ಸಂಶೋಧನೆ ಶ್ರೇಷ್ಠ ಕೆಲಸ: ಪ್ರೊ. ಎಂ. ವೆಂಕಟೇಶ್ವರಲು

ತುಮಕೂರು: ಸಂಶೋಧನೆಯನ್ನು ಸರಿಯಾಗಿ ಮಾಡುವುದೇ ಒಂದು ಶ್ರೇಷ್ಠ ಕೆಲಸ. ಸಂಶೋಧನೆ ಮಾಡುವುದಕ್ಕೆ ಯಾವುದೇ ರೀತಿಯ ವಯಸ್ಸಿನ ಇತಿಮಿತಿಗಳಿಲ್ಲ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ತಿಳಿಸಿದರು.

ತುಮಕೂರು ವಿವಿ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಬುಧವಾರ ಆಯೋಜಿಸಿದ್ದ ನವದೆಹಲಿಯ ಐಸಿಎಸ್‍ಎಸ್‍ಆಎರ್ ಪ್ರಾಯೋಜಿತ ಸಂಶೋಧನಾ ವಿಧಾನ ಕುರಿತ ಹತ್ತು ದಿನಗಳ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಯಾವುದೇ ಸಂಶೋಧನಾರ್ಥಿ ಸಂಶೋಧನೆ ಕೈಗೊಳ್ಳುವ ಮುನ್ನ ಸಂಶೋಧನೆಯ ಉದ್ದೇಶವನ್ನು ಸ್ಪಷ್ಟಪಡಿಸಿಕೊಂಡಿರಬೇಕು. ಸಂಶೋಧನೆ ಮಾಡಲು ಮಾನಸಿಕ ಸ್ಥಿರತೆ ಇರಬೇಕು. ಮಾರ್ಗದರ್ಶಕರ ಆಯ್ಕೆ ಮತ್ತು ವಿಷಯದ ಆಯ್ಕೆಯೂ ಅಷ್ಟೇ ಮುಖ್ಯ ಎಂದರು.

ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ಮುಕ್ತತೆ ಸಂಶೋಧನೆಯ ಮೂರು ಪ್ರಧಾನ ಆಯಾಮಗಳು. ಸಂಶೋಧನೆ ಮಾಡುವವರಿಗೆ ಆತ್ಮವಿಶ್ವಾಸ ಇರಬೇಕೇ ಹೊರತು ಅತಿಯಾದ ಆತ್ಮವಿಶ್ವಾಸ ಇರುವುದು ಒಳ್ಳೆಯದಲ್ಲ. ವಿಧಾನ ಗೊತ್ತಿಲ್ಲದೆ ಸಂಶೋಧನೆಯನ್ನು ನಡೆಸುವುದು ಸರಿಯಾದ ಯೋಜನೆ ಇಲ್ಲದೆ ಕಟ್ಟಡವನ್ನು ನಿರ್ಮಾಣ ಮಾಡಿದ ಹಾಗೆ ಎಂದರು.

ಕಾರ್ಯಾಗಾರದ ಸಹ ನಿರ್ದೇಶಕ ಡಾ. ಮುನಿರಾಜು ಎಂ. ಮಾತನಾಡಿ, ಸಂಶೋಧನೆಗೆ ದತ್ತಾಂಶ ಸಂಗ್ರಹ ಮಾಡಲು ಸರಿಯಾದ ಉಪಕರಣಗಳನ್ನು ಆಯ್ಕೆ ಮಾಡುವುದು ತುಂಬಾ ಮುಖ್ಯ. ಈ ಹಿನ್ನೆಲೆಯಲ್ಲಿ ಶಿಬಿರಾರ್ಥಿಗಳಿಗೆ ಹೆಚ್ಚಿನ ತರಬೇತಿ ನೀಡಲಾಗುವುದು. ಪ್ರಸ್ತುತ ಐಸಿಎಸ್‍ಎಸ್‍ಆರ್ ಪ್ರಾಯೋಜಿತ ಕಾರ್ಯಗಾರದಲ್ಲಿ ದೇಶದ ವಿವಿಧ ಭಾಗಗಳ 30 ಸಂಶೋಧನಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದ ನಿರ್ದೇಶಕ ಪ್ರೊ. ಜಯಶೀಲ, ವಿಭಾಗದ ಪ್ರಾಧ್ಯಾಪಕರಾದ ಪ್ರೊ. ವಿಲಾಸ್ ಕದ್ರೋಲ್ಕರ್, ಪ್ರೊ. ಬಿ. ರವೀಂದ್ರ ಕುಮಾರ್, ಡಾ. ಮುನಿರಾಜು ಎಂ., ಡಾ. ನೀಲಕಂಠ ಎನ್. ಟಿ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *