ಎಕ್ಸ್ ಪ್ರೆಸ್ ಕೆನಾಲ್ ವಿರೋಧಿಸಿ ಬಂದ್ ಯಶಸ್ವಿ-ಬಿಕೋ ಎಂದ ರಸ್ತೆಗಳು

ತುಮಕೂರು:ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಇಂದು ಕರೆ ನೀಡಿದ್ದ ತುಮಕೂರು ಜಿಲ್ಲಾ ಬಂದ್‍ಗೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ವಿವಿಧ ಮಠಾಧೀಶರು,ರೈತ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳು, ಲಾರಿ ಚಾಲಕರು ಮತ್ತು ಮಾಲೀಕರ ಸಂಘ,ಚಿನ್ನಬೆಳ್ಳಿ ವ್ಯಾಪಾರಿಗಳ ಸಂಘ, ಧಾನ್ಯ ವರ್ತಕರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಬಂದ್‍ನ್ನು ಯಶಸ್ವಿಗೊಳಿಸಿದರು.

ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಇನ್ನಿತರ ಸಂಘಟನೆಗಳ ಸಹಕಾರದಲ್ಲಿ ಕರೆದಿದ್ದ ತುಮಕೂರು ಬಂದ್ ಅಂಗವಾಗಿ ನೂರಾರು ಹೋರಾಟಗಾರರು,ನಾಗರಿಕರು ನಗರದ ಟೌನ್‍ಹಾಲ್ ವೃತ್ತದಲ್ಲಿ ಸಮಾವೇಶಗೊಂಡು,ಬಿ.ಹೆಚ್.ರಸ್ತೆ,ಎಂ.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ,ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ರದ್ದುಗೊಳಿ ಸುವಂತೆ ಒತ್ತಾಯಿಸಿದ ಮನವಿಯಲ್ಲಿ ರಾಜ್ಯಪಾಲರಿಗೆ ಕಳುಹಿಸಲು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ತುಮಕೂರು ಜಿಲ್ಲೆಯ ಹೇಮಾವತಿ ನೀರಿಗೆ ಕಂಕಟವಾಗಿರುವ ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಸ್ಥಗೀತಗೊಳಿಸುವಂತೆ ಕಳೆದ ಎರಡು ತಿಂಗಳಿನಿಂದ ರೈತರು,ಜನಪ್ರತಿನಿಧಿಗಳು ವಿವಿಧ ರೀತಿಯ ಹೋರಾಟ ಮಾಡುತ್ತಾ ಬಂದಿದ್ದರೂ ಸರಕಾರ ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ.ಜೂನ್ 20 ರಂದು ನಡೆದ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿಯೂ ಈ ಭಾಗದ ಶಾಸಕರ ಅಹವಾಲುಗಳನ್ನು ಗಣನೆಗೆ ತೆಗೆದುಕೊಳ್ಳದೆ ಹಠಮಾರಿತನದ ಧೋರಣೆಯನ್ನು ಅನುಸರಿಸುತ್ತಿರುವುದು ಖಂಡನೀಯ ಎಂದರು.

ರಾಜ್ಯ ಸರಕಾರ ಹೇಮಾವತಿ ನಾಲೆಯ 70 ನೇ ಕಿ.ಮಿ ನಿಂದ 169ನೇ ಕಿ.ಮಿವರೆಗೆ 35 ಕಿ.ಮಿ ಪೈಪ್‍ಲೈನ್ ಅಳವಡಿಸಿ ಕುಣಿಗಲ್,ಮಾಗಡಿ, ರಾಮನಗರಕ್ಕೆ ನಿಗಧಿಪಡಿಸಿದ ನೀರು ತೆಗೆದುಕೊಂಡು ಹೋಗಲು ಮುಂದಾಗಿದೆ. ಇದು ಅವೈಜ್ಞಾನಿಕ ಯೋಜನೆಯಾಗಿದೆ.ಅಲ್ಲದೆ ಕಾನೂನು ಬಾಹಿರ ಕೂಡ.ಪೈಪ್‍ಲೈನ್ ಅಳವಡಿಸುವಾಗಿ ರೈತರಿಗೆ ಭೂಮಿಗೆ ಪರಿಹಾರ ನೀಡದೆ,ಸ್ಥಳೀಯ ಗ್ರಾಮಪಂಚಾಯತಿಗಳ ಒಪ್ಪಿಗೆ ಪಡೆಯದೆ ದುಂಡಾವರ್ತನೆಯಿಂದ ನೀರು ತೆಗೆದುಕೊಂಡು ಹೋಗಲು ಹೊರಟಿದೆ.ಇದಕ್ಕೆ ನಮ್ಮ ವಿರೋಧವಿದೆ.ಕುಣಿಗಲ್ ತಾಲೂಕಿಗೆ ನೀರು ಒದಗಿಸುವ ಹೇಮಾವತಿ ಮೂಲ ನಾಲೆ ಅಧುನೀಕರಣ ಗೊಂಡಿದೆ.ಹಾಗಾಗಿ ಆ ನಾಲೆಯ ಮೂಲಕವೇ ಹುತ್ತರಿದುರ್ಗವಗರೆಗೆ ನಿಗಧಿತ ನೀರು ತೆಗೆದುಕೊಂಡು ಹೋಗಬಹುದು. ಅನಗತ್ಯ ಖರ್ಚು ಮಾಡಿ,ಪೈಪ್‍ಲೈನ್ ಕಾಮಗಾರಿ ಕೈಬಿಡಬೇಕು.ಇಲ್ಲದಿದ್ದರೆ ಜನರು ಧಂಗೆ ಏಳುವ ಕಾಲ ದೂರವಿಲ್ಲ ಎಂದು ಎ.ಗೋವಿಂದರಾಜು ಎಚ್ಚರಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ,ಇದು ತುಮಕೂರು ಜಿಲ್ಲೆಯ ಜೀವ ಜಲದ ಪ್ರಶ್ನೆಯಾಗಿದೆ.ತುಮಕೂರು ಜಿಲ್ಲೆಗೆ 24.05 ಟಿ.ಎಂ.ಸಿ ನೀರು ಹಂಚಿಕೆಯಾಗಿದ್ದರೂ ಇದುವರೆಗೂ ತುಮಕೂರು ನಗರದ 35 ವಾರ್ಡುಗಳಿಗೂ ಸಂಪೂರ್ಣವಾಗಿ ಕುಡಿಯಲು ಹೇಮಾವತಿ ನೀರು ನೀಡಲು ಸಾಧ್ಯವಾಗಿಲ್ಲ.ಹೀಗಿರುವಾಗ,ನಾಲೆಯ ಅರ್ಧದಲ್ಲಿಯೇ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋದರೆ,ಜಿಲ್ಲೆಯ ಇತರೆ ತಾಲೂಕುಗಳಿಗೆ ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ ಇದೆ.ಈಗಾಗಲೇ ಹೇಮಾವತಿ ನಾಲೆಯ 70ನೇ ಕಿ.ಮಿ.ನಿಂದ 228ನೇ ಕಿ.ಮಿ.ವರೆಗೆ ನಾಲೆಯನ್ನು ಅಧುನೀಕರಣಗೊಳಿಸಿದ್ದು, ನಿಗಧಿಪಡಿಸಿದ ನೀರು ಹರಿಯಲು ಯಾವುದೇ ಸಮಸ್ಯೆಇಲ್ಲ.ಜಿಲ್ಲೆಗೆ ಆಗುವ ಅನ್ಯಾಯವನ್ನು ಅರಿತು ಇಂದಿನ ಹೋರಾಟಕ್ಕೆ ಮಠಾಧೀಶರು,ರೈತರು, ಕನ್ನಡಪರ ಸಂಘಟನೆಗಳ ಮುಖಂಡರು ಎಲ್ಲಾ ನಾಗರಿಕರು ಬೆಂಬಲ ಸೂಚಿಸಿದ್ದಾರೆ.ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.ಯೋಜನೆ ನಿಲ್ಲುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್, ಹೋರಾಟದಲ್ಲಿ ಪಾಲ್ಗೊಂಡಿದ್ದ ಮಠಾಧೀಶರ ಪರವಾಗಿ ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿ ಮಾತನಾಡಿದರು.

ಈ ಸಂಬಂಧ ಮನವಿಯನ್ನು ಜಿಲ್ಲಾ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರಿಗೆ ಮನವಿ ಸಲ್ಲಿಸಿದರು.

ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಿದ್ದರಿಂದ ಪ್ರತಿ ದಿನ ಜನರಿಂದ ಗಿಜಿಗುಡುತ್ತಿದ್ದ ರಸ್ತೆಗಳು ಬಿಕೋ ಎನ್ನುತ್ತಿದ್ದವು, ನಗರದ ಎಂ.ಜಿ.ರಸ್ತೆ, ಬಿ.ಹೆಚ್.ರಸ್ತೆ, ಎಸ್.ಎಸ್.ಪುರಂ ರಸ್ತೆಗಳ ಅಂಗಡಿಗಳನ್ನು ವರ್ತಕರು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಅನ್ನಪೂರ್ಣೇಶ್ವರಿ ಸಂಸ್ಥಾನದ ಶ್ರೀಬಸವಲಿಂಗ ಮಹಾಸ್ವಾಮೀಜಿಗಳು,ಗೊಲ್ಲಹಳ್ಳಿಯ ಶ್ರೀವಿಭವ ವಿದ್ಯಾಶಂಕರಸ್ವಾಮೀಜಿ,ಶ್ರೀ ಓಂಕಾರಮುನಿಸ್ವಾಮಿಜೀ, ಶ್ರೀತಿಪ್ಪೇರುದ್ರಸ್ವಾಮೀಜಿ ಪೂರ್ಣಾನಂದ ಆಶ್ರಮ ಕಲ್ಕರೆ,ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ,ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ,ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ಪಂಚಾಕ್ಷರಯ್ಯ,ಸಿಪಿಐ(ಎಂ)ನ ಎನ್.ಕೆ.ಸುಬ್ರಮಣ್ಯ,ಜೆಡಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಎಲ್. ರವಿ, ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ಹೊಳ್ಳ,ಕಾರ್ಯದರ್ಶಿ ವೇದಮೂರ್ತಿ,ಗುರುಪ್ರಕಾಶ್ ಬಳ್ಳೂಕರಾಯ,ಮಾಜಿ ಕೌನ್ಸಿಲರ್ ಕೆ.ಪಿ.ಮಹೇಶ್,ಬೆಳಗುಂಬ ಪ್ರಭಾಕರ್,ವಿವಿಧ ರೈತ ಸಂಘಟನೆ, ಕನ್ನಡಪರ,ಚಿನ್ನ,ಬೆಳ್ಳಿ ವ್ಯಾಪಾರಿಗಳ ಸಂಘ, ಆಟೋ ಚಾಲಕರ ಸಂಘ,ಲಾರಿ ಮಾಲೀಕರ ಸಂಘ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *