
ತುಮಕೂರು:ಧರ್ಮದ ಮೂಲಕ ಕಾನೂನು ಪಾಲನೆ ಆಗಬೇಕು,ಹೆಣ್ಣು ಭ್ರೂಣಹತ್ಯೆ ನಿಲ್ಲಬೇಕು,ಪ್ರಸವ ಪೂರ್ವ ಗರ್ಭಿಣಿಯ ಭ್ರೂಣ ಹತ್ಯೆ ಮಾಡಿದರೆ ಸಂಬಂಧಪಟ್ಟವರಿಗೆ ಜೈಲು ಗ್ಯಾರಂಟಿ,ಹುಟ್ಟಿದ ಎಲ್ಲರೂ ಜನನ ಪ್ರಮಾಣಪತ್ರವನ್ನು ಪಡೆಯಬೇಕು,6 ವರ್ಷದ ನಂತರ ಪ್ರತಿ ಹೆಣ್ಣು ಮಕ್ಕಳು ಕಡ್ಡಾಯ ಶಿಕ್ಷಣ ಪಡೆಯಬೇಕು ಇದಕ್ಕಾಗಿ ಕಾಯ್ದೆ ಇದೆ,14 ವರ್ಷದ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯಬಾರದು ಶಾಲೆಗೆ ಹೋಗಬೇಕು,ಕೌಟುಂಬಿಕ ದೌರ್ಜನ್ಯವಾದರೆ ತಕ್ಷಣವೇ ಸಂಬಂಧಪಟ್ಟವರ ಮೇಲೆ ಕೇಸು ದಾಖಲಿಸಬಹುದು,ಪೋಕ್ಸೋ ಕಾಯ್ದೆ,ವರದಕ್ಷಿಣೆ ನಿಷೇಧ ಕಾಯ್ದೆ,ವಿಚ್ಛೇದನ,ಹೀಗೆ ಹಲವಾರು ಕಾಯಿದೆಗಳ ಬಗ್ಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ನೂರುನ್ನೀಸರವರು ತಿಳಿಸಿದರು.
ಅವರು ಇಂದು ಚಿಲುಮೆ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೋಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳಾ ಪರ ಕಾನೂನಿನ ಬಗ್ಗೆ ಮಾತನಾಡಿದರು.
ಮಕ್ಕಳ ಮೇಲೆ ತಂದೆ-ತಾಯಿಯರು ಗಮನ ಹರಿಸಬೇಕು,ಮಕ್ಕಳ ಕೈಗೆ ಮೊಬೈಲ್ ನೀಡಬಾರದು,ಹೆಣ್ಣು ಮಕ್ಕಳನ್ನು ಒಬ್ಬರನ್ನೇ ಎಲ್ಲೆಂದರಲ್ಲಿ ಬಿಟ್ಟು ಹೋಗಬಾರದು,ಇಂದಿನ ದಿನಗಳಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿಯುತ್ತಿರುವುದರಿಂದ ಮಕ್ಕಳ ಮೇಲೆ ನಿಗಾ ಕಡಿಮೆಯಾಗಿದೆ,ಮಹಿಳೆ ತಾಯಿಯ ಸ್ಥಾನವನ್ನು ನಿರ್ವಹಿಸುವಲ್ಲಿ ವಿಫಲಳಾಗುತ್ತಿದ್ದಾಳೆ,ಮಕ್ಕಳಿಗೆ ನೈತಿಕ ಶಿಕ್ಷಣ,ಸಂಸ್ಕಾರ ನೀಡಿ,ಹೆಣ್ಣು ಭ್ರೂಣ ಹತ್ಯೆ ತಡೆಯಲು ಹೆಣ್ಣೇ ಹೋರಾಟ ಮಾಡಬೇಕು, ಗಂಡು ಹೆಣ್ಣಿನ ಅಂತರ ಕಡಿಮೆಯಗಬೇಕು ಪ್ರತಿ ಸಾವಿರ ಗಂಡಿಗೆ 900 ಹೆಣ್ಣು ಮಕ್ಕಳಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ತಾಲ್ಲೋಕು ಯೋಜನಾಧಿಕಾರಿ ಸುನಿತಾಪ್ರಭುರವರು ಹೆಣ್ಣು ಮಕ್ಕಳಿಗೆ ಇಂದಿಗೂ ಸಮಾನತೆ ಸಿಕ್ಕಿಲ್ಲ,ಸಮಾನ ಸ್ಥಾನಮಾನಗಳು ಸಿಗಬೇಕಾದರೆ ಹೆಣ್ಣು ಆರ್ಥಿಕವಾಗಿ,ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು,ಡಾ||ಡಿ.ವೀರೇಂದ್ರಹೆಗ್ಗಡೆರವರು ಪ್ರತಿ ಹೆಣ್ಣು ಅಬಲಳಲ್ಲ ಸಬಲಳು ಎಂದು ಹೇಳುತ್ತಾ ಆಕೆಯ ಜೀವನಕ್ಕೆ ಬೇಕಾದ ಎಲ್ಲ ಸಹಾಯಗಳನ್ನು ಮಾಡುತ್ತಿದ್ದಾರೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸ್ಪೂರ್ತಿ ಚಿದಾನಂದ್ ರವರು ಹೆಣ್ಣಿಗೆ ಎಲ್ಲವೂ ಸಾಧ್ಯವಿದೆ,ಧರ್ಮಸ್ಥಳ ಸಂಘ ಆಕೆಯನ್ನು ಸಮಾಜಮುಖಿಯಗಿ ಮಾಡುತ್ತಿದೆ,ಹೆಣ್ಣಿನ ಸ್ಥಾನಮಾನಗಳು ಆಕೆಯ ಸಂಸ್ಕಾರದೊಂದಿಗೆ ರೂಪುಗೊಳ್ಳುತ್ತದೆ,ನಾಲ್ವಡಿ ಕೃಷ್ಣರಾಜ ಒಡೆಯರ್ ರವರು 1906ರಲ್ಲಿ ಪ್ರಥಮ ಮಹಿಳಾ ಕಾಲೇಜನ್ನು ತೆರೆದು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿದ್ದರು ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯೋಜನಾ ನಿರ್ದೇಶಕರಾದ ದಯಾಶೀಲರವರು ಸಂಸ್ಥೆಯಿಂದ ಇಂತಹ ಮಹಿಳಾ ವಿಚಾರಗೋಷ್ಠಿ ಮಾಡುತ್ತಿರುವ ಉದ್ದೇಶ ಮಹಿಳೆಯರಿಗೆ ಜ್ಞಾನವನ್ನು ನೀಡುವುದು,ಆಕೆಗೆ ಕಾನೂನು ಮತ್ತು ಪೋಲೀಸ್ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡುವುದು,ಡಾ||ಡಿ.ವೀರೇಂದ್ರಹೆಗ್ಗಡೆರವರು ಸ್ವಸಹಾಯ ಸಂಘದ ಸದಸ್ಯರಿಗೆ ಎಲ್ಲ ರೀತಿಯ ನೆರವನ್ನು ನೀಡುತ್ತಿದ್ದಾರೆ,ಜ್ಞಾನ ವಿಕಾಸ ಕೇಂದ್ರಗಳು ಮಹಿಳೆಯರಿಗೆ ವರದಾನವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ವಿಠಲಪೂಜಾರಿ,ಎ.ಎಸ್ಪಿ.ವಿ.ಮರಿಯಪ್ಪ,ಸಂಧ್ಯಾಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.