ರೈತರ ಅನುಮತಿಯಿಲ್ಲದೆ ಭೂಸ್ವಾಧೀನ ರೈತ ಸಂಘದಿಂದ ಪ್ರತಿಭಟನೆ

ತುಮಕೂರು:ನಂದಿಹಳ್ಳಿ, ಮಲ್ಲಸಂದ್ರ, ವಸಂತನರಸಾಪುರ ಪ್ರಸ್ತಾಪಿತ ಔಟರ್ ರಿಂಗ್‍ರಸ್ತೆಗೆ ಸರಕಾರ ರೈತರ ಅನುಮತಿ ಇಲ್ಲದೆ ಭೂಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಕ್ರಮವನ್ನು ಖಂಡಿಸಿ ವಿವಿಧ ರೈತ ಪರ ಸಂಘಟನೆಗಳು ಅಕ್ಟೋಬರ್ 13 ರಂದು ಹಮ್ಮಿಕೊಂಡಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಗೆ ಸಂಬಂಧಿಸಿದಂತೆ ಪೂರ್ವ ಭಾವಿಯಾಗಿ ಇಂದು ಭಾದಿತ ಪ್ರದೇಶಗಳ ಜಾಗೃತಿ ಜಾಥಾಕ್ಕೆ ಇಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು,ಸರಕಾರ ನಂದಿಹಳ್ಳಿ, ಮಲ್ಲಸಂದ್ರ,ವಸಂತನರಸಾಪುರ ಔಟರ್ ರಿಂಗ್ ರಸ್ತೆಗೆ ತುಮಕೂರು ತಾಲೂಕಿನ ಸುಮಾರು 46 ಹಳ್ಳಿಗಳ 650 ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಇದರಿಂದ ನೂರಾರು ಎಕರೆಯಲ್ಲಿ ಬೆಳೆದಿರುವ ಅಡಿಕೆ, ತೆಂಗು ಬೆಳೆಗಳ ಜೊತೆಗೆ, ಕೊಳವೆ ಬಾಳಿ, ತೆರದ ಬಾವಿ ಮೂಲಕ ನೀರು ತೆಗೆದು ತರಕಾರಿ, ಹಣ್ಣು, ಹೂವು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಅಲ್ಲದೆ ಸಾವಿರಾರು ಜನ ಕೃಷಿ ಕೂಲಿ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಸರಕಾರ ರೈತರೊಂದಿಗೆ ಚರ್ಚಿಸದೆ,ಸೋಷಿಯಲ್ ಅಸಸ್‍ಮೆಂಟ್ ಮಾಡದೆ ಭೂಸ್ವಾಧೀನಕ್ಕೆ ಮುಂದಾಗಿದೆ.ಇದರಿಂದ ಸುಮಾರು 750ಕ್ಕೂ ರೈತ ಕುಟುಂಬಗಳು ಬೀದಿಗೆ ಬರಲಿದ್ದಾರೆ.ಅಲ್ಲದೆ ಪರೋಕ್ಷವಾಗಿ ಸಾವಿರಾರು ಕುಟುಂಬಗಳ ಬದುಕು ಮೂರಾಬಟ್ಟೆಯಾಗಲಿದೆ.ಹಾಗಾಗಿ ಸರಕಾರ ಕೂಡಲೇ ಔಟರ್ ರಿಂಗ್ ರೋಡ್ ಪ್ರಸ್ತಾಪ ಕೈಬಿಟ್ಟು, ಹಾಲಿ ಇರುವ ರಸ್ತೆಯನ್ನೇ ಆಗಲೀಕರಣ ಮಾಡಿ,ಕೈಗಾರಿಕಾ ಪ್ರದೇಶಗಳಿಗೆ ಸುಗಮ ದಾರಿ ಕಲ್ಪಿಸಬೇಕೆಂದು ಆಗ್ರಹಿಸಿದರು.

ಸರಕಾರದ ಪ್ರಸ್ತಾಪಿತ ಔಟರ್ ರಿಂಗ್ ರೋಡ್‍ಗೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದೆ.ಹೊಸ ರಸ್ತೆಯಿಂದ ಜನಜೀವನದ ಮೇಲಾಗುವ ದುಷ್ಪರಿಣಾಮಗಳ ಕುರಿತು ಮನವರಿಕೆ ಮಾಡಿಕೊಟ್ಟಿದ್ದರೂ ನಮ್ಮ ಮನವಿಯನ್ನು ಪುರಸ್ಕರಿಸದೆ,ಬಂಡವಾಳಿಗರಿಗೆ ನೆರವಾಗಲು ಮುಂದಾಗಿದೆ.ರಸ್ತೆಯ ಜೊತೆಗೆ, ರಸ್ತೆಯ ಇಕ್ಕೆಲಗಳ ಐದಾರು ಕಿ.ಮಿ. ಭೂಮಿಯನ್ನು ಸಹ ವಶಪಡಿಸಿಕೊಂಡು ಕೈಗಾರಿಕಾ ವಲಯ ಸ್ಥಾಪಿಸಲು ಸರಕಾರ ಹುನ್ನಾರ ನಡೆಸಿದೆ.ಇಂದು ಭಾಧಿತ ಜನರು ಮಾತ್ರ ಪ್ರತಿಭಟಿಸುತಿದ್ದಾರೆ. ಆದರೆ ಸುತ್ತಮುತ್ತಲ ಜನರು ಎಚ್ಚೆತ್ತುಕೊಳ್ಳದಿದ್ದರೆ,ನಮ್ಮ ಭೂಮಿ ಕಿತ್ತು ಕಾರ್ಪೋರೇಟ್ ಕೂಳಗಳಿಗೆ ನೀಡಲಿದೆ.ಹಾಗಾಗಿ ಅಕ್ಟೋಬರ್ 13ರ ಹೋರಾಟಕ್ಕೆ ಈ ಭಾಗದ ಎಲ್ಲಾ ರೈತರು, ಮಹಿಳೆಯರು,ಹೋರಾಟಗಾರರು, ಕೃಷಿ ಕಾರ್ಮಿಕರು ಪಾಲ್ಗೊಳ್ಳುವಂತೆ ಎ.ಗೋವಿಂದರಾಜು ಮನವಿ ಮಾಡಿದರು.

ಪ್ರಾಂತ ರೈತ ಸಂಘದ ಬಿ.ಉಮೇಶ್ ಮಾತನಾಡಿ,ಸರಕಾರ ಅಭಿವೃದ್ದಿ ಎಂಧರೆ ಜನರ ಪರವಾಗಿಲ್ಲ. ಅದು ಕಾರ್ಪೋರೇಟ್ ಪರವಾಗಿದೆ.ಹೆದ್ದಾರಿ, ಬೈಪಾಸ್, ವಿಮಾನ ನಿಲ್ದಾಣ, ಪ್ಲೇಒವರ್ ಮೂಲಕ ರೈತರ ಭೂಮಿಯನ್ನು ಕಸಿದುಕೊಂಡು, ಕೃಷಿಕರು ಮತ್ತು ಅವರ ಅವಲಂಬಿತರನ್ನು ಬೀದಿ ಪಾಲು ಮಾಡಲು ಮುಂದಾಗಿದೆ.ರೈತರ ಹೊಲಗದ್ದೆಗಳಿಗೆ ಹೋಗಲು ಇಂದಿಗೂ ರಸ್ತೆಯಿಲ್ಲ.ರೈತರು ರಸ್ತೆ ಕೇಳಿದರೆ ಹತ್ತಾರು ಕುಂಟು ನೆಪ ಹೇಳುವ ಅಧಿಕಾರಿಗಳು, ಕಾರ್ಪೋರೇಟರ್ ಕುಳಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ.ಬೆಂಗಳೂರು,ಮುಂಬೈ,ಹೈದ್ರಾಬಾದ್,ಚನೈ ನಗರಗಳಲ್ಲಿ ವಾಸವಿರುವ ಕೈಗಾರಿಕೋದ್ಯಮಿಗಳ ರಸ್ತೆ ಮಾಡಿ ಕೊಡಲು ಮುಂದಾಗಿದೆ. ಸರಕಾರದ ಈ ಹುನ್ನಾರವನ್ನು ವಿರೋಧಿಸಿದರು.

ಎಐಕೆಕೆಎಂಎಸ್‍ನ ಜಿಲ್ಲಾಧ್ಯಕ್ದ ಎಸ್.ಎನ್.ಸ್ವಾಮಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ,ಕರ್ನಾಟಕ ರಾಜ್ಯ ರೈತ ಸಂಘ, ಅಖಿಲ ಭಾರತ ರೈತ, ಕೃಷಿ ಕಾರ್ಮಿಕ ಸಂಘಟನೆ, ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾದ ಮುಖಂಡರುಗಳಾದ ಜಿ.ಎಸ್.ಶಂಕರಪ್ಪ, ಉದಯಕುಮಾರ್,ಚಿಕ್ಕಬೋರೇಗೌಡ,ಕಂಬೇಗೌಡ,ಅಜ್ಜಪ್ಪ, ತಿಮ್ಮೇಗೌಡ, ರಂಗಹನುಮಯ್ಯ, ಶಬ್ಬೀರ್,ಭಾದಿತ ಗ್ರಾಮಗಳ ಮುಖಂಡರಾದ ನಂದಿಹಳ್ಳಿ ದಾಸೇಗೌಡ,ಚಂದ್ರಪ್ಪ, ಪ್ರಮೋದ್,ಹಳೆನಿಜಗಲ್ಲು ಗ್ರಾ.ಪಂ.ಸದಸ್ಯೆ ಪುಪ್ಪಕಲಾ,ದೇವರ ಹೊಸಹಳ್ಳಿಯ ಪ್ರಭುದೇವರು,ಕೊಳ್ಳಿಹಳ್ಳಿ ಕುಮಾರ್, ಪಾಪಯ್ಯ,ಭೈರಸಂದ್ರ ರಮೇಶಪ್ಪ, ಸಿದ್ದಗಂಗಯ್ಯ, ರಾಜೇಶೇಖರ್, ಸುರೇಶ್.ಬಿ.ಕೆ., ಉದಯಕುಮಾರ್,ಅಶ್ವಥನಾರಾಯಣ್,ಕೌತುಮಾರನಹಳ್ಳಿಯ ಧರ್ಮಯ್ಯ, ಮಲ್ಲೇಶ್, ರೇಣುಕಯ್ಯ, ಕಿತ್ತಗಾನಹಳ್ಳಿಯ ನರಸಿಂಹರಾಜು, ಮೋಹನಕುಮಾರ್, ಗೋಪಾಲಯ್ಯ, ಸುರೇಶ.ಜೆ.ಸಿ.ಬಿ, ಮಾನಂಗಿ, ಚಿಕ್ಕಹೊಸೂರಿನ ಲಿಂಗರಾಜು, ಚಿಕ್ಕಹನುಮಂತಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಇದೇ ವೇಳೆ ಕಿತ್ತಗಾನಹಳ್ಳಿಯ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಶಾಖೆಗಳನ್ನು ಉದ್ಘಾಟಿಸಲಾಯಿತು.

Leave a Reply

Your email address will not be published. Required fields are marked *