ತುಮಕೂರು: ‘ಬ್ರಿಟಿಷ್ ಕೌನ್ಸಿಲ್‍ನವರು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಹಯೋಗದಲ್ಲಿ ಇಂಗ್ಲೆಂಡ್‍ನ ಯೂನಿವರ್ಸಿಟಿ ಆಫ್ ಈಸ್ಟ್ ಲಂಡನ್‍ಗೆ ನ.9ರಿಂದ 23ರವರೆಗೆ ಹಮ್ಮಿಕೊಂಡಿರುವ ಅಧ್ಯಯನ ಪ್ರವಾಸಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಐದು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ’ ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು.
ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶೈಕ್ಷಣಿಕ ಪ್ರವಾಸದ ಕುರಿತು ಶುಕ್ರವಾರ ಮಾಹಿತಿ ನೀಡಿದ ಅವರು, ರಾಜ್ಯ ಉನ್ನತ ಶಿಕ್ಷಣದ ಕಾರ್ಯಕ್ರಮವಾದ ಸ್ಕೌಟ್ (ಸ್ಕಾಲರ್ ಫಾರ್ ಔಟ್‍ಸ್ಟ್ಯಾಂಡಿಂಗ್ ಅಂಡರ್ ಗ್ರ್ಯಾಜುಯೇಟ್ ಟ್ಯಾಲೆಂಟ್) ಅಡಿಯಲ್ಲಿ ಅಧ್ಯಯನ ಪ್ರವಾಸದ ಮೊದಲ ಹಂತದಲ್ಲಿ ರಾಜ್ಯದ ಐದು ವಿವಿಗಳ 30 ವಿದ್ಯಾಥಿಗಳು ಇಂಗ್ಲೆಂಡ್‍ಗೆ ತೆರಳಲಿದ್ದಾರೆ. ಈ ಪೈಕಿ ತುಮಕೂರು ವಿವಿಯ ಐದು ವಿದ್ಯಾಥಿಗಳಿಗೆ ಅವಕಾಶ ಸಿಕ್ಕಿರುವುದು ಅವರ ಮತ್ತು ವಿವಿಯ ಭವಿಷ್ಯದ ತಿರುವಿನ ಹಂತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರವಾಸದ ವೀಸಾ, ಇತರೆ ಖರ್ಚುಗಳನ್ನು ಬ್ರಿಟಿಷ್ ಕೌನ್ಸಿಲ್ ಭರಿಸಲಿದೆ. 6 ಲಕ್ಷ ಪ್ರಯಾಣ ವೆಚ್ಚವನ್ನು ತುಮಕೂರು ವಿವಿಯಿಂದ ಭರಿಸಲಿದ್ದೇವೆ. ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ಹಿರಿಯ ಪ್ರಾಧ್ಯಾಪಕ ಪ್ರೊ. ಪರಶುರಾಮ ಕೆ. ಜಿ. ಅವರನ್ನು ನೇಮಿಸಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜಾಗತಿಕ ಮಾನ್ಯತೆ ಸಿಗುವ ಮುಖ್ಯ ಉದ್ದೇಶ ನಮ್ಮ ವಿವಿಯದ್ದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಲಸಚಿವೆ ನಾಹಿದಾ ಜûಮ್ ಜûಮ್, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವುದರಿಂದ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ನಡೆಯಬೇಕು. ಮುಗ್ಧತೆಯಿಂದ ಪ್ರಬುದ್ಧತೆಗೆ ಪದೋನ್ನತಿಗೊಳಿಸುವ ಪ್ರವಾಸ ಇದಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ನೋಡಲ್ ಅಧಿಕಾರಿ ಪ್ರೊ. ಪರಶುರಾಮ ಕೆ. ಜಿ. ಅವರು ಮಾತನಾಡಿ, ಪಿಯುಸಿ ಹಂತದಲ್ಲಿ ಹೆಚ್ಚು ಅಂಕ ಗಳಿಸಿರುವ ಬಿಎಸ್‍ಡಬ್ಲ್ಯೂ, ಬಿಕಾಂ, ಬಿಸಿಎ, ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ಐದು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಕಲಾ ಕಾಲೇಜಿನ ಬಿಎಸ್‍ಡಬ್ಲ್ಯೂ ವಿಭಾಗದ ಧನ್ಯ ಆರ್., ಬಿಕಾಂ ವಿದ್ಯಾರ್ಥಿಗಳಾದ ಅಲ್ಫಿಯಾ ಕುಲ್ಸುಮ್, ನಾರಾಯಣಗೌಡ ಎಸ್. ಎಚ್., ಬಿಸಿಎ ವಿಭಾಗದ ನೇಹಾ ಎಂ., ವಿಜ್ಞಾನ ಕಾಲೇಜಿನ ಬಿಎಸ್ಸಿ ಇಂದ ಶಿವಶಂಕರ್ ಎಚ್. ಟಿ. ಪ್ರವಾಸಕ್ಕೆ ಹೊರಡಲು ಸಿದ್ಧವಾಗಿದ್ದಾರೆ ಎಂದು ತಿಳಿಸಿದರು.
ಸಂಪೂರ್ಣ ಪ್ರಯಾಣದ ಖರ್ಚು ಒಬ್ಬ ವಿದ್ಯಾರ್ಥಿಗೆ ಸುಮಾರು 8 ಲಕ್ಷದವರೆಗೂ ಆಗಬಹುದು. ಅದನ್ನು ಉನ್ನತ ಶಿಕ್ಷಣ ಪರಿಷತ್ತು ಹಾಗೂ ಬ್ರಿಟಿಷ್ ಕೌನ್ಸಿಲ್ ಭರಿಸಲಿದೆ. ಇಂಗ್ಲೆಂಡ್‍ನ ಯೂನಿವರ್ಸಿಟಿ ಆಫ್ ಈಸ್ಟ್ ಲಂಡನ್‍ನ ಶೈಕ್ಷಣಿಕ ವಿದೇಶ ಪ್ರವಾಸದಲ್ಲಿ ಕೌಶಲ್ಯ ಆಧಾರಿತ, ಉದ್ಯಮಶೀಲತಾ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಕರಿಯಣ್ಣ ಬಿ., ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ಎಂ. ಶೇಟ್ ಉಪಸ್ಥಿತರಿದ್ದರು.
ವಿದ್ಯಾಥಿಗಳ ಅನಿಸಿಕೆ:
‘ತರಗತಿಗಳು ಮುಗಿದ ನಂತರ ಹಾಗೂ ರಜೆ ದಿನಗಳಲ್ಲಿ ಕೂಲಿ ಕೆಲಸ ಮಾಡಿ ಬದುಕುತ್ತಿರುವ ಸಾಮಾನ್ಯ ರೈತಾಪಿ ಕುಟುಂಬದ ಹುಡುಗನಿಗೆ ವಿವಿಯು ಈ ಅಧ್ಯಯನ ಪ್ರವಾಸದ ಅವಕಾಶ ಕಲ್ಪಿಸಿಕೊಡುತ್ತಿರುವುದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ವರವಾಗಿದೆ. ಉನ್ನತ ಶಿಕ್ಷಣದ ಕನಸನ್ನು ಸಾಧಿಸಲು ಈ ಪ್ರವಾಸ ಮೆಟ್ಟಿಲಾಗಲಿದೆ’ ಎಂದು ವಿಜ್ಞಾನ ಕಾಲೇಜಿನ ಬಿಎಸ್ಸಿ (ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ) ವಿದ್ಯಾರ್ಥಿ ಶಿವಶಂಕರ್ ಎಚ್. ಟಿ. ಸಂತಸ ವ್ಯಕ್ಷಪಡಿಸಿದರು.
‘ಅಪ್ಪ ಖಾಸಗಿ ಬಸ್ ಚಾಲಕ. ವಿದ್ಯಾಭ್ಯಾಸ ಬದುಕನ್ನು ಸುಂದರವಾಗಿ ರೂಪಿಸಲು ಸಾಧ್ಯ. ಹೆಣ್ಣುಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಹೆಚ್ಚಿದೆ. ಶೈಕ್ಷಣಿಕ ವಿದೇಶ ಪ್ರಯಾಣವು ನನ್ನ ಉನ್ನತ ಶಿಕ್ಷಣದ ಕನಸನ್ನು ಇನ್ನಷ್ಟು ಗಟ್ಟಿ ಮಾಡಿದೆ. ಈ ಪ್ರವಾಸಕ್ಕೆ ಒತ್ತಾಸೆಯಾಗಿರುವ ಕುಟುಂಬಕ್ಕೆ, ವಿವಿಗೆ ಚಿರಋಣಿಯಾಗಿರುವೆ’ ಎಂದು ವಿವಿ ಕಲಾ ಕಾಲೇಜಿನ ಬಿಕಾಂ ವಿದ್ಯಾರ್ಥಿ ಅಲ್ಫಿಯಾ ಕುಲ್ಸುಮ್ ಸಂತಸ ಹಂಚಿಕೊಂಡರು.