ತುಮಕೂರು: ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ. ಬಿ. ಎಲ್. ಮುಕುಂದಪ್ಪ ಅವರಿಗೆ ಮಂಗಳವಾರ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ನಿವೃತ್ತಿ ಜೀವನ ಸಾರ್ಥಕವಾಗಬೇಕಾದರೆ ಸುದೀರ್ಘ ವೃತ್ತಿಯಲ್ಲಿನ ಗುರುತು ಮತ್ತು ವ್ಯಕ್ತಿತ್ವ ವಿಶೇಷ, ವಿಭಿನ್ನ ಛಾಪನ್ನು ಮೂಡಿಸಿರಬೇಕು. ಬಂಗಲೆ ಕಟ್ಟಿ ಐಷಾರಾಮಿ ಜೀವನ ನಡೆಸುವುದೇ ಸಾಧನೆಯಾಗುವುದಿಲ್ಲ. ಪರೋಪಕಾರಿ ಬದುಕು ನಡೆಸುವುದೇ ನಿಜವಾದ ಸಾಧನೆ ಎಂದರು.
ವಿವಿಯ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಎಚ್. ಕೆ. ಶಿವಲಿಂಗಸ್ವಾಮಿ ಮಾತನಾಡಿ, ಸಮಾಜಮುಖಿ ಪ್ರಾಧ್ಯಾಪಕರೆಲ್ಲರೂ ಎಂದಿಗೂ ಜೀವಂತವಾಗಿರುತ್ತಾರೆ. ಜನಾನುರಾಗಿ ಆದವರಲ್ಲಿ ಹೃದಯ ಶ್ರೀಮಂತಿಕೆ ಇರುತ್ತದೆ. ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕರ ಸಾಲಿನಲ್ಲಿ ಡಾ. ಮುಕುಂದಪ್ಪ ಅವರು ಮೊದಲ ಸಾಲು ಎಂದರು.
ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ಎಂ. ಶೇಟ್ ಮಾತನಾಡಿ, ತಾಳ್ಮೆ, ನಿಸ್ವಾರ್ಥ ಸೇವೆ, ಸಮಾಜಮುಖಿ ಮನೋಭಾವಕ್ಕೆ ಡಾ. ಮುಕುಂದಪ್ಪ ಅವರು ಹೆಸರುವಾಸಿಯಾಗಿದ್ದರು ಎಂದರು.
1985ರಲ್ಲಿ ಮೈಸೂರು ವಿವಿಯಿಂದ ರಸಾಯನಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, 1986ರಲ್ಲಿ ಸರ್ಕಾರಿ ಪದವಿ ಕಾಲೇಜು, ಮಂಡ್ಯದಲ್ಲಿ ಅಧ್ಯಾಪನ ವೃತ್ತಿಯನ್ನು ಪ್ರಾರಂಭಿಸಿದರು. ನಂತರ, ಶಿರಾ ಪದವಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದರು. ಮುಂದುವರೆದು, 1993ರಲ್ಲಿ ತುಮಕೂರಿನ ಸರ್ಕಾರಿ ವಿಜ್ಞಾನ ಕಾಲೇಜಿಗೆ ಆಗಮಿಸಿದರು.
ಸೇವಾ ಅವಧಿಯಲ್ಲೇ ಗಣಕ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು 2002ರಲ್ಲಿ ಪೂರೈಸಿ, ತಮ್ಮ ಅಧ್ಯಾಪನ ವೃತ್ತಿಯನ್ನು ಗಣಕ ವಿಜ್ಞಾನ ವಿಷಯದಲ್ಲೇ ಮುಂದುವರಿಸಿದರು. 2019ರಲ್ಲಿ ತುಮಕೂರು ವಿವಿಯಿಂದ ಪಿ.ಎಚ್‍ಡಿ ಪದವಿ ಪಡೆದರು. ನಾಲ್ಕು ಪಠ್ಯಪುಸ್ತಕಗಳ ಜೊತೆಗೆ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾಗಿ 3 ವರ್ಷ ಸೇವೆಸಲ್ಲಿಸಿದ್ದಾರೆ. ಒಟ್ಟು 37 ವರ್ಷಗಳ ಸುದೀರ್ಘ ಸೇವೆ ಅವರದ್ದು.
ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ವತಿಯಿಂದ ಗೌರವಿಸಲಾಯಿತು. ವಿವಿ ಕುಲಸಚಿವ ಜೆ. ಮಹೇಶ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನ ಕುಮಾರ್, ಹಣಕಾಸು ಅಧಿಕಾರಿ ಪ್ರೊ. ಪಿ. ಪರಮಶಿವಯ್ಯ, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.