ಸಂಪುಟ ಸಭೆಯಲ್ಲಿ ಎಕ್ಸ್‍ಪ್ರೆಸ್ ಕೆನಾಲ್ ಕಾಮಗಾರಿಗೆ ಒಪ್ಪಿಗೆ-ಡಾ.ಜಿ.ಪರಮೇಶ್ವರ್

ತುಮಕೂರು- ಕುಣಿಗಲ್‍ಗೆ ಹೆಮಾವತಿಯಿಂದ ನೀರು ತೆಗೆದುಕೊಂಡು ಹೋಗಲು ಎಕ್ಸ್‍ಪ್ರೆಸ್ ಕೆನಾಲ್ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ಗೃಹಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಹೇಳಿದರು.

ಹೇಮಾವತಿ ಎಕ್ಸ್‍ಪ್ರೆಕ್ಸ್ ಲಿಂಕ್ ಕೆನಾಲ್ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

ಹೇಮಾವತಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಯೋಜನೆಯಿಂದ ಜಿಲ್ಲೆಗೆ ಏನೆಲ್ಲಾ ತೊಂದರೆಯಾಗುತ್ತದೆ ಎಂಬುದರ ಬಗ್ಗೆ ನಾನು ಮತ್ತು ಸಚಿವ ರಾಜಣ್ಣನವರು ಸಚಿವ ಸಂಪುಟ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಆದರೆ ಸಂಪುಟ ನಮ್ಮೊಬ್ಬರದ್ದೇ ಅಲ್ಲವಲ್ಲ ಎಂದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸಚಿವ ಸಂಪುಟದಲ್ಲಿ ವಿಷಯ ಪ್ರಸ್ತಾಪವಾಗಿ ಈ ಲಿಂಕ್ ಕೆನಾಲ್ ಮಾಡಬಹುದು ಎಂದು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಇದು ಸರ್ಕಾರದ ತೀರ್ಮಾನ, ನನ್ನ ತೀರ್ಮಾನವಲ್ಲ ಎಂದು ಸ್ಪಷ್ಟಪಡಿಸಿದರು.

ತುಮಕೂರು ಜಿಲ್ಲೆಗೆ ಕುಡಿಯುವ ನೀರು ಮತ್ತು ಸೆಮಿಡ್ರೈಪ್ ನಾಲೆಯಲ್ಲಿ ಹೇಮಾವತಿ ಡ್ಯಾಮ್‍ನಿಂದ 25 ಟಿಎಂಸಿ ನೀರು ಕೊಟ್ಟಿದ್ದಾರೆ. ಆದರೆ ಹಾಸನ ಜಿಲ್ಲೆಯಿಂದ 18 ರಿಂದ 19 ಟಿಎಂಸಿ ನೀರು ನಮ್ಮ ಜಿಲ್ಲೆಗೆ ಇದುವರೆಗೂ ಬಂದಿಲ್ಲ. ಸುಮಾರು 14 ರಿಂದ 15 ಟಿಎಂಸಿ ನೀರು ಬಂದಿರಬಹುದು ಅಷ್ಟೇ ಎಂದರು.

ಗುಬ್ಬಿ ತಾಲ್ಲೂಕು, ತುರುವೇಕೆರೆ, ತಿಪಟೂರಿಗೆ ಕುಡಿಯುವ ನೀರಿಗೆ ಹಂಚಿಕೆಯಾಗಿದೆ. ಇಲ್ಲಿಂದ ಮುಂದೆ ಕುಣಿಗಲ್ ಕೆರೆಗೂ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಮಧ್ಯೆದಲ್ಲಿ ಹೆಬ್ಬೂರಿಗೂ ಏತನೀರಾವರಿ ಮೂಲಕ ನೀರು ಹರಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ಗುಬ್ಬಿ ತಾಲ್ಲೂಕಿನ ಡಿ. ರಾಂಪುರದ ಬಳಿ ಇರುವ 70ನೇ ಕಿ.ಮೀ.ನಿಂದ ನೇರವಾಗಿ ಕುಣಿಗಲ್‍ಗೆ ನೀರು ತೆಗೆದುಕೊಂಡು ಹೋಗಬೇಕೆಂದು ಕಳೆದ ಐದಾರು ವರ್ಷಗಳಿಂದ ಪ್ರಸ್ತಾವನೆ ಇದೆ. ಇದಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ಈ ಬಾರಿ ಸಂಪುಟದಲ್ಲಿ ವಿಷಯ ಮಂಡಿಸಿ, ಸರ್ಕಾರ ಎಕ್ಸ್‍ಪ್ರೆಸ್ ಕೆನಾಲ್ ಮಾಡಬಹುದು ಎಂದು ತೀರ್ಮಾನ ತೆಗೆದುಕೊಂಡಿದೆ ಎಂದರು.

ಈ ಮಧ್ಯೆ ರೈತರು ಈ ಎಕ್ಸ್‍ಪ್ರೆಸ್ ಕೆನಾಲ್ ಕೆಲಸ ಆಗಬಾರದು ಎಂದು ತಡೆದು ನಿಲ್ಲಿಸಿದ್ದಾರೆ. ತಹಶೀಲ್ದಾರ್‍ಗೆ ಮನವಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಬೇಕಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು, ನೀರಾವರಿ ಸಲಚಿವರು, ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದ ಅವರು, ಕಳೆದ ಜಿ.ಪಂ. ಕೆಡಿಪಿ ಸಭೆಯಲ್ಲೂ ಸಹ ಈ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಸ್ಥಗಿತಗೊಳಿಸುವ ಸಂಬಂಧ ನಿರ್ಣಯ ಕೈಗೊಳ್ಳಲಾಗಿತ್ತು. ಸಭೆಯು ತೀರ್ಮಾನ ಮಾಡಿದಂತೆ ಪೆÇ್ರಸಿಡಿಂಕ್ಸ್ ಮಾಡಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೇವೆ ಎಂದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ :

ರಾಜ್ಯದಲ್ಲಿ ಬಿಜೆಪಿಯವರು ಹೇಳುವಂತೆ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಎಲ್ಲವೂ ಸರಿಯಾಗಿದೆ. ಜನತೆ ಶಾಂತಿ-ನೆಮ್ಮದಿಯಿಂದ ಇರಲು ಏನು ಕ್ರಮ ಬೇಕಾದರೂ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ಅವರು ತಿರುಗೇಟು ನೀಡಿದರು.

ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗತ್ತಿರುವ ಬಗ್ಗೆ ಪೆÇಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಒಂದೊಂದು ಘಟನೆಗೂ ಒಂದೊಂದು ಕಾರಣ ಇರುತ್ತದೆ. ಎಲ್ಲದರ ಬಗ್ಗೆಯೂ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಜೆಪಿಯವರ ಕಾಲದಲ್ಲಿ ಎಷ್ಟು ಕೊಲೆಗಳು ಆಗಿದ್ದವು ಎಂಬ ಬಗ್ಗೆ ಅಂಕಿ-ಅಂಶ ಸಹಿತ ಹೇಳುತ್ತೇನೆ. ಆಗ ಯಾರ ಅಧಿಕಾರದ ಅವಧಿಯಲ್ಲಿ ರಾಜ್ಯ ಸುರಕ್ಷಿತವಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.

ಇನ್ನು ನಾಲ್ಕು ವರ್ಷ ಬಿಜೆಪಿಯವರು ರಾಜೀನಾಮೆ ಕೇಳುತ್ತಿರಬೇಕು. ಅವರಿಗೆ ನಮ್ಮ ರಾಜೀನಾಮೆ ಕೇಳುವುದೇ ಕೆಲಸ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

Leave a Reply

Your email address will not be published. Required fields are marked *