ತುಮಕೂರು : ಈ ಬಾರಿ ಹೆಲಿಕಾಪ್ಟರ್ ಮೂಲಕ “ಹೆಲಿ ರೈಡ್” ಉತ್ಸವದ ಮತ್ತೊಂದು ಆಕರ್ಷಣೆಯಾಗಲಿದೆ. ನಾಗರಿಕರಿಗೆ ತುಮಕೂರು ನಗರವನ್ನು ಎತ್ತರದಿಂದ ನೋಡುವ ಅನುಭವ ನೀಡಲು ಹೆಲಿಕಾಪ್ಟರ್‍ನಲ್ಲಿ 10-12 ನಿಮಿಷಗಳ ಕಾಲ ಪ್ರಯಾಣಿಸಲು ಹೊಸದಾಗಿ ಈ ಹೆಲಿ ರೈಡ್ ಅನ್ನು ಪರಿಚಯಿಸಲಾಗುತ್ತಿದೆ. ಹೆಲಿ ರೈಡ್‍ನಲ್ಲಿ ಭಾಗವಹಿಸಲಿಚ್ಛಿಸುವವರು ಸೆಪ್ಟೆಂಬರ್ 8 ರಿಂದ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಿಳಿಸಿದರು.
ಜಿಲ್ಲಾಡಳಿತದಿಂದ ನಗರದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ 11 ದಿನಗಳ ಕಾಲ ನಡೆಯಲಿರುವ ದಸರಾ ಉತ್ಸವದಲ್ಲಿ ಜಿಲ್ಲೆಯ ಜನರು ಸಂಭ್ರಮದಿಂದ ಪಾಲ್ಗೊಳ್ಳುವಂತೆ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿಯೂ ಪ್ರಚಾರ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾ ಪಂಚಾಯತಿಯಲ್ಲಿ ಸೋಮವಾರ ದಸರಾ ಉತ್ಸವ ಕುರಿತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಗಿಂತಲೂ ಈ ವರ್ಷ ದಸರಾ ಉತ್ಸವವನ್ನು ವಿಶೇಷ, ಅತ್ಯಾಕರ್ಷಕ ರೀತಿಯಲ್ಲಿ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ಮಠಾಧೀಶರು, ಕಲಾವಿದರು, ಸಾಹಿತಿಗಳು, ಕ್ರೀಡಾ ಪಟುಗಳು, ಜನಪ್ರತಿನಿಧಿಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗುವುದು. ರಾಜ್ಯದ ಇತರೆಡೆಗಳಿಂದಲೂ ಉತ್ಸವಕ್ಕೆ ಜನರು ಬರುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ದಸರಾ ಉತ್ಸವದ ಪ್ರಯುಕ್ತ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ 11 ದಿನಗಳ ಕಾಲ ಪ್ರತಿದಿನ ವಿವಿಧ ವೇದಿಕೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮ, ವಸ್ತುಪ್ರದರ್ಶನ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ದಸರಾ ಉತ್ಸವದ ಅಧಿಕೃತ ಲಾಂಛನವನ್ನು ಸೆಪ್ಟೆಂಬರ್ 8ರಂದು ಬಿಡುಗಡೆ ಮಾಡಲಾಗುವುದು. ಕಳೆದ ಬಾರಿ ಜಂಬೂ ಸವಾರಿಯಲ್ಲಿ 2 ಆನೆಗಳನ್ನು ಕರೆ ತರಲಾಗಿತ್ತು. ಈ ಬಾರಿ 5 ಆನೆಗಳನ್ನು ಕರೆತರುವ ಚಿಂತನೆ ನಡೆದಿದೆ. ಉತ್ಸವಕ್ಕೂ ಮುನ್ನ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಆನೆಗಳಿಗೆ ತಾಲೀಮು ನೀಡಲಾಗುವುದು ಎಂದು ಹೇಳಿದರು.
ಈ ವರ್ಷದ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಪಂಜಿನ ಕವಾಯತು ಪ್ರದರ್ಶನದಲ್ಲಿ 160 ವಿದ್ಯಾರ್ಥಿನಿಯರು ಸೇರಿ ಒಟ್ಟು 256 ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಪಂಜಿನ ಕವಾಯತಿನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಹೇಳಿದರು.
ಅಲ್ಲದೆ ಉತ್ಸವದಲ್ಲಿ ಹೈದ್ರಾಬಾದ್‍ನ ಪ್ರಸಿದ್ಧ ಸುಧಾ ಕಾರ್ಸ್ ಮ್ಯೂಸಿಯಂ ವತಿಯಿಂದ ವಿಭಿನ್ನ ವಿನ್ಯಾಸದ ಕಾರುಗಳ ಪ್ರದರ್ಶನ, ಡ್ರೋನ್ ಶೋ, ದೀಪಾಲಂಕಾರ, ಬಾಣ-ಬಿರುಸುಗಳ ಪ್ರದರ್ಶನ, ದಾಂಡಿಯಾ ನೃತ್ಯ ಪ್ರದರ್ಶನ, 6 ದಿನಗಳ ಕಾಲ ಅರಳುಗುಪ್ಪೆ ದೇವಸ್ಥಾನದ ಫಲ-ಪುಷ್ಪ ಪ್ರದರ್ಶನ, ಸಂಗೀತ ರಸಸಂಜೆ, ಮತ್ತಿತರ ವಿನೂತನ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ದಸರಾ ಉತ್ಸವವನ್ನು ಯಾರನ್ನೂ ಮೆಚ್ಚಿಸಲು ಆಚರಿಸಲಾಗುತ್ತಿಲ್ಲ. ದುರ್ಗಾ ದೇವಿಯ ಕೃಪೆಗೆ ಜಿಲ್ಲೆಯ ಜನತೆ ಪಾತ್ರರಾಗಬೇಕೆಂಬ ಉದ್ದೇಶದಿಂದ ದಸರಾ ಉತ್ಸವದ ಆಚರಣೆಯನ್ನು ಕಳೆದ ವರ್ಷದಿಂದ ತುಮಕೂರಿನಲ್ಲಿ ಸರ್ಕಾರದ ವತಿಯಿಂದ ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ದಸರಾ ಉತ್ಸವ ಆಚರಣೆಗೆ ಶಾಶ್ವತ ನಿಧಿಯನ್ನು ಹಂಚಿಕೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರಲ್ಲದೆ ದಸರಾ ಉತ್ಸವದ ಆಚರಣೆಗೆ ಸಿದ್ಧಾರ್ಥ ಸಂಸ್ಥೆಯಿಂದ 25 ಲಕ್ಷ ರೂ. ಗಳ ಚೆಕ್ಕನ್ನು ದೇಣಿಗೆಯಾಗಿ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾವಗಡ ಶಾಸಕ ಹಾಗೂ ತುಮುಲ್ ಅಧ್ಯಕ್ಷ ಹೆಚ್.ವಿ. ವೆಂಕಟೇಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಚಂದ್ರಶೇಖರ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಇದ್ದರು.