ರೈತರು ಮಳೆಯಾಶ್ರಿತ ಪ್ರದೇಶದಲ್ಲಿ ಸಿರಿಧಾನ್ಯವನ್ನು ಬೆಳೆಯಲು ಮುಂದಾಗಬೇಕು-ಜಿಲ್ಲಾಧಿಕಾರಿ

ತುಮಕೂರು : ನೀರಿನ ಸಮಸ್ಯೆ ಇರುವ ಪ್ರದೇಶದಲ್ಲಿಯೂ ಸಿರಿಧಾನ್ಯವನ್ನು ಬೆಳೆಯಬಹುದು. ಹಾಗಾಗಿ ರೈತರು ಮಳೆಯಾಶ್ರಿತ ಪ್ರದೇಶದಲ್ಲಿ ಸಿರಿಧಾನ್ಯವನ್ನು ಬೆಳೆಯಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಕರೆ ನೀಡಿದರು.

ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ಸಾವಯವ ಮೇಳ-2025ರ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ
ಸಿರಿಧಾನ್ಯ ನಡಿಗೆಗೆ ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗದಲ್ಲಿಂದು ಚಾಲನೆ ನೀಡಿದ ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ದೇಶದಲ್ಲಿ ಹಸಿರು ಕ್ರಾಂತಿ ನಂತರ ಸಿರಿಧಾನ್ಯ ಬಳಕೆ ಮತ್ತು ಬೆಳೆಯುವುದು ಕಡಿಮೆಯಾಗಿದೆ. ನಮ್ಮ ಹಿರಿಯರು ಹೆಚ್ಚು ಸಿರಿಧಾನ್ಯವನ್ನು ಬಳಕೆ ಮಾಡುತ್ತಿದ್ದುದರಿಂದ ಉತ್ತಮ ಆರೋಗ್ಯವನ್ನು ಹೊಂದಿದ್ದರು. ಸಿರಿಧಾನ್ಯದಲ್ಲಿ ಅಧಿಕ ನಾರಿನಂಶ ಇರುವುದರಿಂದ ಆರೋಗ್ಯದಾಯಕ. ಆರೋಗ್ಯದ ಹಿತದೃಷ್ಟಿಯಿಂದ ಸಿರಿಧಾನ್ಯವನ್ನು ಹೆಚ್ಚು ಹೆಚ್ಚು ಬಳಸಿ ಆರೋಗ್ಯವಂತರಾಗಬೇಕು ಎಂದು ಅವರು ಹೇಳಿದರು.

ವಿಶ್ವದಾದ್ಯಂತ ಸಿರಿಧಾನ್ಯ ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಿಸುವ ಸಲುವಾಗಿ ರಾಜ್ಯದಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ 10,000 ರೂ.ಗಳ ಪೆÇ್ರೀತ್ಸಾಹ ಧನ ನೀಡಲಾಗುವುದು ಎಂದರು.
ಸಿರಿಧಾನ್ಯ ಬೆಳೆಯುವ ಬಗ್ಗೆ ರೈತರಲ್ಲಿ ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕು. ಜಿಲ್ಲೆಯಲ್ಲಿ 2,500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿರುವ ಸಿರಿಧಾನ್ಯ ಪ್ರದೇಶವನ್ನು 10,000 ಹೆಕ್ಟೇರ್‍ಗೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಕೆಲಸ ಮಾಡುವ ಅಗತ್ಯವಿದೆ ಎಂದು ಸೂಚನೆ ನೀಡಿದರು.

ಸಿರಿಧಾನ್ಯ ಬಳಕೆ ಹೆಚ್ಚಾದಾಗ ಮಾತ್ರ ಬೇಡಿಕೆ ಹೆಚ್ಚಾಗುತ್ತದೆ. ವಿದೇಶ ಸೇರಿದಂತೆ ನಗರ ಪ್ರದೇಶಗಳಲ್ಲಿ ಸಿರಿಧಾನ್ಯ ಬಳಕೆಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ: ರಮೇಶ್ ಮಾತನಾಡಿ, 2024-25ನೇ ಸಾಲಿನಲ್ಲಿ ಸಿರಿಧಾನ್ಯ ಬೆಳೆಯುವ ರೈತರು ಮತ್ತು ಗ್ರಾಹಕರಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ವಾಕ್‍ಥಾನ್ ಹಮ್ಮಿಕೊಳ್ಳಲಾಗಿದೆ. ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜನವರಿ 13 ಮತ್ತು 14ರಂದು ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳವನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೇಳದ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು.

ರೈತರಿಗೆ ಉತ್ತಮ ಬೆಲೆ ದೊರಕಿಸಿ ಕೊಡುವ ಸಲುವಾಗಿ ಜನವರಿ 23, 24, 25ರಂದು ಬೆಂಗಳೂರಿಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳದ ಪೂರ್ವಭಾವಿಯಾಗಿ ಜಿಲ್ಲಾ ಕೇಂದ್ರದಲ್ಲಿ ಸಿರಿಧಾನ್ಯ ನಡಿಗೆ, ಸಿರಿಧಾನ್ಯ ಮೇಳವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ತುಮಕೂರು ವಿವಿ ಮುಂಭಾಗದಿಂದ ಆರಂಭವಾದ ಸಿರಿಧಾನ್ಯ ನಡಿಗೆಯು ಬಿ.ಹೆಚ್.ರಸ್ತೆ ಮೂಲಕ ಎಸ್.ಐ.ಟಿ., ಗಂಗೋತ್ರಿ ನಗರ, ಎಸ್.ಎಸ್.ಪುರಂ ಮಾರ್ಗವಾಗಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ ತಲುಪಿತು.

ಇದೇ ವೇಳೆ ಸಿರಿಧಾನ್ಯದಿಂದ ಸಿದ್ದಪಡಿಸಿದ್ದ ಆಹಾರವನ್ನು ಸಿರಿಧಾನ್ಯ ನಡಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಉಣಬಡಿಸಲಾಯಿತು.

ಈ ಸಂದರ್ಭದಲ್ಲಿ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ: ಕೆ. ನಾಗಣ್ಣ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೆಸ್ವಾಮಿ, ನಿರ್ಮಿತಿ ಕೇಂದ್ರದ ರಾಜಶೇಖರ್, ಉಪ ಕೃಷಿ ನಿರ್ದೇಶಕರಾದ ಡಾ. ಹೆಚ್.ಎಲ್. ಚಂದ್ರಕುಮಾರ್ ಹಾಗೂ ಹುಲಿರಾಜ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಚೈತನ್ಯ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜು, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ|| ಗಿರೀಶ್‍ರೆಡ್ಡಿ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶಿವಶಂಕರ್, ಬಿಸಿಎಂ ಇಲಾಖೆಯ ರಂಗಸ್ವಾಮಿ, ರವಿಕುಮಾರ್, ಪ್ರದೀಪ್ ಸೇರಿದಂತೆ ಎಲ್ಲಾ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಶಾಲಾ-ಕಾಲೇಜಿನ ಮಕ್ಕಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *