ತುಮಕೂರು : ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಪ್ರಥಮದರ್ಜೆ ಗುತ್ತಿಗೆದಾರರಾಗಿರುವ ರಾಯಸಂದ್ರ ಅವರು ಗುಬ್ಬಿ ಶಾಸಕರಾದ ಎಸ್.ಆರ್.ಶ್ರೀನಿವಾಸ್(ವಾಸಣ್ಣ) ಅವರ ಮೇಲೆ ಅಪಹರಣ, ಗುಂಪು ಗಲಭೆಯಲ್ಲಿ ತೀವ್ರ ಗಾಯ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆ ಕಾಯ್ದೆಯಡಿ ಪ್ರಕರಣವನ್ನು ದಾಖಲು ಮಾಡಿದ್ದು, ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಜಾಮೀನು ಸಿಗುವುದೇ? ಕಾದು ನೋಡ ಬೇಕಿದೆ.
ಐಪಿಸಿ ಸೆಕ್ಷನ್ 511, 506, 504, 143, 149, 323, 363 ಅಡಿಯಲ್ಲಿ ಎಫ್ಐಆರ್ ನ್ನು ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್ 511,506 ಬೆದರಿಕೆ, ಐಪಿಸಿಸೆಕ್ಷನ್ ಐಪಿಸಿ504 ಶಾಂತಿ ಭಂಗ, ಐಪಿಸಿ ಸೆಕ್ಷನ್ 323 ಅಪಹರಣ, ಐಪಿಸಿ ಸೆಕ್ಷನ್ 143 ಕಾನೂನು ಬಾಹಿರ ಚಟುವಟಿಕೆ ಮತ್ತು ಐಪಿಸಿ ಸೆಕ್ಷನ್ 149 ಕಾನೂನು ಬಾಹಿರ ಚಟುವಟಿಕೆಯಡಿ ದೂರು ದಾಖಲಿಸಲಾಗಿದೆ.
ಎಸ್.ಆರ್. ಶ್ರೀನಿವಾಸ್ ಅವರು ಶಾಸಕರಾಗಿರುವುದರಿಂದ ಪ್ರಜಾ ಪ್ರತಿನಿಧಿ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ. ಆದ್ದರಿಂದ ಪ್ರಜಾಪ್ರತಿನಿಧಿ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಪಡೆಯಬೇಕಾಗಿದೆ.
ಅಪಹರಣ ಬೆದರಿಕೆ, ಗುಂಪುಗಲಭೆ, ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದಾರೆಂದು ಕ್ರಿಮಿನಲ್ ಪ್ರಕರಣ ದಾಖಲಾಗಿರುವುದರಿಂದ ಆರೋಪಿಯನ್ನು ತಕ್ಷಣವೇ ಬಂಧಿಸಬಹುದು.ಭಾನುವಾರ ನ್ಯಾಯಾಲಯಗಳಿಗೆ ರಜೆ ಇರುವುದರಿಂದ ಹಾಗೂ ಎಸ್.ಆರ್ ಶ್ರೀನಿವಾಸ್ ಅವರು ಪ್ರಜಾ ಪ್ರತಿನಿಧಿಯಾಗಿರುವುದರಿಂದ .ಪ್ರಜಾಪ್ರತಿನಿಧಿ ವಿಶೇಷ ನ್ಯಾಯಾಲಯದಲ್ಲಿಯೇ ಜಾಮೀನನ್ನು ಪಡೆಯಬೇಕಾಗಿರುತ್ತದೆ.
ಪ್ರಜಾ ಪ್ರತಿನಿಧಿ ವಿಶೇಷ ನ್ಯಾಯಾಲಯವು ಬೆಂಗಳೂರಿನಲ್ಲಿದ್ದು, ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಪ್ರಜಾಪ್ರತಿನಿಧಿ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದ ನಂತರ ಜಾಮಿನಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಶಾಸಕ ಎಸ್ .ಆರ್. ಶ್ರೀನಿವಾಸ್ ರವರಿಗೆ ಜಾಮೀನು ಸಿಗುವುದು ಒಂದೆರಡು ದಿನ ತಡವಾಗಬಹುದು ಎನ್ನಲಾಗುತ್ತಿದೆ.
ಘಟನೆಯ ಹಿನ್ನೆಲೆ ಏನು
ತುಮಕೂರು ಜಿಲ್ಲೆಯ ಗುಬ್ಬಿ, ತಿಪಟೂರು ತಾಲ್ಲೂಕುಗಳ ಗಣಿಬಾಧಿತ ಪ್ರದೇಶಗಳಿಗೆ ಮೂಲಭೂತಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ 2023ರ ಸೆಪ್ಟೆಂಬರ್‍ನಲ್ಲಿ ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆ ಟೆಂಡರ್ ಕರೆಯಲಾಗಿತ್ತು. ರಾಯಸಂದ್ರ ರವಿಕುಮಾರ್ ಅವರಿಗೆ ಟೆಂಡರ್ ಆಗಿತ್ತು. ಈ ಟೆಂಡರ್‍ಗೆ ದಾಖಲೆ ಸಹಿತ ಕರಾರು ಮಾಡಿಕೊಳ್ಳಲು ಹೋದಾಗ ನಿಮ್ಮ ಟೆಂಡರ್ ರದ್ದಾಗಿದೆ ಎಂದು ರಾಯಸಂದ್ರ ರವಿಕುಮಾರ್ ಅವರಿಗೆ ಕಾರ್ಯಪಾಲಕ ಇಂಜಿನಿಯರ್ ತಿಮ್ಮರಾಯಪ್ಪ ಹೇಳಿದ್ದಾರೆ. ನನಗೆ ನ್ಯಾಯಯುತವಾಗಿ ಆಗಿರುವ ಟೆಂಡರನ್ನು ಕರಾರು ಮಾಡಿಕೊಡಬೇಕೆಂದು ಕಾರ್ಯಪಾಲಕ ಎಂಜಿನಿಯರ್ ತಿಮ್ಮರಾಯಪ್ಪ ವಿರುದ್ಧ ಅಹೋರಾತ್ರಿ ಪಿಡಬ್ಲ್ಯುಡಿ ಇಲಾಖೆ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದಾಗಿ ರವಿಕುಮಾರ್ ರಾಯಸಂದ್ರ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮಾರ್ಚ್ 14ರ ರಾತ್ರಿ 10.30ರ ವೇಳೆಯಲ್ಲಿ ನನ್ನ ಮೇಲೆ ಮೇಲೆ ಗುಬ್ಬಿ ಶಾಸಕರಾದ ಎಸ್.ಆರ್. ಶ್ರೀನಿವಾಸ್(ವಾಸಣ್ಣ) ಮತ್ತು ಅವರ ಬೆಂಬಲಿಗರು ನಾನು ಧರಣಿ ನಡೆಸುತ್ತಿದ್ದ ಕುಣಿಗಲ್ ರಸ್ತೆಯ ಪಿಡಬ್ಲುಡಿ ಕಛೇರಿ ಆವರಣಕ್ಕೆ ಏಕಾಏಕಿ ನುಗ್ಗಿ ನನ್ನ ಹೊಡೆದು, ಗಾಯಗೊಳಿಸಿ, ಅಪಹರಣಕ್ಕೆ ಪ್ರಯತ್ನಿಸಿದಾಗ ತಪ್ಪಿಸಿಕೊಂಡು ಓಡಿ ಹೋಗಿ, ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಪಡೆದು, ನಂತರ ತುಮಕೂರು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ನಾನು ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಪಡೆದ ನಂತರ ದೂರು ನೀಡಿರುವುದಾಗಿ ತಿಳಿಸಿರುವ ರವಿಕುಮಾರ್ ರಾಯಸಂಸಂದ್ರ ಅವರು, ಈ ಮೇಲಿನ ಸೆಕ್ಷನ್‍ಗಳಡಿ ಈಗ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಎಫ್‍ಐಆರ್ ದಾಖಲಿಸಲು2 ದಿನ ರಾಜಕೀಯ ಹೈಡ್ರಾಮ.

ರಾಯಸಂದ್ರ ರವಿಕುಮಾರ್ ಆವರು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ, ಜಾಗತಿಕ ಲಿಂಗಾಯತ ಯುವ ವೇದಿಕೆ ರಾಜ್ಯ ಸಂಚಾಲಕರಾಗಿರುವುದರಿಂದ ಪ್ರಕರಣವನ್ನು ರಾಜೀ ಸಂಧಾನದ ಮೂಲಕವೇ ಬಗೆ ಹರಿಸಲು ಮಾಜಿ ಸಂಸದರು ಹಾಗೂ ಹಾಲಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ಪಿ.ಮುದ್ದಹನುಮೇಗೌಡ ಅವರು ಸತತ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ, ಈ ಹಿನ್ನಲೆಯಲ್ಲಿಯೇ ಎಫ್‍ಐಆರ್ ದಾಖಲಾಗಲು 48 ಗಂಟೆ ತಡವಾಯಿತೆನ್ನಲಾಗಿದ್ದು, ರವಿಕುಮಾರ್ ರಾಯಸಂದ್ರ ಅವರು ಗೃಹಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಆಪ್ತರೂ ಆಗಿದ್ದು, ರಾಜೀ ಸಂಧಾನ ಮಾಡಿಸಲು ರಾಜಕೀಯ ಹೈಡ್ರಾಮ ನಡೆದಿದ್ದರಿಂದ ಎಫ್‍ಐಆರ್ ದಾಖಲಿಸಲು 48 ಗಂಟೆ ಬೇಕಾಯಿತೆನ್ನಲಾಗಿದೆ.

ಜಿಲ್ಲಾ ಆಸ್ಪತ್ರೆಗೆ ಬಿಜೆಪಿ ಅಭ್ಯರ್ಥಿಯೂ ಆಗಿರುವ ವಿ.ಸೋಮಣ್ಣ ಸಹ ಭೇಟಿ ನೀಡಿ ರವಿಕುಮಾರ್ ಅವರ ಆರೋಗ್ಯವನ್ನು ವಿಚಾರಿಸಿದರು.
7 ವಿಧಾನ ಸಭೆಗಳಲ್ಲಿ ಗೆಲುವು ತಂದು ಕೊಟ್ಟ ರವಿಕುಮಾರ್:

ಜಿಲ್ಲಾಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ರವಿಕುಮಾರ್ ಅವರು ಪ್ರಚಾರ ನಡೆಸಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣಕರ್ತರಾಗಿದ್ದಾರೆ.
ಇವರು ಉತ್ತಮ ಭಾಷಣಕಾರರೂ, ಸಂಘಟನಾಕಾರರೂ ಆಗಿರುವುದರಿಂದ ಲಿಂಗಾಯಿತ ಬಸವ ಸೇನೆ, ಜಾಗತಿಕ ಲಿಂಗಾಯಿತ ಯುವ ಸೇನೆಗಳನ್ನು ಕಟ್ಟಿ ಇಡೀ ರಾಜ್ಯಾದ್ಯಂತ ಸಂಘನೆಯನ್ನು ಕಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಗೆ ಪ್ರತಿ ವಿಧಾನ ಸಭೆಗೆ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲರ ನೇತೃತ್ವದಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಪ್ರಚಾರ ಸಮಿತಿಗೆ ಸಂಯೋಜಕರು ಮತ್ತು ಜಂಟಿ ಸಂಯೋಜಕರನ್ನು ನೇಮಿಸಿ ಪ್ರತಿ ಬೂತ್ ಮಟ್ಟದಲ್ಲಿ ಪ್ರಚಾರ ನಡೆಸಿ ಪಕ್ಷದ ಗೆಲುವಿಗೆ ಬೆನ್ನೆಲುಬಾಗಿದ್ದರು, ರವಿಕುಮಾರ್ ರಾಯಸಂದ್ರ ಅವರು ಬಿಜೆಪಿ ಸರ್ಕಾರದ ಭ್ರಷ್ಟಚಾರವನ್ನು ಪ್ರತಿ ಬೂತ್ ಮಟ್ಟಕ್ಕೂ ತಲುಪಿಸಿ ನಿಂತು 7ಕ್ಷೇತ್ರಗಳಲ್ಲಿ ಗೆಲುವು ತಂದು ಕೊಟ್ಟರು.
ಲೋಕಸಭಾ ಚುನಾವಣೆ ಘೋಷಣೆಗೆ ಇನ್ನೆರಡು ದಿನವಿದೆ ಎನ್ನುವಾಗ ಕಾಂಗ್ರೆಸ್ ಶಾಸಕರೇ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರ ಮೇಲೆ ಹಲ್ಲೆ ಮಾಡಿರುವುದು ಪಕ್ಷಕ್ಕೆ ತೀವ್ರತರವಾದ ಮುಜುಗರ ತಂದಿಟ್ಟಿರುವುದಲ್ಲದೆ, ಲೋಕಸಭೆ ಚುನಾವಣೆಗೆ ಜವಾಬ್ದಾರಿ ಹೊತ್ತು ಪ್ರಚಾರ ಕೈಗೊಳ್ಳಬೇಕಿದ್ದ ಪ್ರಚಾರ ಸಮಿತಿ ಅಧ್ಯಕ್ಷರಿಗೆ ಅವರದೇ ಪಕ್ಷದ ಶಾಸಕರು ಈ ರೀತಿ ಮಾಡಿರುವುದರಿಂದ ಚುನಾವಣೆಯ ಪ್ರಚಾರದಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಒಬ್ಬ ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ ನಡೆದರೂ ಎಸ್.ಪಿ.ಮುದ್ದಹನುಮೇಗೌಡರನ್ನು ಬಿಟ್ಟರೆ ಬೇರೆ ಯಾರೂ ಇವರನ್ನು ಭೇಟಿ ಮಾಡಿ ಘಟನೆಯ ಬಗ್ಗೆಯಾಗಲಿ, ನಾವು ನಿಮ್ಮ ಜೊತೆ ಇದ್ದೇವೆಂದು ಹೇಳುವುದಾಗಲಿ ಮಾಡದೆ ಇರುವುದರಿಂದ ಪಕ್ಷ ಕಟ್ಟಿದ ರಾಯಸಂದ್ರ ರವಿಯವರಿಗೆ ತೀವ್ರ ನೋವುಂಟು ಆಗಿರುವುದರಿಂದ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿಗೆ ರಾಜೀನಾಮೆ ನೀಡುವ ಸಾದ್ಯತೆಗಳಿವೆ ಎನ್ನಲಾಗುತ್ತಿದೆ.