ತುಮಕೂರು : ಪುಣೆ ಹೊರತುಪಡಿಸಿ ಉಳಿದ ಕಡೆ ಫಿಲ್ಮ್ ಇನ್ಸ್ಟಿಟ್ಯೂಟ್ ಇಲ್ಲ, ಈ ಹಿನ್ನೆಲೆಯಲ್ಲಿ ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ನೂತನವಾಗಿ ಫಿಲ್ಮ್ ಇನ್ಸ್ಟಿಟ್ಯೂಟ್ ಪ್ರಾರಂಭ ಮಾಡಲು ರಾಜೇಂದ್ರಬಾಬು ಅವರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ತುಮಕೂರು ವಿವಿಯ ಕುಲಪತಿ ವೆಂಕಟೇಶ್ವರಲು ತಿಳಿಸಿದರು.

ತುಮಕೂರು ಹೊರವಲಯದ ಹೆಬ್ಬೂರು ಹೋಬಳಿಯ ಬಿದರಕಟ್ಟೆ ಹೊಸ ಕ್ಯಾಂಪಸ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಿಮ್ಮಸಂದ್ರ ಹಾಗೂ ದೊಮ್ಮನಕುಪ್ಪೆ ಗ್ರಾಮಗಳ ವ್ಯಾಪ್ತಿಗೆ ಬರುವ 240 ಎಕರೆ ವಿಸ್ತೀರ್ಣದ ‘ಜ್ಞಾನಸಿರಿ’ ಕ್ಯಾಂಪಸ್ 17 ಕೋಟಿ 50 ಲಕ್ಷ ರೂಪಾಯಿ ವೆಚ್ಚದ, ತಲಾ 2927 ಚದರ ಮೀಟರ್ ವಿಸ್ತೀರ್ಣದ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಎರಡು ಪ್ರತ್ಯೇಕ ಹಾಸ್ಟೆಲ್ಗಳು, 2995 ಚದರ ಮೀಟರ್ ವಿಸ್ತೀರ್ಣದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸಂಶೋಧನಾರ್ಥಿಗಳ ಹಾಸ್ಟೆಲ್ ಕಾಮಗಾರಿ ಈಗಾಗಲೇ ಪೂರ್ಣಗೊಂಡು ಬಳಕೆಗೆ ಸಿದ್ಧವಾಗಿವೆ ಎಂದು ತಿಳಿಸಿದರು.

5 ಕೋಟಿ 53 ಲಕ್ಷ ರುಪಾಯಿ ರೂಸಾ ಅನುದಾನದಲ್ಲಿ 2722 ಚದರ ಮೀಟರ್ ವಿಸ್ತೀರ್ಣದ ಸ್ನಾತಕೋತ್ತರ ಬಾಲಕರ ಹಾಸ್ಟೆಲ್, 1 ಕೋಟಿ 19 ಲಕ್ಷ ರುಪಾಯಿ ರೂಸಾ ಅನುದಾನದಲ್ಲಿ 360 ಚದರ ಮೀಟರ್ ವಿಸ್ತೀರ್ಣದ ಗ್ರಂಥಾಲಯ ಮತ್ತ ಮಾಹಿತಿ ವಿಜ್ಞಾನ ವಿಭಾಗದ ಪ್ರಯೋಗಾಲಯ, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ 2 ಕೋಟಿ ರುಪಾಯಿ ಅನುದಾನದಲ್ಲಿ 1760 ಚದರ ಮೀಟರ್ ವಿಸ್ತೀರ್ಣದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.
40 ಕೋಟಿ ರುಪಾಯಿ ವೆಚ್ಚದ 16,843 ಚದರ ಮೀಟರ್ ವಿಸ್ತೀರ್ಣದ ಬೃಹತ್ ಶೈಕ್ಷಣಿಕ ಭವನದ ನಿರ್ಮಾಣವು ಪೂರ್ಣಗೊಂಡಿದೆ. ಸುಸಜ್ಜಿತ ತರಗತಿ ಕೊಠಡಿಗಳು, ವಿಶಾಲ ಹಜಾರಗಳು, ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯ, ಬೋಧಕ-ಬೋಧಕೇತರ ಸಿಬ್ಬಂದಿಗಳ ಕಚೇರಿಗಳು ಸಜ್ಜುಗೊಂಡಿದೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರದ ಎಸ್ಸಿಪಿ-ಟಿಎಸ್ಪಿ ಅನುದಾನದ 4 ಕೋಟಿ 45 ಲಕ್ಷ ರುಪಾಯಿ ವೆಚ್ಚದ 3198 ಚದರ ಮೀಟರ್ ವಿಸ್ತೀರ್ಣದ ಪರೀಕ್ಷಾಪೂರ್ವ ತರಬೇತಿ ಕೇಂದ್ರ, 4 ಕೋಟಿ 75 ಲಕ್ಷ ರುಪಾಯಿ ವೆಚ್ಚದ 1718 ಚದರ ಮೀಟರ್ ವಿಸ್ತೀರ್ಣದ ಕಲಾಭವನ, 2 ಕೋಟಿ 50 ಲಕ್ಷ ರುಪಾಯಿ ವೆಚ್ಚದ ಪ್ರಧಾನ ದ್ವಾರ ಹಾಗೂ ಆವರಣ ಗೋಡೆ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಮುಂದಿನ ಯೋಜನೆಗಳು: ಕೇಂದ್ರ ಗ್ರಂಥಾಲಯ, ಒಳಾಂಗಣ ಕ್ರೀಡಾಂಗಣ, ಕೇಂದ್ರೀಕೃತ ಅಡುಗೆಮನೆ, ಎರಡನೆಯ ಶೈಕ್ಷಣಿಕ ಭವನ, ಆಡಳಿತ ಕಚೇರಿ, ಇತ್ಯಾದಿ ಎಂದ ಅವರು, ಕೆಎಸ್ಆರ್ಟಿಸಿಯಿಂದ ದೈನಂದಿನ ಬಸ್ ಸೌಲಭ್ಯ: ಅಕ್ಟೋಬರ್ 9ರಿಂದ ಆರಂಭವಾಗಿದೆ. ತುಮಕೂರು ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 8.00, 9.00, 10.00, 11.00, ಮಧ್ಯಾಹ್ನ 12.00, 1.00, 2.00, 3.00, 4.00, 5.00, 6.00 ಗಂಟೆಯವರೆಗೆ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ನಗರ ಕ್ಯಾಂಪಸ್ನಿಂದ ಬೆಳಗ್ಗೆ 8.30, 9.30, 10.30, 11.30, ಮಧ್ಯಾಹ್ನ 12.30, 1.30, 2.30, 3.30, 4.30, 5.30, 6.30ರ ವರೆಗೆ.
ಹೊಸ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗಲಿರುವ ಇತರ ಸೌಲಭ್ಯಗಳು- ಊಟೋಪಚಾರಕ್ಕಾಗಿ ಕೆಫೆಟೀರಿಯಾ, ವೈಫೈ, ಜೆರಾಕ್ಸ್, ಸ್ಟೇಶನರಿ ಸೌಲಭ್ಯ, ಗ್ರಂಥಾಲಯ ಮತ್ತ ಮಾಹಿತಿ ವಿಜ್ಞಾನ ಪ್ರಯೋಗಾಲಯ, ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯಾಗಲಿರುವ ಕಲಾಭವನ ನಿರ್ಮಾಣ ಹಂತದಲ್ಲಿವೆ ಎಂದರು.
ಸ್ನಾತಕ ಮತ್ತು ಸ್ನಾತಕೋತ್ತರ ಸೇರಿ 175 ಮಂದಿ ಪ್ರಾಧ್ಯಾಪಕರಿದ್ದಾರೆ. 150 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಖಾಯಂ ಭೋದಕ ಹಾಗೂ ಬೋದಕೇತರರ ನೇಮಕದ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದರು.
ಅನುದಾನ ಪಡೆಯುವ ಸಂಬಂಧ ಕೇಂದ್ರ ಸಚಿವ ವಿ ಸೋಮಣ್ಣ ಅವರ ಜೊತೆ ಮಾತುಕತೆ ನಡೆಸಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರದಿಂದಲೂ ಅನುದಾನ ನಿರೀಕ್ಷೆ ಮಾಡಲಾಗಿದೆ, ಐವತ್ತು ಕೋಟಿ ವೆಚ್ಚದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಪಿಜಿ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದಲೂ ವಿವಿಗೆ ಅನುಕೂಲವಾಗಲಿದೆ ಎಂದರು.
ನೂರು ಕೋಟಿಗೂ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿರುವ ತುಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಗೆ ಮುಂದಿನ ವಾರದಿಂದ ವಿಜ್ಞಾನ ವಿಭಾಗದ ತರಗತಿಗಳನ್ನು ನಗರ ಕ್ಯಾಂಪಸ್ ನಿಂದ ನೂತನ ಕ್ಯಾಂಪಸ್ ಗೆ ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದರು.