ಉಂಡೆ ಕೊಬ್ಬರಿಗೆ ಉಂಡೆ ನಾಮ ತಿಕ್ಕುತ್ತಿರುವವರು ಯಾರು? ನೆಫಡ್‍ಗೇಕೆ ರೈತರು ತಲೆ ಹಾಕಲ್ಲ

ತುಮಕೂರು : ನೆಫಡ್ ಅಡಿಯಲ್ಲಿ ಕೊಬ್ಬರಿ ಕೊಳ್ಳುವುದಾಗಿ ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದ್ದು, ನೆಫಡ್‍ಗೆ ರೈತರು ಹೋಗದಂತೆ ಉಂಡೆ ಕೊಬ್ಬರಿಗೆ ಉಂಡೆ ನಾಮ ಇಕ್ಕುವವರು ಯಾರು? ಈ ಪುರುಷಾರ್ಥಕ್ಕೆ ನೆಫಡ್ ಅನ್ನುವ ಖರೀದಿ ಕೇಂದ್ರಗಳನ್ನೇಕೆ ತೆರೆಯಬೇಕು?

ಉಂಡೆ ಕೊಬ್ಬರಿ ಖರೀದಿ ಕೇಂದ್ರಗಳನ್ನು 21 ಕಡೆ ತೆರೆಯಲಾಗುವುದು ಎಂದು ಪ್ರಕಟಣೆ ಹೊರ ಬಿದ್ದ ಕೂಡಲೇ ಒಂದು ಕ್ವಿಂಟಾಲ್ ಕೊಬ್ಬರಿಯ ಬೆಲೆಯು 10,000 ರೂ.ಗಳಿಗೆ ಏರಿಕೆ ಕಂಡಿದೆ.

ನೆಫಡ್ ಕೇಂದ್ರಗಳನ್ನು ತೆರೆಯಲಾಗುವುದ ಎಂದ ಕೂಡಲೇ ಕೊಬ್ಬರಿ ವರ್ತಕರು 7500 ಇದ್ದ ಕ್ವಿಂಟಾಲ್ ಕೊಬ್ಬರಿಯನ್ನು 8500 ರೂ.ಗಳು. 9800 ನಂತರ 10,000ರೂ.ಗಳನ್ನು ಕ್ವಿಂಟಾಲ್ ಕೊಬ್ಬರಿಗೆ ಮಾಡಿದ್ದಾರೆ.

ಜನವರಿ 20ರೊಳಗೆ ಕ್ವಿಂಟಾಲ್ ಕೊಬ್ಬರಿಗೆ 11,000ರೂ.ಗಳನ್ನು ಮಾಡಿ ನೆಫಡ್ ಕಡೆ ರೈತರು ಯಾರು ಹೋಗದಂತೆ ಮಾಡಲಾಗುತ್ತದೆ, ಹೌದು ರೈತರೇಕೆ ಸರ್ಕಾರಿ ಕೊಬ್ಬರಿ ಕೇಂದ್ರಗಳಿಗೆ ಹೋಗುವುದಿಲ್ಲ ಎಂದರೆ, ನೆಫಡ್‍ಗೆ ಕೊಬ್ಬರಿ ತೆಗೆದುಕೊಂಡು ಹೋದರೆ ಅಲ್ಲಿಯ ಅಧಿಕಾರಿಗೆ ಕ್ವಂಟಾಲ್‍ಗೆ 1 ಸಾವಿರ ರೂ.ಗಳ ಲಂಚ ನೀಡಬೇಕು, ಅದಲ್ಲದೆ ತೆಗೆದುಕೊಂಡು ಹೋದ ಕೊಬ್ಬರಿಯಲ್ಲಿ ಸಣ್ಣದು, ದೊಡ್ಡದು ಎಂದು ವಿಂಗಡಿಸಿ ದೊಡ್ಡ ಉಂಡೆ ಕೊಬ್ಬರಿಗಳನ್ನು ಮಾತ್ರ ತೆಗದೆಉಕೊಂಡು ಸಣ್ಣ ಕೊಬ್ಬರಿಯನ್ನು ತಿರಸ್ಕರಿಸುತ್ತಾರೆ, ಅಮೇಲೆ ಡ್ರೈ ಇಲ್ಲ ಅಂತ ಮತ್ತಷ್ಟನ್ನು ತಿರಸ್ಕರಿಸುತ್ತಾರೆ, ಇದಲ್ಲದೆ ಅಮಾಲಿಗಳು ಒಂದು ಕ್ವಿಂಟಾಲ್‍ಗೆ ಒಂದು ಕೆ.ಜಿ.ಕೊಬ್ಬರಿಯನ್ನು ಎತ್ತಿಟ್ಟುಕೊಳ್ಳುತ್ತಾರೆ ಇದರಿಂದ ಒಬ್ಬ ರೈತ 10 ಕ್ವಿಂಟಾಲ್ ಕೊಬ್ಬರಿ ತಂದರೆ ಸುಮಾರು 20 ಸಾವಿರ ರೂ.ಗಳು ಆತನಿಗೆ ನಷ್ಟವಾಗಿತ್ತದೆ.

ಇಪ್ಪತ್ತು ಸಾವಿರ ನಷ್ಟ ಮಾಡಿಕೊಳ್ಳುವ ಬದಲು ಕೊಬ್ಬರಿ ಮಂಡಿಯವರು 11 ಸಾವಿರ ಹಣವನ್ನು ಸಣ್ಣ-ದಪ್ಪ ಎನ್ನದೆ ನೀಡುವುದರಿಂದ ಮತ್ತು ಕೊಬ್ಬರಿ ತೂಗಿದ ಕ್ಷಣದಲ್ಲೇ ಹಣವನ್ನೂ ನೀಡುತ್ತಾರೆ, ನೆಫಡ್‍ನಂತೆ ಎರಡು, ಮೂರು ತಿಂಗಳು ಕಾಯುವಂತೆ ಮಾಡುವುದಿಲ್ಲ.

ಅದೂ ನೆಫಡ್ ಕೇಂದ್ರಗಳನ್ನು ಕೇವಲ 3 ತಿಂಗಳಿಗೆ ತೆರೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದ್ದು, 3 ತಿಂಗಳ ನಂತರ ರೈತರು ಯಾರಿಗೆ ಕೊಬ್ಬರಿ ಮಾರಬೇಕು. ಆಗ ಮತ್ತೆ ಕೊಬ್ಬರಿ ಮಂಡಿಗಳಿಗೇ ಹೋಗಬೇಕು. ಈ ಹಿನ್ನಲೆಯಲ್ಲಿ ನೆಫಡ್ ಕೇಂದ್ರಗಳಿಗೆ ಹೋಗುವುದೇ ಬ್ಯಾಡ ನಮ್ಮ ಕಷ್ಟ ಸುಖಕ್ಕೆ ಆಗುವ ಮಂಡಿ ಮಾಲೀಕರಿಗೇ ಕೊಬ್ಬರಿ ಬಿಡೋಣ, ಕೇಳಿದರೆ ಕಷ್ಟ ಕಾಲದಲ್ಲಿ ಸಾಲವನ್ನೂ ನೀಡುತ್ತಾರೆ ಎಂಬುದು ರೈತರ ಮನೋಭಾವ.

ಇದರ ಜೊತೆಗೆ ತಿಪಟೂರಿನಲ್ಲಿರುವ ಎಲ್ಲಾ ಮಂಡಿಗಳೂ ಬಹುತೇಕ ರಾಜಕಾರಣಿಗಳದ್ದೆ, ಶಾಸಕ ಕೆ.ಷಡಕ್ಷರಿ, ಮಾಜಿ.ಸಚಿವ ಬಿ.ಸಿ.ನಾಗೇಶ್ ಅವರುಗಳ ಕೊಬ್ಬರಿ ಮಂಡಿಯಿದ್ದರೆ, ಇನ್ನೊಬ್ಬ ರಾಜಕಾರಣಿ ಬಿ.ನಂಜಾಮರಿಯವರವರು ರವಾನೆದಾರರಾಗಿದ್ದರೆ. ಇದರಿಂದಲೇ ತಿಪಟೂರಿನಲ್ಲಿ ಕೊಬ್ಬರಿ ವರ್ತಕರೇ ಶಾಸಕರಾಗಿ ಆಯ್ಕೆಯಾಗಿ ಕೊಬ್ಬರಿ ಬೆಳೆಗಾರರಿಗೆ ಉಂಡೆನಾಮ ತಿಕ್ಕುತ್ತಿದ್ದಾರೆ.

ರಾಜಕಾರಣಿಗಳೇ ಮಂಡಿಗಳನ್ನು ಮಾಡಿರುವುದರಿಂದ ಕೊಬ್ಬರಿ ಬೆಲೆ ಏರಿಕೆಯಾಗುವುದು, ರೈತ ದುಡ್ಡಿನ ಮುಖ ನೋಡುವುದು ಅಷ್ಟಾಗಿ ಇಷ್ಟ ಪಡುವುದಿಲ್ಲ, ರೈತರಿಗೆ ದುಡ್ಡು ಬಂದರೆ ನಾಳೆ ಬೆಳಿಗ್ಗೆ ರೈತರು ರಾಜಕಾರಣಿ ಮನೆ ಮುಂದಕ್ಕೆ ಹೋಗುವುದಿಲ್ಲ.

ಈ ಹಿನ್ನೆಲಯಲ್ಲಿ ಎಷ್ಟು ನೆಫಡ್ ಕೇಂದ್ರಗಳನ್ನು ತೆರೆದರೂ ಅವು ಒಂದೆರಡು ವಾರಗಳಲ್ಲೆ ಉಂಡೆ ಕೊಬ್ಬರಿ ಕೊಳ್ಳದೆ ಉಂಡೆ ನಾಮ ಇಕ್ಕಿಕೊಂಡು ಮುಚ್ಚಿಕೊಂಡು ಹೋಗುತ್ತವೆ.

ಎಲ್ಲಿಯ ತನಕ ರೈತನಿಗೆ ಕೊಬ್ಬರಿ ಬಿಟ್ಟ ಕೂಡಲೇ ಹಣ ನೀಡುವುದು, ಕೊಬ್ಬರಿ ವಿಂಗಡಿಸದೇ ತೆಗೆದುಕೊಳ್ಳುವಂತೆ ಆಗುವುದಿಲ್ಲವೋ ಅಲ್ಲಿಯತನಕ ನೆಫಡ್ ಕಡೆಗೆ ರೈತರೇ ತಲೆ ಹಾಕುವುದಿಲ್ಲ, ಅದರ ಜೊತೆಗೆ ಅಲ್ಲಿಯ ಅಧಿಕಾರಿಗಳ ದರ್ಪ, ದವಲತ್ತು, ಹೇಳ ತೀರದು.

ನೆಫಡ್ ಅಧಿಕಾರಿಗಳಿಗೆ ಕೊಬ್ಬರಿ ಬಂದರೆ 1000 ರೂಪಾಯಿ ಲಂಚ ಬರದಿದ್ದರೂ ವರ್ತಕರಿಂದ ಕ್ವಿಂಟಾಲ್‍ಗೆ 500 ರೂ.ಪಾಯಿ ಬಂದೆ ಬರುತ್ತದೆ ಈ ಹಿನ್ನಲೆಯಲ್ಲಿ ಬಾಯಿ ಬಡಕೊಂಡು ಕೊಬ್ಬರಿ ಯಾಕೆ ಕೊಳ್ಳಬೇಕು ಎಂಬುದು ನೆಫಡ್ ಅಧಿಕಾರಿಗಳ ಧೋರಣೆಯಾಗಿದೆ.

ಅದೇನೋ ಹೇಳುತ್ತಾರೆಲ್ಲ ದೇವರು ಕೊಟ್ಟರೂ, ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ನೆಫಡ್ ಉಂಡೆ ಕೊಬ್ಬರಿಯ ಕಥೆ.

ಜಿಲ್ಲಾಡಳಿತವು ಪ್ರತೀ ದಿನ ಅಧಿಕಾರಿಗಳು ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ನಿರ್ದೇಶಿಸಿದ್ದು, ಖರೀದಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಹಾಗೂ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಸೂಚನೆ ನೀಡಿದೆ.

ಸರ್ಕಾರದ ನಿರ್ದೇಶನದನ್ವಯ ಪ್ರತಿ ಕ್ವಿಂಟಲ್ ಗುಣಮಟ್ಟದ ಉಂಡೆ ಕೊಬ್ಬರಿಗೆ 12,000 ರೂ.ಗಳನ್ನು ನಿಗಧಿಪಡಿಸಲಾಗಿದೆ.  ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ನಫೆಡ್   ಹಾಗೂ ರಾಜ್ಯ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವನ್ನು ನೇಮಿಸಲಾಗಿದೆ.    ಖರೀದಿ  ಸಂಸ್ಥೆಗಳು ಖರೀದಿ ಪ್ರಕ್ರಿಯೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಜನವರಿ 20 ರಿಂದ ಅನ್ವಯವಾಗುವಂತೆ 45 ದಿನಗಳವರೆಗೆ ರೈತರ ನೋಂದಣಿ ಕಾರ್ಯದ ಜೊತೆಗೆ ಖರೀದಿಯನ್ನೂ ಸಹ ಪ್ರಾರಂಭಿಸಬೇಕು ಎಂದು ನಿರ್ದೇಶನ ನೀಡಿದೆ.

ಖರೀದಿ ಸಂಸ್ಥೆಗಳು ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ನಫೆಡ್ ಮಾರ್ಗಸೂಚಿಯನ್ನು ಅನುಸರಿಸಬೇಕು. ಖರೀದಿಸಿದ ಕೊಬ್ಬರಿಯನ್ನು ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೂಡಿರುವ ಗೋದಾಮುಗಳಲ್ಲಿ ದಾಸ್ತಾನು ಮಾಡಬೇಕು ಎಂದರಲ್ಲದೆ ಕೊಬ್ಬರಿ ಖರೀದಿಸುವಾಗ ಪ್ರತಿ ಎಕರೆಗೆ ಗರಿಷ್ಠ 6 ಕ್ವಿಂಟಲ್ ಹಾಗೂ ಪ್ರತಿ ರೈತರಿಂದ 20 ಕ್ವಿಂಟಲ್ ಖರೀದಿ ಪ್ರಮಾಣವನ್ನು ನಿಗಧಿಪಡಿಸಬೇಕೆಂದು ನಿರ್ದೇಶನ ನೀಡಿದೆ.

ಖರೀದಿ ಕೇಂದ್ರಗಳಲ್ಲಿ ರೈತರಿಂದ ಮಾತ್ರ ಉಂಡೆ ಕೊಬ್ಬರಿಯನ್ನು ಖರೀದಿಸಬೇಕು. ರೈತರ ಹೆಸರಿನಲ್ಲಿ ವರ್ತಕರು ತರುವ ಕೊಬ್ಬರಿಯನ್ನು ಖರೀದಿಸದಂತೆ ಹಾಗೂ ಖರೀದಿಯಲ್ಲಿ ಯಾವುದೇ ರೀತಿ ಲೋಪವಾಗದಂತೆ ಕಟ್ಟೆಚ್ಚರ ವಹಿಸಬೇಕು. ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಉತ್ಪನ್ನದ ಮೌಲ್ಯವನ್ನು ಡಿಬಿಟಿ ಮೂಲಕ ಜಮೆಯಾಗುವಂತೆ ಪಾವತಿ ಮಾಡಬೇಕು. ಎಂದು ಸೂಚನೆ ನೀಡಿದೆ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *