ರೈತರು ಮಧ್ಯವರ್ತಿಗಳಿಗೆ ಪಹಣಿಗಳನ್ನು ಕೊಡಬೇಡಿ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ತುಮಕೂರು : ರೈತರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ತಮ್ಮ ಪಹಣಿಗಳನ್ನು ಕೊಡಬಾರದು. ರೈತರೇ ಖುದ್ದಾಗಿ ನೋಂದಣಿ ಮಾಡಿಕೊಳ್ಳಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಡಿಬಿಟಿಯನ್ನು ಅನುಷ್ಠಾನಗೊಳಿಸಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ, ಆಹಾರ ಸಂಸ್ಕರಣಾ, ಕೈಗಾರಿಕೆಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದರು

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ನ್ಯಾಪೆಡ್ ಕರ್ನಾಟಕ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಸಹಯೋಗದಲ್ಲಿ ಏರ್ಪಡಿಸಿದ್ದ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕೊಬ್ಬರಿಗೆ ಬೆಂಬಲ ಬೆಲೆಯಾಗಿ ಪ್ರತಿ ಕ್ವಿಂಟಾಲ್‍ಗೆ 12,000 ರೂ. ನಿಗಧಿ ಮಾಡಿದ್ದು, ರಾಜ್ಯ ಸರ್ಕಾರ 1,500 ರೂ. ನಿಗಧಿ ಮಾಡಿದೆ. ರಾಜ್ಯದ ಎಲ್ಲಾ ಭಾಗಗಳಲ್ಲೂ ಉಂಡೆ ಕೊಬ್ಬರಿ ಖರೀದಿ ಕೇಂದ್ರಗಳನ್ನು ರೈತರ ಅನುಕೂಲಕ್ಕಾಗಿ ತೆರೆಯಲಾಗಿದೆ. ಖರೀದಿ ಕೇಂದ್ರದಲ್ಲಿ ಫೆಬ್ರವರಿಯಿಂದ ಏಪ್ರಿಲ್‍ವರೆಗೆ ಒಟ್ಟು 90 ದಿವಸಗಳ ಕಾಲ ಕೊಬ್ಬರಿ ಖರೀದಿ ಮಾಡಲಾಗುವುದು. ಅಗತ್ಯವಿದ್ದರೆ ಖರೀದಿಯ ಕಾಲಾವಕಾಶವನ್ನು ವಿಸ್ತರಿಸಲಾಗುವುದು. ಕಳೆದ ಬಾರಿ ನಿರೀಕ್ಷೆಯ ಮಟ್ಟದಲ್ಲಿ ಕೊಬ್ಬರಿ ಖರೀದಿ ಆಗಿಲ್ಲ. ಈ ಬಾರಿ ಹೆಚ್ಚು ಖರೀದಿ ಆಗುವ ನಿರೀಕ್ಷೆ ಇದೆ. ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಈ ಬಗ್ಗೆ ಗಮನ ವಹಿಸಿ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಜನಪರ ಯೋಜನೆಗಳ ಪರಿಣಾಮದಿಂದಾಗಿ ನಮಗೆ ಬೇಕಾದಷ್ಟು ಆಹಾರವನ್ನು ಬೆಳೆಯುವಷ್ಟು ನಮ್ಮ ರೈತರು ಶಕ್ತರಾಗಿದ್ದಾರೆ. ರೈತರು ಸಕಾಲಕ್ಕೆ ಮಳೆ ಇಲ್ಲದೆ, ಹವಾಮಾನ ವೈಪರಿತ್ಯದ ನಡುವೆಯೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ, ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿಕೊಂಡು ಬರುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದರು.

    ಎಲ್ಲಾ ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ರೈಲ್ವೆ, ಹೆದ್ದಾರಿ, ಸೇರಿದಂತೆ ಯಾವುದೇ  ಯೋಜನೆಯಾದರೂ ಸರಿ ರಾಜ್ಯ ಸರ್ಕಾರಗಳಿಗೆ  ಕೇಂದ್ರ ಸರ್ಕಾರದ ಸಹಕಾರ ಇದ್ದೇ ಇರುತ್ತದೆ. ಅಭಿವೃದ್ಧಿ ವಿಷಯದಲ್ಲಿ ಕೇಂದ್ರದ ನೆರವು ಸದಾ ಇರುತ್ತದೆ ಎಂದರು.


  ರಾಜ್ಯದಲ್ಲಿನ ಬರ  ಪರಿಸ್ಥಿಯ ಬಗ್ಗೆ  ಮಾತನಾಡಿದ ಅವರು,   ಕೇಂದ್ರದ  ನೀತಿ ಆಯೋಗ ತಿಳಿಸಿರುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿ ಖಾತೆಯನ್ನು ತೆರೆಯಬೇಕು. ಆಗ ಮಾತ್ರ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಸಾಧ್ಯ ಎಂದು ಹೇಳಿದರು.
ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ್ ಅವರು ಮಾತನಾಡಿ ಕೃಷಿಗಾಗಿ ರೈತ ತನ್ನೆಲ್ಲಾ  ಸಂಪನ್ಮೂಲವನ್ನು ಹಾಕಿ ಬದುಕನ್ನು ಕಟ್ಟಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ತೆಂಗು ಬೆಳೆಯನ್ನು ಹೆಚ್ಚಾಗಿ ಬೆಳೆಯುವ ರೈತರು ಇದ್ದಾರೆ. ಈ ನಾಡಿನ ಕೊಬ್ಬರಿಗೆ ದೇಶದಾದ್ಯಂತ ಬೇಡಿಕೆ ಹೆಚ್ಚಾಗಿದೆ. ಗುಜರಾತಿನಲ್ಲಿ ಹೆಚ್ಚು ಬೇಡಿಕೆ ಇದೆ. ರಾಜ್ಯದಲ್ಲಿ 60,500 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಉತ್ಪತ್ತಿಯಾಗುತ್ತಿದೆ ಎಂದು ತಿಳಿಸಿದರಲ್ಲದೆ, ಕೇಂದ್ರ ಸರ್ಕಾರವು ಉಂಡೆ ಕೊಬ್ಬರಿಗೆ  15 ಸಾವಿರ ರೂ.ಗಳ ಬೆಂಬಲ ಬೆಲೆ ನೀಡಬೇಕು. ರಾಜ್ಯ ಸರ್ಕಾರದಿಂದ  2 ಸಾವಿರ ರೂ. ಬೆಂಬಲ ಬೆಲೆ ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು.  ಇದರಿಂದ ಕೊಬ್ಬರಿ ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  ಅವರಿಗೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಅಧ್ಯಕ್ಷರು ಹಾಗೂ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ್, ಸಂಸದರಾದ ಜಿ.ಎಸ್. ಬಸವರಾಜು, ತುಮಕೂರು ಗ್ರಾಮಾಂತರ ಶಾಸಕರಾದ ಬಿ. ಸುರೇಶ್ ಗೌಡ ಮಾತನಾಡಿದರು.

ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಹಾಪೌರರಾದ ಪ್ರಭಾವತಿ ಎಂ., ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *