ತುಮಕೂರು:ದಲಿತ ಮತ್ತು ಪ್ರಗತಿಪರ ಚಳವಳಿಯಲ್ಲಿ ಗುರುತಿಸಿಕೊಂಡಿರುವ ಪ್ರಾಮಾಣಿಕ ಹೋರಾಟಗಾರರ ಜೀವನ ಚಿರಿತ್ರೆಗಳನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರಕಟಿಸುವ ಮೂಲಕ,ಭವಿಷ್ಯದ ಚಳವಳಿಗಾರರಿಗೆ ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದು ಪ್ರೊ.ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.
ನಗರದ ಗ್ರಂಥಾಲಯ ಸಭಾಂಗಣದಲ್ಲಿಂದು ಪತ್ರಕರ್ತ ವೆಂಕಟಾಚಲ.ಹೆಚ್.ವಿ.ಸಂಪಾದಿಸಿರುವ ದಲಿತ ಹೋರಾಟಗಾರರಾದ ಬೆಲ್ಲದಮಡು ರಂಗಸ್ವಾಮಿ ಅವರ ಕುರಿತ “ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು” ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ದಸಂಸ ಹೋರಾಟಗಾರರಾದ ಬೆಲ್ಲದಮಡು ರಂಗಸ್ವಾಮಿಯವರ ಬದ್ದತೆ ಮತ್ತು ಪ್ರಾಮಾಣಿಕತೆ ಇತರರಿಗೆ ಮಾದರಿಯಾಗಿವೆ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ರೀತಿ ಪ್ರಾಮಾಣಿಕತೆ ಮತ್ತು ಬದ್ದತೆಯಿಂದ ಕೆಲಸ ಮಾಡಿದ ವರನ್ನು ಯುವಜನತೆಗೆ ಪರಿಚಯಿಸುವ ಮೂಲಕ ವಾಸ್ತವಕ್ಕೆ ಹತ್ತಿರವಾದ ಹೋರಾಟವನ್ನು ರೂಪಿಸಲು ಸಾಧ್ಯ ಎಂದರು.
ಲೋಹಿಯಾ ಮತ್ತು ಅಂಬೇಡ್ಕರ್ ಈ ಭರತ ಖಂಡದ ಇಂಚಿಂಚು ಬಲ್ಲವರಾಗಿದ್ದರೂ,ಆದರೂ ದಲಿತರ ಬದುಕು ಕುರಿತು ಲೋಹಿಯಾಗಿಂತ ಅಂಬೇಡ್ಕರ್ ಹೆಚ್ಚು ಅರಿತಿದ್ದರು.ಜ್ಞಾನಕ್ಕಿಂತಲೂ ಮಿಗಿಲು ಬೇರಿಲ್ಲ ಎಂಬುದ ಅರಿತಿದ್ದ ಅಂಬೇಡ್ಕರ್, ಜ್ಞಾನ ಸಂಪಾದನೆಯ ಜೊತೆಗೆ,ಸಮುದಾಯದ ಸಾಮಾಜಿಕ ಸಮಾನತೆಗಾಗಿ ಸಂಸಾರವನ್ನು ಮರೆತರು, ಆದರೆ ರಂಗಸ್ವಾಮಿ ಬೆಲ್ಲದಮಡು ಅವರು, ಚಳವಳಿಯ ಜೊತೆಗೆ,ಮನೆಯ ಹಿರಿಯನಾಗಿ ತಮ್ಮಂದಿರು, ತಂಗಿಯರನ್ನು ಓದಿಸಿ, ಮದುವೆ ಮಾಡಿ ಹಿರಿಯರ ಜವಾಬ್ದಾರಿ ನಿರ್ವಹಿಸಿದರು ಎಂದು ಪ್ರೊ.ಕಾಳೇಗೌಡ ನಾಗಾವರ ತಿಳಿಸಿದರು.
ಸಂಬಂಧವೆಂಬುದು ಕೇವಲ ರಕ್ತ ಹಂಚಿಕೊಂಡು ಹುಟ್ಟಿದವರಿಗೆ ಸಿಮೀತವಲ್ಲ. ಸಕಲ ಮನುಕುಲಕ್ಕೂ ಸೇರಿದ್ದು, ಅದಿ ದೇವ ಎಂದು ಕರೆಯುವ ಶಿವ ಅರ್ಧನಾರೀಶ್ವರನಾಗುವ ಮೂಲಕ ಹೆಣ್ಣು, ಗಂಡು ಎರಡು ಮುಖ್ಯ ಎಂಬುದನ್ನು ತೋರಿಸಿದ್ದಾನೆ.ನಂದಿಯನ್ನು ವಾಹನವಾಗಿಸಿಕೊಂಡು ಸಕಲ ಜೀವರಾಶಿಗಳು ಅಗತ್ಯ ಎಂಬುದನ್ನು ಸಾರಿದ್ದಾನೆ.ಹಾಗಾಗಿಯೇ ಎಲ್ಲರದಲ್ಲಿಯೂ ಒಳ್ಳೆಯದನ್ನು ಬಯಸುವ ರೀತಿ ನಡೆದುಕೊಳ್ಳುವ ಮಾದರಿ ಬದುಕು ನಮ್ಮದಾಗಲಿ ಎಂದು ಪ್ರೊ.ಕಾಳೇಗೌಡ ನಾಗಾವರ ನುಡಿದರು.
ರಾಜ್ಯ ಸಭೆಯ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ,ದಸಂಸ ಹುಟ್ಟಿದಾಗ ಇದ್ದ ಬದ್ದತೆ ಇಂದು ಕಾಣದಾಗಿದೆ.ದಸಂಸ ಕಾರ್ಯಕರ್ತರೆಲ್ಲರೂ ಪ್ರಗತಿಪರರಾಗಿರಬೇಕು ಎಂಬ ನಿಯಮವಿತ್ತು.ಉದ್ಯೋಗದಲ್ಲಿ ಇದ್ದವರೆ ದಸಂಸವನ್ನು ಕಟ್ಟಿ ಪ್ರಾಮಾಣಿಕವಾಗಿ ಕೆಲಸ ಆರಂಭಿಸಿದ್ದರು.ಬೆಲ್ಲದಮಡು ರಂಗಸ್ವಾಮಿ ಅವರು ಉದ್ಯೋಗಸ್ಥರಾಗಿ, ಚಳವಳಿಗಾರರಾಗಿ,ಪಂಚಮ ಪತ್ರಿಕೆಯ ಹಂಚಿಕೆದಾರರಾಗಿ ಕೆಲಸ ಮಾಡುತ್ತಲೇ,ಸಂಘಟನೆಯ ಕಾರ್ಯಕರ್ತರ ಕಷ್ಟ, ಸುಖಃಗಳನ್ನು ಅರ್ಥ ಮಾಡಿಕೊಳ್ಳುವ ತಾಯ್ತನ ಹೃದಯ ಹೊಂದಿದ್ದರು.ಡಿಎಸ್ಎಸ್ನಿಂದ ಅನೇಕರಿಗೆ ಗೌರವ ಲಭಿಸಿತ್ತು. ಜಾತಿ ವಿನಾಶಕ್ಕೆ ಅಂತರಜಾತಿ ವಿವಾಹಕ್ಕೆ ಮೊರೆ ಹೋದರೆ ರಂಗಸ್ವಾಮಿ ಅವರು ಪರಿಶಿಷ್ಟರಲ್ಲಿಯೆ ಇರುವ ಎಡ, ಬಲ ಗುಂಪುಗಳ ನಡುವೆ ಮದುವೆ ಮಾಡಿಸಿ,ಇಬ್ಬರ ನಡುವೆ ಇರುವ ಕಂದಕ ಕಡಿಮೆ ಮಾಡುವ ವಿಶಿಷ್ಟ ಆಲೋಚನೆ ಮಾಡಿದ್ದರು.ಎಡ-ಬಲಗಳ ನಡುವೆ ಇರುವ ವೈಮನಸ್ಸು ಹೋಗಬೇಕೆಂದರೆ ಒಳಮೀಸಲಾತಿ ಜಾರಿಯಾಗಬೇಕು ಎಂಬ ಕಸನನ್ನು ಕಂಡಿದ್ದರು.ಅದು ಇಂದು ನನಸಾಗುತ್ತಿದೆ.ಇದೇ ರಂಗಸ್ವಾಮಿ ಅವರಿಗೆ ನೀಡುವ ನಿಜವಾದ ಗೌರವ ಎಂದರು.
ದಸಂಸ ಹೋರಾಟಗಾರರಾದ ಕೋಲಾರ ವೆಂಕಟೇಶ ಮಾತನಾಡಿ,ದಸಂಸ ಮುಂದೆ ಇಂದು ಬ್ರಾಹ್ಮೀಣಿಕರ ಮತ್ತು ಬಂಡವಾಳಶಾಹಿ ವಿರುದ್ದ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ಒಳಮೀಸಲಾತಿಗಾಗಿ ಸೈದ್ದಾಂತಿಕ ನೆಲೆಗಟ್ಟಿನಲ್ಲಿ ಹೋರಾಟ ಅಗತ್ಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಕೆ.ದೊರೆರಾಜು ಮಾತನಾಡಿ,ಬಹಳ ಜನರಿಗೆ ಹೋರಾಟಗಾರರ ಬಗ್ಗೆ ಸರಿಯಾದ ತಿಳುವಳಿಕೆ ಇರುವುದಿಲ್ಲ.ಮುಂದಿನ ಪೀಳಿಗೆಗೆ ಹೋರಾಟದ ಕಿಚ್ಚು ಹಚ್ಚುವ ನಿಟ್ಟಿನಲ್ಲಿ ಈ ಪುಸ್ತಕ ಬಹಳ ಸಹಕಾರಿ ಯಾಗಿದೆ.ಸಮಾಜಕ್ಕೆ ಅವರ ವ್ಯಕ್ತಿತ್ವವನ್ನು ಸಮಾಜಕ್ಕೆ ತೋರಿಸುವ ಕೆಲಸ ಇದಾಗಿದೆ.ಎಲ್ಲರೂ ಪುಸ್ತಕ ಕೊಂಡು ಓದಿ, ಓರ್ವ ಚಳವಳಿಗಾರ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಿ,ಅಂಬೇಡ್ಕರ್ ಪರಿನಿಬ್ಬಾಣ ದಿನದಂದು,ಇಂಡಿಯಾ ದೇಶಕ್ಕೆ ಮಾದರಿ ಯಾದ ದಸಂಸ ಚಳವಳಿಯನ್ನು ಬೆಳೆಸಿದ ಬಿ.ಕೃಷ್ಣಪ್ಪನವರ ಅನುಯಾಯಿಗಳು ಒಗ್ಗೂಡಿ ಮುನ್ನೆಡೆಯುವ ಕೆಲಸ ಆಗಬೇಕು.ಸವಕಾಲಿನ ಸವಾಲುಗಳ ಎದುರಿಸಿ,ಹೇಗೆ ಅದನ್ನು ಮೀರಿ ನಡೆಯಬೇಕು. ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ವಿರುದ್ದ ಹೋರಾಟ ಮುನ್ನೆಡಬೇಕಿದೆ ಎಂದರು.
ಕರ್ಮಯೋಗಿ ರಂಗಸ್ವಾಮಿ ಬೆಲ್ಲದ ಮಡು ನೆನಪಿನ ಸಂಪುಟದ ಸಂಪಾದಕ ಹೆಚ್.ವಿ.ವೆಂಕಟಾಚಲ ಮಾತನಾಡಿ, ಸತತ ಒಂದು ವರೆ ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ, ಬಿಡಿ ಬಿಡಿಯಾಗಿದ್ದ ಬೆಲ್ಲದಮಡು ರಂಗಸ್ವಾಮಿ ಅವರ ಕುರಿತು ಲೇಖನಗಳನ್ನು ಒಗ್ಗೂಡಿಸಿ,ತಿದ್ದಿ,ತೀಡಿ ಪುಸ್ತಕ ರೂಪಕ್ಕೆ ತರಲಾಗಿದೆ.ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಅಂಬೇಡ್ಕರ್ ಆಸಯದಂತೆ ಸಂವಿಧಾನದಡಿಯಲ್ಲಿ ರಾಜಕೀಯ ಅಧಿಕಾರವನ್ನು ಹಿಡಿಯುವುದು ಬಹುಮುಖ್ಯ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ.ಮುರುಳೀಧರ ಬೆಲ್ಲದಮಡು, ಬಹುಜನ ನಾಯಕ ಬೆಲ್ಲದಮಡು ರಂಗಸ್ವಾಮಿ ಅವರ ಸಾವಿನ 20 ವರ್ಷಗಳ ನಂತರ ಅವರ ಕುರಿತು ಪುಸ್ತಕ ಹೊರತರುವ ಕೆಲಸ ಮಾಡಿದ್ದೇವೆ.ಒಂದು ರೀತಿಯಲ್ಲಿಯೇ ಪಾಪಪ್ರಜ್ಞೆಯಿಂದಲೇ ಈ ಕೆಲಸವನ್ನು ಮಾಡಿದ್ದೇವೆ.ಹಲವಾರು ಲೇಖಕರು,ಹೋರಾಟಗಾರರು,ಹಿತೈಷಿಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.ಕೆಲವನ್ನು ಮಾತ್ರ ಈ ಸಂಪುಟದಲ್ಲಿ ಮುದ್ರಿಸಲಾಗಿದೆ. 2ನೇ ಸಂಪುಟದಲ್ಲಿ ಮತ್ತಷ್ಟು ಲೇಖಕರ ಅಭಿಪ್ರಾಯಗಳು ಮೂಡಿಬರಲಿವೆ ಎಂದರು.
ಸಾಹಿತಿಗಳಾದ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ವೇದಿಕೆಯಲ್ಲಿ ಡಾ.ಪಾವನ, ಡಾ.ಶಿವಣ್ಣ ತಿಮ್ಮಲಾಪುರ, ದಸಂಸದ ಮುಖಂಡರಾದ ನರಸಿಂಹಯ್ಯ,ನರಸಿಂಹಮೂರ್ತಿ,ಕೃಷ್ಣಪ್ಪ ಬೆಲ್ಲದಮಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.ಜಾನಪದ ಹಾಡುಗಾರ ಪಿಚ್ಚಳ್ಳಿ ಶ್ರೀನಿವಾಸ್ ಹಾಡುಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಪರಿನಿಬ್ಬಾಣದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಮತ್ತು ರಂಗಸ್ವಾಮಿ ಬೆಲ್ಲದಮಡು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.