ತುಮಕೂರು : ಉತ್ತಮ ಮಳೆಯಾಗುತ್ತಿರುವುದರಿಂದ ನಗರದ ಕೇಂದ್ರ ಭಾಗದಲ್ಲಿರುವ ಅಮಾನಿಕೆರೆ ತುಂಬಿ ಕೋಡಿ ಬಿದ್ದಿದ್ದು, ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರಿಂದು ಅಮಾನಿಕೆರೆಗೆ ಬಾಗಿನ ಅರ್ಪಣೆ ಮಾಡಿದರು.
ಕೆರೆಗೆ ಬಾಗಿನ ಅರ್ಪಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಪ್ರತಿ ವರ್ಷವು ಸಹ ಉತ್ತಮ ಮಳೆಯಾಗಿ ಜಿಲ್ಲೆಯ ಜನರು ಸಮೃದ್ಧಿಯ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು.
ಅಮಾನಿಕೆರೆ ಅತ್ಯಂತ ಪುರಾತನವಾದ ಇತಿಹಾಸ ಹೊಂದಿರುವ ಕೆರೆ. ಬ್ರಿಟೀಷರ ಕಾಲದಲ್ಲಿ ರಸ್ತೆ ಸಂಪರ್ಕಗಳು ಇಲ್ಲದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ನಿವಾಸದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಬೋಟ್‌ನ ಸಹಾಯದಿಂದ ಅಮಾನಿಕೆರೆಯನ್ನು ದಾಟಿ ಕಚೇರಿ ತಲುಪುತ್ತಿದ್ದರು ಎಂದು ಇತಿಹಾಸವನ್ನು ಮೆಲುಕು ಹಾಕಿದರು.
ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಸೆಪ್ಟಂಬರ್ 15ರೊಳಗಾಗಿ ಎಸ್. ಮಾಲ್ ಬಳಿ ನಿರ್ಮಿಸಲಾಗುತ್ತಿರುವ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಎಸ್.ಮಾಲ್ ಮಾಲೀಕರು ರಾಜಕಾಲುವೆಯನ್ನು ಒತ್ತುವರಿ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಒತ್ತುವರಿಯಾಗಿರುವುದು ಕಂಡುಬAದಲ್ಲಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅನೇಕ ಕೆರೆಗಳು ತುಂಬಿ ಕೋಡಿ ಹರಿದಿವೆ. ತುಮಕೂರು ನಗರದ ಅಮಾನಿ ಕೆರೆ ತುಂಬುವುದೇ ಬಹಳ ವಿರಳ. ಕಳೆದ ವರ್ಷ ಹೆಚ್ಚು ಬರಗಾಲವಿದ್ದ ಪರಿಣಾಮ ಕೆರೆಗೆ ನೀರು ಬರಲಿಲ್ಲ. ಆದಾಗ್ಯೂ ಇದ್ದ ನೀರನ್ನು ರಕ್ಷಸಿಕೊಂಡು ಬಂದಿದ್ದೇವೆ. ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಜಂತ್‌ಕಲ್ ಮೈನಿಂಗ್ ವಿಚಾರದಲ್ಲಿ ಸಹಿ ಫೋರ್ಜರಿಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಹಿ ಫೋರ್ಜರಿಯಾಗಿದೆ ಎಂಬುದರ ಕುರಿತು ಕುಮಾರಸ್ವಾಮಿ ಅವರು ದೂರು ಕೊಟ್ಟರೆ ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತೇವೆ. ನಮ್ಮ ಸರ್ಕಾರ ದ್ವೇಷದ ರಾಜಕಾರಣ ಮಾಡುವುದಿಲ್ಲ. ಕಾನೂನು ಮೀರಿ ಏನನ್ನು ಮಾಡಿಲ್ಲ. ವಿರೋಧಪಕ್ಷದವರು ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯಪಾಲರಿಗೆ ಬೆದರಿಕೆ ಇದೆ ಎಂಬುದರ ಕುರಿತು ನನಗಾಗಲಿ ಅಥವಾ ಡಿಜಿಪಿ ಅವರ ಗಮನಕ್ಕಾಗಲಿ ಬಂದಿಲ್ಲ. ರಾಜ್ಯಪಾಲರಿಗೆ ಬುಲೆಟ್ ಪ್ರೂಫ್ ಕಾರು ಕೊಟ್ಟಿರುವ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಕೇಂದ್ರದ ಭದ್ರತಾ ವ್ಯವಸ್ಥೆ ಪ್ರಕಾರ ನೀಡಿರಬಹುದು ಎಂದರು.
ಕಾನೂನಿಗಿಂತ ಯಾರು ದೊಡ್ಡವರಿಲ್ಲ. ಕಾನೂನಿಗೆ ಗೌರವ ಕೊಡುತ್ತಿರುವುದರಿಂದಲೇ ಇನ್ನು ನಾವೆಲ್ಲ ಇದ್ದೇವೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾನೂನಿಗೆ ಗೌರವ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಪರ ಜಿಲ್ಲಾಧಿಕಾರಿ ಡಾ: ಎನ್.ತಿಪ್ಪೇಸ್ವಾಮಿ, ತಹಶೀಲ್ದಾರ್ ಸಿದ್ದೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.