ತುಮಕೂರು:ತುಮಕೂರು ಮೂಲ ನಾಲೆಗೆ ಧಕ್ಕೆ ತರುವ ಮಾಗಡಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕು,ಮಾಗಡಿಗೆ ಹಂಚಿಕೆಯಾಗಿರುವ ನೀರನ್ನು ಮೂಲ ನಾಲೆಯ ಮೂಲಕವೇ ತೆಗೆದುಕೊಂಡು ಹೋಗಬೇಕು, ಸರಕಾರ ಎಲ್ಲಾ ಸಂಘಟನೆಗಳೊಂದಿಗೆ ಚರ್ಚಿಸಿ, ಗೊಂದಲಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸಂಯುಕ್ತ ಕರ್ನಾಟಕ-ಕರ್ನಾಟಕ ವತಿಯಿಂದ ಮೇ.29ರ ಬುಧವಾರ ಬೆಳಗ್ಗೆ 11 ಗಂಟೆಗೆ ಹೇಮಾವತಿ ಮುಖ್ಯ ಇಂಜಿನಿಯರ್ ಕಚೇರಿ ಮುತ್ತಿಗೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ತುಮಕೂರು ಜಿಲ್ಲೆಯು ಬರಗಾಲದ ಪರಿಸ್ಥಿತಿಯಲ್ಲಿ ಒದ್ದಾಡುತ್ತಿರುವಾಗ, ರೈತರ ಬೆಳೆಗಳು ಒಣಗುತ್ತಿರುವಾಗ ತುಮಕೂರು ಶಾಖಾ ನಾಲೆಯಿಂದ ನೇರವಾಗಿ ಮಾಗಡಿಗೆ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಏಕಾಏಕಿ ಆರಂಭಿಸಿ ಜಿಲ್ಲೆಯ ಜನರಲ್ಲಿ ಆತಂಕವನ್ನು ಸರಕಾರ ಸೃಷ್ಟಿ ಮಾಡಿದೆ.ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರು ಮತ್ತು ನಾಗರಿಕರು ಕುಡಿಯುವ ನೀರಿಗೆ,ನೀರಾವರಿಗೆ ಹೇಮಾವತಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಹೇಮಾವತಿ ನೀರನ್ನು ನೆಚ್ಚಿಕೊಂಡೇ ಕೃಷಿ ಮತ್ತು ಬದುಕನ್ನು ರೂಪಿಸಿಕೊಂಡಿದ್ದಾರೆ. ಆದ್ದರಿಂದ ನೀರಿನ ಹಂಚಿಕೆಯ ವ್ಯತ್ಯಯವು ತೀವ್ರವಾದ ಕೃಷಿ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.
ಜಲ ಸಂಪನ್ಮೂಲ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು ದಿನಾಂಕ: 11.07.2019 ರಂದು ತುಮಕೂರು ಹೇಮಾವತಿ ನಾಲಾ ವಲಯಕ್ಕೆ 25.31 ಟಿಎಂಸಿ ನೀರನ್ನು ನಿಗದಿಪಡಿಸಿ ಹೊಸದಾಗಿ ಕೆಲವು ಪ್ರದೇಶಗಳನ್ನು ಸೇರಿಸಿದ್ದಾರೆ. ಅದರಂತೆ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿದೆ.ಆದರೆ ಇದುವರೆಗೂ ತುಮಕೂರು ನಾಲಾ ವಲಯಕ್ಕೆ ಹಂಚಿಕೆಯಾಗಿರುವ 24.5 ಟಿಎಂಸಿ ನೀರು ದೊರಕಿಲ್ಲ. ಹಾಗಾದರೆ 25.31 ಟಿಎಂಸಿ ನೀರು ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.ಆದ್ದರಿಂದ ತುಮಕೂರು ಜಿಲ್ಲೆಗೆ ಬರಬೇಕಾದ ನೀರಿನ ಹಂಚಿಕೆಯನ್ನು ಮೊದಲು ಖಚಿತಪಡಿಸಬೇಕು. ಅದಾಗದಿದ್ದರೆ ಲಿಂಕ್ ಕೆನಾಲ್‍ನಿಂದ ನಿರ್ಮಾಣದಿಂದಾಗಿ ಜಿಲ್ಲೆಗೆ ಬರುವ ಅಲ್ಪಸ್ವಲ್ಪ ನೀರು ಭಾಗವಾಗಿ ಮಾಗಡಿಗೆ ಹರಿದು ಹೋಗಬಹುದೆಂದು ಆತಂಕ ತುಮಕೂರು ಜಿಲ್ಲೆಯ ಜನರಲ್ಲಿದೆ ಎಂದರು.
ಈಗಾಗಲೇ ಶಾಖಾ ನಾಲೆಯಿಂದ ಕುಣಿಗಲ್‍ರೆಗೂ ಹೇಮಾವತಿ ನೀರು ಹೋಗುತ್ತಿದೆ.ಇತ್ತೀಚಿಗೆ ಕೋಟ್ಯಾಂತರ ಹಣವನ್ನು ಮೂಲ ನಾಲೆಯ ಅಗಲೀಕರಣ ಮತ್ತು ನಾಲಾ ಅಭಿವೃದ್ಧಿ ಕೆಲಸ ನಡೆದಿದೆ.ಇದೇ ನಾಲೆಯ ಮೂಲಕ ಮಾಗಡಿಗೆ ನೀರನ್ನು ತೆಗೆದುಕೊಂಡು ಹೋಗಬಹುದಿತ್ತು.ಅದು ಸುಲಭ ಮತ್ತು ಖರ್ಚೂ ಕಡಿಮೆ.ಆದರೆ ಅದಕ್ಕೆ ಬದಲಿಗೆ ಗುಬ್ಬಿಯಿಂದ ಹೊಸದಾಗಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿದೆ.ಇದರಿಂದ ಮತ್ತೆ ಕೋಟ್ಯಾಂತರ ಹಣ ದುಂದುವೆಚ್ಚವಾಗುತ್ತದೆ ಮತ್ತು ರೈತರ ಭೂಮಿ ಸ್ವಾಹ ಆಗುತ್ತದೆ.ಅಂತಿಮವಾಗಿ ಇದರ ಹೊರ ಜನರ ಮೇಲೆ ಬೀಳುತ್ತದೆ.ಹಾಗಾಗಿ ಯೋಜನೆಯನ್ನು ನಿಲ್ಲಿಸಬೇಕೆಂಬುದು ತುಮಕೂರು ಜಿಲ್ಲೆಯ ರೈತರ ಒತ್ತಾಯವಾಗಿದೆ ಎಂದು ಎ.ಗೋವಿಂದರಾಜು ತಿಳಿಸಿದರು.
ಎಐಕೆಕೆಎಂಎಸ್‍ನ ಎಸ್.ಎನ್.ಸ್ವಾಮಿ ಮಾತನಾಡಿ,ನೀರಿನ ಹಂಚಿಕೆ ಬಹಳ ಸೂಕ್ಷ್ಮ ವಿಷಯ. ಜನರ ಬದುಕೇ ಪಣವಾಗಿರುತ್ತದೆ. ಅಂತಹ ವಿಷಯದಲ್ಲಿ ಸರಕಾರ ಕೇವಲ ಆಡಳಿತಾತ್ಮಕ ನಿರ್ಧಾರ ತೆಗೆದುಕೊಂಡು ಜಿಲ್ಲೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿದೆ.ಜೊತೆಗೆ ತುಮಕೂರು ಮತ್ತು ರಾಮನಗರ ಜಿಲ್ಲೆಯ ಜನರನ್ನು ಪರಸ್ಪರ ವಿರೋಧಿಗಳಂತೆ ಚಿತ್ರಿಸಲು ಹೊರಟಿದೆ. ಮಾಗಡಿಗೆ ನೀರು ಹರಿಸಲು ಯಾವ ರೀತಿಯಲ್ಲೂ ಅಭ್ಯಂತರವಿಲ್ಲ ಮತ್ತು ವಿರೋಧಿಸಲೂ ಸಾಧ್ಯವೇ ಇಲ್ಲ.ಆದರೆ ತುಮಕೂರಿಗೆ ಅನ್ಯಾಯವಾಗಬಾರದು,ಜನರ ಪ್ರತಿಭಟನೆ,ಅಸಮಾಧಾನ ವ್ಯಾಪಕವಾಗುತ್ತಿದೆ.ಆದ್ದರಿಂದ ಕಾಮಗಾರಿ ನಿಲ್ಲಿಸಿ,ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು.ಬದಲಿಗೆ ಪೈಪ್‍ಲೈನ್ ಜೋಡಣೆ ನಡೆಯುತ್ತಿರುವುದು ಸಂಘರ್ಷ ಏರ್ಪಡುವ ಸÀಂಭವವಿದೆ.ಜೊತೆಗೆ ಸರಕಾರ ವಾಗಲಿ,ತುಮಕೂರಿನ ಜನಪ್ರತಿನಿಧಿಗಳಾಗಲೀ ಮುಂದೆ ಬಂದು ಸಂಬಂಧಪಟ್ಟ ಸಂಘಟನೆಗಳೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಿತ್ತು.ಬದಲಿಗೆ ಮೌನ ವಹಿಸಿರುವುದು ದೊಡ್ಡ ದುರಂತ.ಹಾಗಾಗಿ ಹೇಮಾವತಿ ಮುಖ್ಯ ಇಂಜಿನಿಯರಿಂಗ್ ಕಚೇರಿಗೆ ಮುತ್ತಿಗೆ ಹಾಕಿ, ಜನರಲ್ಲಿ ಉಂಟಾಗಿರುವ ಗೊಂದಲಗಳಿಗೆ ಬಗೆಹರಿಸುವಂತೆ ಒತ್ತಾಯಿಸಲಾಗುವುದು ಎಂದರು.
ಅಖಿಲ ಭಾರತ ಕಿಸಾನ್ ಸಭಾದ ಕಂಬೇಗೌಡ ಮಾತನಾಡಿ, ಎಕ್ಸ್ ಪ್ರೆಸ್ ಕೆನಾಲ್‍ನಿಂದ ಜಿಲ್ಲೆಗೆ ತೀವ್ರ ತೊಂದರೆ ಯಾಗಲಿದೆ. ಆದ್ದರಿಂದ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ನೀರು ಹಂಚಿಕೆಯಾಗಿರುವ ಭಾಗಗಳಿಗೆ ಮೂಲ ನಾಲೆಯ ಮುಖಾಂತರವೇ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕು.ರೈತರ ಭೂಮಿಯನ್ನು ಕಿತ್ತುಕೊಂಡು,ರೈತ ಸಮುದಾಯಕ್ಕೆ ತೊಂದರೆ ನೀಡುವ ಆವೈಜ್ಞಾನಿಕ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಕೆಲಸವನ್ನು ನಿಲ್ಲಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ.ಮೇ.29 ರಂದು ಸಂಯುಕ್ತ ಹೋರಾಟ-ಕರ್ನಾಟಕದೊಂದಿಗೆ ಗುರುತಿಸಿಕೊಂಡಿರುವ ಎಲ್ಲಾ ರೈತ,ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಹೇಮಾವತಿ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕುತಿದ್ದು,ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಬಿ.ಉಮೇಶ್,ಸಿಪಿಐ(ಎಂ)ನ ಎನ್.ಕೆ.ಸುಬ್ರಮಣ್ಯ, ಕರ್ನಾಟಕ ರಾಜ್ಯ ರೈತ ಸಂಘದ ಕೊರಟಗೆರೆ ತಾಲೂಕು ಕಾರ್ಯದರ್ಶಿ ಶಬ್ಬೀರ್ ಪಾಷ ಮತ್ತಿತರರು ಉಪಸ್ಥಿತರಿದ್ದರು.