ತುಮಕೂರು-ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ವಿ. ವೆಂಕಟೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇದರಿಂದ ಮೊದಲ ಬಾರಿಗೆ ನಾಮನಿರ್ದೇಶಕರಿಗೆ ಅದೂ ಗಡಿನಾಡು ಪ್ರದೇಶದ ಶಾಸಕರೊಬ್ಬರು ತುಮುಲ್ ಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಇತಿಹಾಸವಯಿತು.
ಇಂದು ತುಮುಲ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ವೆಂಕಟೇಶ್ 2 ನಾಮಪತ್ರ ಹಾಗೂ ಎನ್‍ಡಿಎ ಅಭ್ಯರ್ಥಿಯಾಗಿ ಎಸ್.ಆರ್. ಗೌಡ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 12 ಗಂಟೆಯಾದರೂ ಯಾರು ನಾಮಪತ್ರವನ್ನು ಹಿಂಪಡೆಯದ ಕಾರಣ ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದರು.
ನಂತರ ಮತದಾನ ನಡೆದು ಶಾಸಕ ಹೆಚ್.ವಿ.ವೆಂಕಟೇಶ್ ಅವರು 9 ಮತಗಳನ್ನು ಪಡೆದರೆ, ಎಸ್.ಆರ್.ಗೌಡ 5 ಮತಗಳನ್ನು ಪಡೆದ ಹಿನ್ನೆಲೆಯಲ್ಲಿ ಶಾಸಕ ವೆಂಕಟೇಶ್ ಅವರು ತುಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಗದ್ದುಗೆಗೇರಲು ತೀವ್ರ ಪೈಪೆÇೀಟಿಯೇ ನಡೆದಿತ್ತು. ಆದರೆ ಇತ್ತೀಚೆಗೆ ನಡೆದ ಅಚ್ಚರಿ ಬೆಳವಣಿಗೆಯಲ್ಲಿ ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್ ಅವರನ್ನು ಸರ್ಕಾರ ನಾಮ ನಿರ್ದೇಶನ ಸದಸ್ಯರಾಗಿ ನೇಮಕ ಮಾಡಿತ್ತು.
ತುಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ನಾಮ ನಿರ್ದೇಶನ ಸದಸ್ಯರಾದ ಶಾಸಕ ಹೆಚ್.ವಿ. ವೆಂಕಟೇಶ್ ಅವರು ಎರಡು ನಾಮಪತ್ರ ಹಾಗೂ ಎನ್‍ಡಿಎ ಅಭ್ಯರ್ಥಿಯಾಗಿ ಸಿರಾ ತಾಲ್ಲೂಕು ನಿರ್ದೇಶಕ ಎಸ್.ಆರ್.ಗೌಡ ಅವರು ನಾಮಪತ್ರ ಸಲ್ಲಿಸಿದ್ದರು.
ಇದೇ ಮೊದಲ ಬಾರಿಗೆ ತುಮುಲ್ ಇತಿಹಾಸದಲ್ಲಿ ನಾಮನಿರ್ದೇಶಿತ ಸದಸ್ಯರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತುಮುಲ್‍ನಲ್ಲಿ 10 ಮಂದಿ ಚುನಾಯಿತ ನಿರ್ದೇಶಕರು, ನಾಮ ನಿರ್ದೇಶಿತರು ಹಾಗೂ ಅಧಿಕಾರಿಗಳು ಸೇರಿ ಒಟ್ಟು 15 ಮಂದಿ ಮತದಾನ ಮಾಡುವ ಹಕ್ಕು ಹೊಂದಿದ್ದರು. ಈ ಪೈಕಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಐವರು, ಒಬ್ಬರು ಕೆಎಂಎಫ್ ಪ್ರತಿನಿಧಿ, ಒಬ್ಬರು ಸರ್ಕಾರದಿಂದ ನಾಮ ನಿರ್ದೇಶಿತ ಸದಸ್ಯರು , ಜಿಲ್ಲಾ ಸಹಕಾರ ಸಂಘಗಳ ಜಂಟಿ ನಿಬಂಧಕರು, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರು, ಎನ್‍ಡಿಡಿಬಿಯ ಒಬ್ಬರು ಮತ ಚಲಾಯಿಸುವ ಹಕ್ಕು ಹೊಂದಿದ್ದರು.
ಈ ಬಾರಿ ತುಮುಲ್ ಅಧ್ಯಕ್ಷ ಸ್ಥಾನದ ಗದ್ದುಗೆಗೇರಲು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ರವರ ಪತ್ನಿ ಭಾರತಿದೇವಿ, ಮಧುಗಿರಿಯ ನಿರ್ದೇಶಕ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಗೇಶ್‍ಬಾಬು, ಸಿರಾ ನಿರ್ದೇಶಕ ಎಸ್.ಆರ್. ಗೌಡ, ತಿಪಟೂರು ತಾಲ್ಲೂಕು ಮಾದಿಹಳ್ಳಿ ಪ್ರಕಾಶ್ ಅವರ ನಡುವೆ ತೀವ್ರ ಪೈಪೆÇೀಟಿ ನಡೆದಿತ್ತು.
ಆದರೆ ನಿನ್ನೆಯಿಂದೀಚೆಗೆ ನಡೆದ ಅಚ್ಚರಿ ಬೆಳವಣಿಗೆಯಲ್ಲಿ ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಚುನಾಯಿತ ಸದಸ್ಯರ ಎಲ್ಲ ಕಸರತ್ತುಗಳಿಗೆ ತೆರೆ ಬಿದ್ದಿತು.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹೆಚ್.ವಿ. ವೆಂಕಟೇಶ್ ಅವರು, ತುಮಕೂರು ಹಾಲು ಒಕ್ಕೂಟದಲ್ಲಿ ಎಲ್ಲ ನಿರ್ದೇಶಕರ ಸಹಕಾರ ಪಡೆದು ಉತ್ತಮವಾಗಿ ಆಡಳಿತ ನಡೆಸುವುದಾಗಿ ತಿಳಿಸಿದರು.
ತುಮಕೂರು ಹಾಲು ಒಕ್ಕೂಟದ ಎಲ್ಲ ನಿರ್ದೇಶಕರನ್ನು ಒಗ್ಗೂಡಿಸಿಕೊಂಡು ಉತ್ತಮವಾಗಿ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಒಕ್ಕೂಟದಲ್ಲಿ ಅಗತ್ಯ ಇರುವ ಬದಲಾವಣೆ ತರಲು ಶ್ರಮಿಸುವುದಾಗಿ ತಿಳಿಸಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ ಹಾಗೂ ಪಕ್ಷದ ಎಲ್ಲ ನಾಯಕರ ಆಶೀರ್ವಾದದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನನ್ನ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ವಿಜಯೋತ್ಸವ
ತುಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶಾಸಕ ವೆಂಕಟೇಶ್ ಅವರು ಗೆಲುವು ಸಾಧಿಸಿದ್ದರಿಂದ ಪಾವಗಡ ತಾಲ್ಲೂಕಿನಿಂದ ಆಗಮಿಸಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ತುಮುಲ್ ಆಡಳಿತ ಕಚೇರಿ ಮುಂಭಾಗ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ತುಮಕೂರು ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಹೆಚ್.ವಿ. ವೆಂಕಟೇಶ್ ಅವರನ್ನು ಒಕ್ಕೂಟದ ನಿರ್ದೇಶಕರುಗಳಾದ ಹೆಚ್.ಎ. ನಂಜೇಗೌಡ, ಕೆ.ಪಿ. ಭಾರತಿದೇವಿ, ಬಿ.ಎನ್. ಶಿವಪ್ರಕಾಶ್, ಎಂ.ಕೆ. ಪ್ರಕಾಶ್, ಸಿ.ವಿ. ಮಹಲಿಂಗಯ್ಯ, ಡಿ. ಕೃಷ್ಣಕುಮಾರ್, ಬಿ. ನಾಗೇಶ್‍ಬಾಬು, ಸಿದ್ದಗಂಗಯ್ಯ, ಎಸ್.ಆರ್. ಗೌಡ, ಚಂದ್ರಶೇಖರರೆಡ್ಡಿ, ಅಶ್ವತ್ಥ್‍ನಾರಾಯಣ, ಆಡಳಿತಾಧಿಕಾರಿ ಉಮೇಶ್, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಹಾಲು ಒಕ್ಕೂಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಅಭಿನಂದಿಸಿದರು.
ಇದಾದ ನಂತರ ನೂತನ ಅಧ್ಯಕ್ಷ ಹೆಚ್.ವಿ. ವೆಂಕಟೇಶ್ ಅವರು ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ತೆರಳಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಭೇಟಿ ಮಾಡಿ ಪುಷ್ಪಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಸಚಿವರುಗಳು ಸಹ ನೂತನ ಅಧ್ಯಕ್ಷ ವೆಂಕಟೇಶ್‍ರವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಇದ್ದರು.
ತುಮುಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವ್ ಮೇಲುಗೈ ಸಾಧಿಸಿದ್ದಾರೆ ಎನ್ನಲಾಗಿದೆ.