ತುಮಕೂರು:ರೈತ ಹೋರಾಟಗಾರರ ಹೆಸರನ್ನು ಮುಂದಿನ ಪೀಳಿಗೆಗೆ ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಕರ್ನಾಟ್ಕ ರಾಜ್ಯ ರೈತ ಸಂಘ,ತುಮಕೂರು ಜಿಲ್ಲೆಯವತಿಯಿಂದ ಹೆಬ್ಬೂರಿನಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರ ಹೆಸರಿನಲ್ಲಿ ಭವನ ನಿರ್ಮಾಣ ಮಾಡಿ,ಅವರ ಪುತ್ಥಳಿ ಆನಾವರಣ ಮಾಡಿ, ಹೊಸ ಪದ್ದತಿಗೆ ನಾಂದಿ ಹಾಡಿದೆ ಎಂದು ಪಾಂಡವರಪರ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟಿದ್ದಾರೆ.
ಹೆಬ್ಬೂರಿನಲ್ಲಿ ರೈತ ಸಂಘದವತಿಯಿಂದ ಆಯೋಜಿಸಿದ್ದ ರೈತ ಭವನ ಉದ್ಘಾಟನೆ ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ಪುತ್ಥಳಿ ಆನಾವರಣ ಮತ್ತು 6ನೇ ವರ್ಷದ ನೆನಪಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಸಂಘವೇ ತನ್ನ ಸ್ವಂತ ಅನುದಾನದಲ್ಲಿ ಒಂದು ಭವನ ನಿರ್ಮಾಣ ಮಾಡುವ ಮೂಲಕ ಇಡೀ ರೈತ ಸಂಘಕ್ಕೆ ಒಂದು ನೆಲೆಯನ್ನು ಕಲ್ಪಿಸಿದೆ. ಇದು ಮಾದರಿ ಕೆಲಸವಾಗಿದ್ದು,ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಈ ರೀತಿಯ ಭವನ ನಿರ್ಮಾಣಕ್ಕೆ ಮುಂದಾಗುವುದಾಗಿ ತಿಳಿಸಿದರು
ಪುಟ್ಟಣ್ಣಯ್ಯ ರೈತ ಭವನ ಉದ್ಘಾಟಿಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ,ರೈತ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಕನಸು ಇದಾಗಿತ್ತು.ಪ್ರತಿ ಜಿಲ್ಲೆಯಲ್ಲಿಯೂ ಒಂದೊಂದು ಭವನ ನಿರ್ಮಾಣ ಮಾಡಬೇಕೆಂಬ ಮಹಾದಾಸೆಯನ್ನು ಹೊಂದಿದ್ದರು.ಆದನ್ನು ಇಂದು ತುಮಕೂರು ಜಿಲ್ಲೆಯವರು ನೇರವೇರಿಸಿದ್ದಾರೆ.ಇನ್ನೂ ಉಳಿದ ಜಿಲ್ಲೆಗಳಲ್ಲಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಲ್ಲಿಯೂ ಈ ಕೆಲಸ ಮಾಡಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಎರಡನೇ ಬಾರಿಗೆ ದೆಹಲಿಯಲ್ಲಿ ಲಕ್ಷಾಂತರ ರೈತರ ಅನಿರ್ಧಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ.ಆದರೆ ಅವರು ದೆಹಲಿಯ ಒಳ ಪ್ರವೇಶಿಸಿದಂತೆ ತಂತಿ ಬೇಲಿ, ಸಿಮೆಂಟ್ ಗೋಡೆಗಳನ್ನು ನಿರ್ಮಿಸಿ ತಡೆಯುವ ಪ್ರಯತ್ನ ನಡೆಸಿದೆ. ಇದು ನಿಜಕ್ಕೂ ಸರ್ವಾಧಿಕಾರಿ ಧೋರಣೆ.ಇದನ್ನು ಖಂಡಿಸಿ ರಾಜ್ಯದಲ್ಲಿಯೂ ಪ್ರತಿಭಟನೆಗಳು ನಡೆಯಲಿವೆ.ಹಾಗೆಯೇ ರಾಜ್ಯದಲ್ಲಿ ಕರಾಳ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆಗಳು ನಡೆಯಲಿವೆ.ಎಲ್ಲರೂ ಕೈಜೋಡಿಸಬೇಕೆಂದು ಬಡಗಲಪುರ ನಾಗೇಂದ್ರಪ್ಪ ಮನವಿ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆದಿ ಚುಂಚನಿಗಿರಿಯ ಶಾಖಾ ಮಠದ ಶ್ರೀಮಂಗಳನಾಥಸ್ವಾಮೀಜಿ ಮಾತನಾಡಿ,ವಿಧಾನಸಭೆಯಲ್ಲಿ ರೈತರ ಬಗ್ಗೆ ಅತ್ಯಂತ ನಿಖರವಾಗಿ ಅಂಕಿ,ಆಂಶಗಳ ಮೂಲಕ ಮಾತನಾಡುತ್ತಿದ್ದ ವ್ಯಕ್ತಿ ಕೆ.ಎಸ್.ಪುಟ್ಟಣ್ಣಯ್ಯ,ಅವರ ಪುತ್ರರಾದ ದರ್ಶನ್ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ. ರೈತ ಸಂಘ ತುಮಕೂರು ಜಿಲ್ಲಾ ಘಟಕ ಅವರ ಹೆಸರಿನಲ್ಲಿ ಭವನವೊಂದನ್ನು ನಿರ್ಮಿಸಿ,ಮುಂದಿನ ಪೀಳಿಗೆಗೆ ಪುಟ್ಟಣ್ಣಯ್ಯ ಅವರ ಹೆಸರನ್ನು ಹಸಿರಾಗಿಸಿದೆ. ಇದೊಂದು ಒಲ್ಳೆಯ ಕೆಲಸ. ಇಂತಹ ಕೆಲಸಗಳು ಮುಂದೆಯೂ ನಡೆಯಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ಹೆಬ್ಬೂರಿನಲ್ಲಿ ರೈತಭವನ ನಿರ್ಮಾಣ ಮಾಡಿರುವುದು ನಿಜಕ್ಕು ಒಳ್ಳೆಯ ಬೆಳೆವಣಿಗೆ. ರೈತ ಸಂಘದ ಹಲವಾರು ಹೋರಾಟದ ಫಲವಾಗಿ ಹಲವಾರು ಕರಾಳ ಕಾಯ್ದೆಗಳನ್ನು ಸರಕಾರ ವಾಪಸ್ ಪಡೆದಿದೆ.ಇದು ನಿಜಕ್ಕೂ ರೈತರು ಹೋರಾಟದ ಒಂದು ಮೈಲಿಗಲ್ಲು, ಅದೇ ರೀತಿ ಎಂ.ಎಸ್.ಪಿ.ಕಾಯ್ದೆಗಾಗಿ ಹೋರಾಟ ನಡೆಸುತ್ತಿರುವ ರೈತರು ಯಶಸ್ವಿಯಾಗಲಿದ್ದಾರೆ ಎಂಬ ವಿಶ್ವಾಸ ನಮ್ಮಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು ವಹಿಸಿದ್ದರು.ವೇದಿಕೆಯಲ್ಲಿ ಅರೆ ಶಂಕರ ಮಠದ ಶ್ರೀಸಿದ್ದರಾಮಚೈತನ್ಯ ಸ್ವಾಮೀಜಿ,ರಾಜ್ಯ ರೈತ ಸಂಘದ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ್,ಮಹೇಶ್ ಪ್ರಭು,ರಾಜ್ಯ ಕಾರ್ಯದರ್ಶಿ ಗೋಪಾಲ್,ಜಿ.ಸಿ.ಶಂಕರಪ್ಪ, ರವೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.