ತುಮಕೂರು : ಭ್ರೂಣಲಿಂಗ ಪತ್ತೆ ಮಾಡುವ ವ್ಯಕ್ತಿ-ಸ್ಕ್ಯಾನಿಂಗ್ ಕೇಂದ್ರದ ಬಗ್ಗೆ ನಿಖರ ಮಾಹಿತಿ ನೀಡಿದವರಿಗೆ 1 ಲಕ್ಷ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಡಿ.ಎನ್. ಮಂಜುನಾಥ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಜಿಲ್ಲಾ ಸಲಹಾ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ಪಿಸಿ ಅಂಡ್ ಪಿಇನ್‍ಡಿಟಿ ಕಾಯ್ದೆಯಡಿ ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಮಾಡುವ ಕ್ಲಿನಿಕ್ ಅಥವಾ ವೈದ್ಯರ ಬಗ್ಗೆ ನಿಖರ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡಲು ಸರ್ಕಾರದಿಂದ ನಿಗಧಿಪಡಿಸಲಾಗಿದೆ ಎಂದರಲ್ಲದೆ ವೈದ್ಯಕೀಯ ಗರ್ಭಪಾತಕ್ಕೆ ಸಂಬಂಧಿಸಿದ ವರದಿಗಳನ್ನು ಸ್ಕ್ಯಾನಿಂಗ್ ಕೇಂದ್ರಗಳು ಕಡ್ಡಾಯವಾಗಿ 2 ವರ್ಷಗಳ ಕಾಲ ಸಂರಕ್ಷಿಸಿಡಬೇಕು. ಗರ್ಭಿಣಿಯರನ್ನು ಸ್ಕ್ಯಾನಿಂಗ್ ಕೇಂದ್ರಗಳಿಗೆ ರೆಫರ್ ಮಾಡುವ ಮುನ್ನ ರೆಫರಲ್ ಸ್ಲಿಪ್ ಅತ್ಯಗತ್ಯ. ರೆಫರಲ್ ಸ್ಲಿಪ್‍ನಲ್ಲಿ ಕಡ್ಡಾಯವಾಗಿ ಆರ್‍ಸಿಹೆಚ್ ಐಡಿಯನ್ನು ನಮೂದಿಸಬೇಕು. ರೆಫರಲ್ ಸ್ಲಿಪ್ ಹಾಗೂ ಆರ್‍ಸಿಹೆಚ್ ಐಡಿ ಇಲ್ಲದೆ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡುವಂತಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ನೋಂದಣಿ ಹಾಗೂ ನವೀಕರಣಕ್ಕೆ ಬಂದ ಸ್ಕ್ಯಾನಿಂಗ್ ಕೇಂದ್ರಗಳಿಗೆ ಅನುಮತಿ ನೀಡಲಾಯಿತು. ಸ್ಕ್ಯಾನಿಂಗ್ ವೈದ್ಯರಿಗೆ 2 ಸೆಂಟರ್‍ಗಳಲ್ಲಿ ಮಾತ್ರ ಕರ್ತವ್ಯ ನಿರ್ವಹಿಸಲು ಅವಕಾಶವಿದ್ದು, 2 ಸೆಂಟರ್‍ಗಳಲ್ಲಿ ಮಾತ್ರ ಕರ್ತವ್ಯ ನಿರ್ವಹಿಸುವ ಬಗ್ಗೆ ಅಫಿಡವಿಟ್ ನೀಡಿದ ವೈದ್ಯರನ್ನು ಎಂಪ್ಯಾನಲ್ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ|| ಕೆ.ಬಿ. ರೇಖಾ, ಜಿಲ್ಲಾಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ|| ಲೋಕೇಶ್ ರೆಡ್ಡಿ, ಮಕ್ಕಳ ತಜ್ಞ ಡಾ|| ಸಂತೋಷ್, ವಕೀಲ ಕುಮಾರಸ್ವಾಮಿ ಸೇರಿದಂತೆ ಮತ್ತಿತರರಿದ್ದರು.