ತುಮಕೂರು : ಒಬ್ಬ ಉನ್ನತ ಸ್ಥಾನದಲ್ಲಿರುವವರು, ಸಮಾಜದ ಒಳಿತನ್ನು ಬಯಸುವ ವ್ಯಕ್ತಿಗಳಿಗೆ ಮಾನವೀಯ ನೆಲೆಯ ಗುಣಗಳಿಲ್ಲದಿದ್ದರೆ ಏನಾಗಬಹದು ಎಂಬುದಕ್ಕೆ ತುಮಕೂರಿನಲ್ಲಿ ಸಿಪಿಐ ಮತ್ತು ವಕೀಲರೊಬ್ಬರ ಮೇಲೆ ಎಫ್‍ಐಆರ್ ದಾಖಲಾಗಿರುವುದೇ ನಿದರ್ಶನ.
ನನ್ನ 30 ವರ್ಷಗಳ ಪತ್ರಿಕಾ ಅನುಭವದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ತೀವ್ರ ಒತ್ತಡ ಮತ್ತು ರಾಜಕಾರಿಣಿಗಳು, ಮೇಲಾಧಿಕಾರಿಗಳ ಅಧಿಕಾರದಡಿ ಕಾರ್ಯನಿರ್ವಹಿಸುತ್ತಿರುತ್ತಾರೆ, ಅವರಿಗೆ ಯಾವಾಗ ಯಾರ ತುರ್ತುಕರೆ, ದರೋಡೆ, ಗಲಭೆ, ಕಳ್ಳತನ ಸೇರಿದಂತೆ ಹಲವಾರು ಕಾರ್ಯನಿರ್ವಹಿಸುವ ಜವಾಬ್ದಾರಿ ಅವರ ಮೇಲಿರುತ್ತದೆ.
ರಾಜಕಾರಣಿಗಲಿಂದಲೋ, ಮೇಲಾಧಿಕಾರಿಗಳಿಂದಲೋ ಶಭಾಷ್‍ಗಿರಿ ಪಡೆದುಕೊಳ್ಳಲು ಮಾನವೀಯ ನೆಲೆಯನ್ನು ಮರೆತು ಕೆಲವೊಮ್ಮೆ ದರ್ಪ ಮತ್ತು ಆ ಕ್ಷಣದ ಅವೇಶದಿಂದ ಏನು ಮಾಡಬಾರದಿತ್ತೋ ಅದನ್ನು ಮಾಡಿಬಿಡುತ್ತಾರೆ.

ಇಂತಹ ಸಂದರ್ಭದಲ್ಲಿ ವಿವೇಚನೆಯಿಂದ ಯೋಚಿಸಿ ಸಮಾಜ ಮತ್ತು ಮನುಷ್ಯತ್ವದ ನೆಲೆಯೊಳಗೆ ಕಾರ್ಯನಿರ್ವಹಿಸಿದಾಗ ಉಗುರಿನಲ್ಲಿ ಆಗಬೇಕಾದ ಕೆಲಸಕ್ಕೆ ಕೊಡಲಿ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ.

ಈ ಹಿಂದೆ ಪೊಲೀಸ್ ಅಧಿಕಾರಿಗಳು ಸಾಹಿತ್ಯ ಓದುವುದು, ಸಂಗೀತ ಕೇಳುವುದು, ಇಲಾಖೆಗೆ ಸಂಬಂಧಿಸಿದಂತೆ ಉತ್ತಮ ಕಾರ್ಯನಿರ್ವಹಿಸಲು ಬೇಕಾದ ಪುಸ್ತಕಗಳನ್ನು ಓದುವವರಾಗಿದ್ದರು, ಅಲ್ಲದೆ ಪೊಲೀಸ್ ಠಾಣೆಗೆ ಯಾವುದೇ ವ್ಯಕ್ತಿ ಬಂದಾಗ ಸಮಚಿತ್ತದಿಂದ ಅಹವಾಲು ಕೇಳಿ ಬಂದಂತಹವರಿಗೆ ಅರಿವು ಅಥವಾ ಪೊಲೀಸ್ ಇಲಾಖೆಯಿಂದ ದೊರೆಯಯಬಹುದಾದ ಸಹಾಯ ಹೇಗೆ ಎಂಬುದನ್ನು ತಿಳಿಸುತ್ತಿದ್ದರು.
ದೂರುದಾರರು-ಎದುರುದಾರರ ಅಹವಾಲನ್ನು ಕೇಳಿ ಮಾನವೀಯ ನೆಲೆಯೊಳಗೆ ಇಬ್ಬರಿಗೂ ಬುದ್ಧಿ ಹೇಳುತ್ತಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯು ಜನಸ್ನೇಹಿ ಅಥವಾ ಜನಹಿತಕ್ಕಿಂತ ಪೊಲೀಸರೆಂದರೆ ದರ್ಪ, ದೌರ್ಜನ್ಯ, ಹೆದರಿಸುವ, ಲಂಚಕ್ಕೆ ಬೇಡಿಕೆ ಇಡುವವರು ಎಂಬಂತಾಗಿದೆ.
ಇದಲ್ಲದೆ ವಕೀಲರೊಬ್ಬರು ತಮ್ಮ ಜಮೀನನ್ನು ಸರ್ಕಾರದ ಯೋಜನೆಗೆ ವಶಪಡಿಸಿಕೊಂಡಿದ್ದರೆ ಅದನ್ನು ಕಾನೂನು ವ್ಯಾಪ್ತಿಯಲ್ಲಿ ಬಗೆ ಹರಿಸಿಕೊಳ್ಳುವ ಗುಣ ಮತ್ತು ಪ್ರಜ್ಞೆ ಇರಬೇಕು, ಜಮೀನು ಅಳೆಯಲು ಬಂದವರಿಗೆ ಕಾನೂನು ರೀತಿಯಲ್ಲಿ ದಾಖಲಾತಿ ತೋರಿಸಿ ಅಥವಾ ನೀಡಿಬೇಕಿತ್ತು. ನಾನು ನ್ಯಾಯವಾದಿ(ವಕೀಲ) ಎಂದು ಸೌಜನ್ಯ ಕಳೆದುಕೊಳ್ಳದೆ, ಜೋರು ಮಾತು ಮತ್ತು ನನ್ನನ್ನು ಯಾರೇನು ಮಾಡಬಲ್ಲರು ಎಂಬ ಹುಂಬತನ ತೋರಿ ಅವೇಶದಿಂದ ಮಾತನಾಡಬಾರದಿತ್ತು.
ಸ್ಥಳಕ್ಕೆ ಆಗಮಿಸಿದ ಸಿಪಿಐ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು, ಜಮೀನಿನ ಮಾಲೀಕರನ್ನು ತಮ್ಮ ಕಛೇರಿಗೆ ಕರೆಸಿ ದಾಖಲೆಗಳನ್ನು ಪರಿಶೀಲಿಸಿ ಯಾರದು ತಪ್ಪು-ಸರಿ ಎಂಬುದನ್ನು ಅವಲೋಕನ ಮಾಡಿ ಕಾನೂನು ರೀತಿಯಲ್ಲಿ ಇಬ್ಬರೂ ಬಗೆ ಹರಿಸಿಕೊಳ್ಳಲು ಸೂಚಿಸಿದ್ದರೆ, ಒಬ್ಬ ಪೊಲೀಸ್ ಅಧಿಕಾರಿ ಮತ್ತು ವಕೀಲರ ಮೇಲೆ ಎಫ್‍ಆರ್‍ಐ ದಾಖಲಿಸುವ ಪ್ರಮೇಯವಿರುತ್ತಿತ್ತೇ..!
ಸಿಪಿಐ ದಿನೇಶ್ ಕುಮಾರ್ ಮೇಲೆ ಎಫ್‍ಐಆರ್ ದಾಖಲು:
ವಕೀಲ ರವಿಕುಮಾರ್ ಮೇಲೆ ಎಫ್‍ಐಆರ್ ದಾಖಲಾದ ನಂತರ ವಕೀಲ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸರ್ಕಲ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ಸೇರಿದಂತೆ ನಾಲ್ವರ ವಿರುದ್ದ ತುಮಕೂರು ನಗರ ಪೆÇಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವಕೀಲ ರವಿಕುಮಾರ್ ಅವರು ರೈಲ್ವೆ ಕಾಮಗಾರಿ ಗುತ್ತಿಗೆದಾರರಾದ ಪ್ರಸನ್ನ ಕುಮಾರ್, ಕುಶಾಲ್ ನಾರಾಯಣ್, ವೀರೇಶ್ ಕುಸುಮ್ ಸಹಚರರ ಕುಮ್ಮಕ್ಕಿನಿಂದ ಸರ್ಕಲ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ನನ್ನ ಬಲಗಣ್ಣಿಗೆ ಕೈಯಿಂದ, ಲಾಟಿಯಿಂದ ಗುದ್ದಿದರು. ನನ್ನ ಬೆನ್ನಿಗೆ ಲಾಠಿಯಿಂದ ತೀವ್ರವಾಗಿ ಗುದ್ದಿದರು. ಎಡಗಾಲಿನ ತೊಡೆಗೆ ಬೂಟುಗಾಲಿನಿಂದ ಒದ್ದರು. ತಲೆಗೆ ಹಲ್ಲೆ ಮಾಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನನ್ನನ್ನು ಹಿಡಿದು ಎಳೆದಾಡಿ ಮುಷ್ಠಿಯಿಂದ ಗುದ್ದಿದರು ಎಂದು ದೂರಿನಲ್ಲಿ ಆಪಾದಿಸಿದ್ದಾರೆ.
ಅಷ್ಟೇ ಅಲ್ಲದೆ ಸರ್ಕಲ್ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್ ನನ್ನನ್ನು ಮಣ್ಣಿಗೆ ಕೆಡವಿ ದರದರನೆ ಎಳೆದುಕೊಂಡು ಠಾಣೆಗೆ ಹೋದರು. ನನ್ನ ತಂದೆಗೆ ವಯಸ್ಸಾಗಿದ್ದರೂ ಅವರಿಗೂ ಹಲ್ಲೆ ಮಾಡಿದ್ದಾರೆ. ಸ್ವತ್ತಿಗೆ ಸಂಬಂಧಪಟ್ಟಂತೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಇರುವ ಬಗ್ಗೆ ವಿಚಾರ ತಿಳಿಸಿದರೂ ನನ್ನ ಮತ್ತು ನನ್ನ ತಂದೆಯ ಮೇಲೆ ದೌರ್ಜನ್ಯ ಎಸಗಿದರು ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ನಾಗರಿಕ ಸಂಹಿತೆ ಸೆಕ್ಷನ್ 115(2), ಸೆಕ್ಷನ್ 118(1), ಸೆಕ್ಷನ್ 351(2), ಸೆಕ್ಷನ್ 352 ಮತ್ತು 54 ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೊನೆಯದಾಗಿ ಪೊಲೀಸರು ತಮ್ಮ ಇಲಾಖೆಯ ಸಿಪಿಐ ಮೇಲೆ ಎಫ್‍ಐಆರ್ ದಾಖಲಿಸಿಕೊಳ್ಳುವಂತಹ ಸ್ಥಿತಿ ಬಂದದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಘೇರಾವ್ ಹಾಕಿ, ವಕೀಲರ ಕಛೇರಿಯಲ್ಲಿ ಕೂರಿಸಿದ್ದು, ಪತ್ರಕರ್ತನ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಡಿದ್ದು ವಿಪರಿಯಾಸವಲ್ಲವೇ..! ಇಲ್ಲಿ ಯಾರ ಪ್ರತಿಷ್ಠೆ ಯಾರಿಗಾಗಿ —–?
-ವೆಂಕಟಾಚಲ.ಹೆಚ್.ವಿ.