ್ತು 1996 ಚಿತ್ರದುರ್ಗದಿಂದ 10ನೇ ಲೋಕಸಭೆಯಲ್ಲಿ ಸಂಸದರಾಗಿ ಜಯಗಳಿಸಿದರು. 1998, 1999ರಲ್ಲಿ ಚಿತ್ರದುರ್ಗದಿಂದ ಮೂರನೇ ಬಾರಿಗೆ ಲೋಕಸಭೆ ಪ್ರವೇಶಿಸಿದರು. ಆಹಾರ, ನಾಗರಿಕ ಸರಬರಾಜು ಮತ್ತು ಸಾರ್ವಜನಿಕ ವಿತರಣಾ ಸಮಿತಿಯ ಸದಸ್ಯ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪಸಮಿತಿ-ಎ. ಸದನದ ಸಭೆಗಳಿಗೆ ಸದಸ್ಯರ ಗೈರುಹಾಜರಿ ಸಮಿತಿಯ ಸದಸ್ಯ, ಕಾರ್ಮಿಕ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿದ್ದರು. ಹೀಗೆ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.

ಅಂತ್ಯ ಸಂಸ್ಕಾರ : ಮಾ.24 ರ ಭಾನುವಾರ ಬೆಳಿಗ್ಗೆ 11. ಗಂಟೆಗೆ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಸ್ವಗ್ರಾಮ ಚಿರತಹಳ್ಳಿ (ಗಣೇಶ ಗುಡಿ ಎಸ್ಟೇಟ್) ತೋಟದ ಮನೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಮಾಜಿ ಸಂಸದರ ಪುತ್ರ ಮಾಜಿ ಶಾಸಕ ಡಾ.ಸಿ. ಎಂ.ರಾಜೇಶ್ ಗೌಡ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *