ಸಂವಹನದ ಕೊರತೆಯಿಂದ ಶಾಸಕರ ಮೇಲೆ ಸುಳ್ಳು ಆರೋಪ : ಪ್ರಮೋದ್ ಮುತಾಲಿಕ್

ತುಮಕೂರು : ಇತ್ತೀಚೆಗೆ ಪ್ರಮೋದ್ ಮುತಾಲಿಕ್ ರವರು ತುಮಕೂರು ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ, ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಶ್ರೀ ಸಿದ್ಧಿವಿನಾಯಕ ಮಾರುಕಟ್ಟೆ ಜಾಗದಲ್ಲಿ ಬಹುಮಹಡಿ ಕಟ್ಟಡದ ಮಾಲ್ ಮತ್ತು ಪಾರ್ಕಿಂಗ್ ನಿರ್ಮಾಣ ಕಾಮಗಾರಿಯನ್ನು ನಡೆಸಲು ಲ್ಯಾಂಡ್ ಜಿಹಾದ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಅನ್ಯ ಕಾರ್ಯ ನಿಮಿತ್ತ ತುಮಕೂರು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಶ್ರೀ ಸಿದ್ಧಿವಿನಾಯಕ ಮಾರುಕಟ್ಟೆಯ ಶ್ರೀ ಗಣೇಶ ದೇವಸ್ಥಾನದ ಬಗ್ಗೆ ಆಗಲಿ ಹಾಗೂ ಮಾಲ್ ನಿರ್ಮಾಣ ಕಾಮಗಾರಿಯ ಬಗ್ಗೆಯಾಗಲಿ ಸರಿಯಾದ ಮಾಹಿತಿಯ ಕೊರತೆಯಿಂದಾಗಿ ಅಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ತುಮಕೂರು ನಗರ ಶಾಸಕರ ವಿರುದ್ಧ ಆರೋಪವನ್ನ ಮಾಡಿರುತ್ತೇನೆ. ತದನಂತರ ವಿಷಯದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದ ನಾನು ಈ ಮಾರುಕಟ್ಟೆಯ ಕಾಮಗಾರಿಯ ವಿಷಯದಲ್ಲಿ ಬೇರೆ ಯಾವುದೇ ತಪ್ಪನ್ನು ಮಾಡಿರುವುದಿಲ್ಲ ಎಂದು ನನ್ನ ಗಮನಕ್ಕೆ ಬಂದಿರುತ್ತದೆ ಹಾಗೂ ಹಿಂದೂಪರ ಸಂಘಟನೆಗಳ ಒಕ್ಕೂಟ ಹಾಗೂ ಶಾಸಕರ ಮಧ್ಯೆ ಸಂವಹನದ ಕೊರತೆಯಿಂದಾಗಿ ಈ ಅಚಾತುರ್ಯ ನಡೆದಿರುತ್ತದೆ ಎಂದು ಪ್ರಮೋದ್ ಮುತಾಲಿಕ್ ರವರು ವಿಷಾಧಿಸಿದರು. 

 ಮುಂದುವರೆದು, ಇನ್ನು ಮುಂದೆ ಶಾಸಕರಿಗಾಗಲಿ ಹಿಂದೂ ಕಾರ್ಯಕರ್ತರಿಗಾಗಲಿ ಯಾವುದೇ ಭಿನ್ನಾಭಿಪ್ರಾಯ ಇರುವುದಿಲ್ಲ. ಪರಸ್ಪರ ಒಗ್ಗಟ್ಟಿನಿಂದ ಹಾಗೂ ಹೊಂದಾಣಿಕೆಯಿಂದ ಸಮಾಜ ಕಟ್ಟುವ ಕೆಲಸದಲ್ಲಿ ಕೈಜೋಡಿಸುತ್ತಾರೆ ಎಂದು ಆಶಿಸಿದರು. ಈ ಹಿಂದೆ ನಾನು ನಡೆಸಿದ ಪತ್ರಿಕಾಗೋಷ್ಟಿಯಿಂದ ತುಮಕೂರು ನಗರದ ಶಾಸಕರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಇನ್ನು ಅತೀ ಹೆಚ್ಚು ಅಂತರದಿಂದ ಜಯಶೀಲರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

 ಶಾಸಕ  ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಈ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಹಿಂದೂ ಸಂಘಟನೆಗಳಲ್ಲಿ, ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಿಜೆಪಿಯ ಪಕ್ಷದ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಕಾರ್ಯಕರ್ತರನ್ನು  ಗುರುತಿಸಿ, ಅವರ ಮೇಲೆ ಅವರಿಗೆ ಸಂಬಂಧ ಇಲ್ಲದೆ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿ, ರೌಡಿ ಶೀಟರ್ ಮಾಡಲು ನೋಟೀಸ್‍ಗಳನ್ನು ಕಳುಹಿಸುತ್ತಿದ್ದು, ಕಾರ್ಯಕರ್ತರನ್ನು ಹಿಮ್ಮೆಟ್ಟಿಸುವ ಕಾರ್ಯವನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಗಳೊಂದಿಗೆ ನಮ್ಮ ನಿರಂತರ ಹೋರಾಟವಿತ್ತು. ಆದರೆ ಮುಂದಿನ ದಿನಗಳಲ್ಲಿ ಅದನ್ನು ಮತ್ತಷ್ಟು ತೀರ್ವಗೊಳಿಸಿ ಅನಗತ್ಯವಾಗಿ ಹಿಂದೂ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಹಾಕುತ್ತಿರುವ ಸುಳ್ಳು ಮೊಕದ್ದಮೆಗಳನ್ನ ತಡೆಯಲು ಹೋರಾಟವನ್ನ ರೂಪಿಸುತ್ತೇವೆ. ಕಾರ್ಯಕರ್ತರ ರಕ್ಷಣೆಯ ಕಾರ್ಯವೂ ನಮಗೆ ಯಾವತ್ತಿದ್ದರೂ ಸಹ ಮೊದಲೆ ಆಧ್ಯತೆ ಎಂದು ಶಾಸಕರು ನುಡಿದರು.  
ಈ ಸ್ಪಷ್ಟನೆ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಹೆಚ್.ಎಸ್.ರವಿಶಂಕರ್ (ಹೆಬ್ಬಾಕ ರವಿ), ಹಿಂದೂ ಜಾಗರಣ ವೇದಿಕೆಯ ಜಿ.ಕೆ.ಶ್ರೀನಿವಾಸ್, ಮುಂತಾದ ಹಿರಿಯರು ಹಾಗೂ ಕಾರ್ಯಕರ್ತರು ಸಭೆಯಲ್ಲಿದ್ದರು.

Leave a Reply

Your email address will not be published. Required fields are marked *