ಗಾಂಧಿ ಹತ್ಯೆಯ ಪಿತೂರಿಗಾರ ಸಾರ್ವಕರ್ ಬಿಜೆಪಿಗರಿಗೆ ಪರಮಶ್ರೇಷ್ಠ ನಾಯಕ-ಕೆಂಚಮಾರಯ್ಯ

ತುಮಕೂರು : ಜೀವನದುದ್ದಕ್ಕೂ ಅಹಿಂಸೆಯನ್ನು ಪ್ರತಿಪಾದಿಸಿ,ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಗಾಂಧಿಜೀ ಸಾವನ್ನಪ್ಪಿದ್ದು ಹಿಂಸೆಯಿಂದ.ಇದು ಈ ದೇಶದ ದುರಂತ,ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷರು ಗಾಂಧೀಜಿಯ ಹೋರಾಟವನ್ನು ಸಹಿಸಿಕೊಂಡರು.ಆದರೆ ಸ್ವಾತಂತ್ರ ಬಂದ ನಂತರ ಒಂದು ವರ್ಷ ಕಾಲ ಅವರನ್ನು ಭಾರತೀಯರು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಅಂದು ಗಾಂಧಿ ಹತ್ಯೆಗೆ ಪಿತೂರಿ ಮಾಡಿದ ವೀರ ಸಾರ್ವಕರ್ ಇಂದು ಬಿಜೆಪಿ ಪಕ್ಷದ ಪರಮಶ್ರೇಷ್ಠ ನಾಯಕ.ಈ ವಿಚಾರವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳ ಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಕೆಂಚಮಾರಯ್ಯ ಹೇಳಿದರು.

ಅವರಿಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಮಹಾತ್ಮಗಾಂಧಿ, ಮಾಜಿ ಪ್ರಧಾನಿಗಳಾದ ಶ್ರೀಮತಿ ಇಂದಿರಾಗಾಂಧಿ ಹಾಗೂ ರಾಜೀವ್‍ಗಾಂಧಿ ಅವರ ಸಂಸ್ಮರಣೆ ಅಂಗವಾಗಿ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು.

ಗಾಂಧೀಜಿಯವರ ರೀತಿಯಲ್ಲಿಯೇ ದೇಶದ ಉಳಿವಿಗಾಗಿ ಹೋರಾಟ ನಡೆಸಿದ ಇಂದಿರಾಗಾಂಧಿ ಮತ್ತು ರಾಜೀವ್‍ಗಾಂಧಿ ಅವರು ಸಹ ಗುಂಡಿಗೆ ಬಲಿಯಾದರು.ಅವರ ಸಾವಿನ ಹಿಂದಿನ ತ್ಯಾಗ,ಬಲಿದಾನವನ್ನು ಕಾಂಗ್ರೆಸ್ ಕಾರ್ಯಕರ್ತರು ಅರ್ಥ ಮಾಡಿಕೊಂಡು,ಅವರ ಸಾವು ವ್ಯರ್ಥವಾಗದಂತೆ ನಾವೆಲ್ಲರೂ ನಡೆದುಕೊಳ್ಳಬೇಕಿದೆ ಎಂದರು.

ಡಿಸಿಸಿಯ ಮಾಜಿ ಅಧ್ಯಕ್ಷ ಎಸ್.ಷಪಿ ಅಹಮದ್ ಮಾತನಾಡಿ,ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಸುಮಾರು 4000 ಕಿ.ಮೀ ಹೆಚ್ಚು ಪಾದಯಾತ್ರೆ ನಡೆಸಿ ಶ್ರೀನಗರ ತಲುಪಿ ಲಾಲ್ ಚೌಕದಲ್ಲಿ ಭಾರತದ ತ್ರಿವರ್ಣ ದ್ವಜ ಹಾರಿಸಲು ಮುಂದಾದಾಗ ಹಲವರು ವಿರೋಧಿಸಿದ್ದರು.ಇದು ಖಂಡನೀಯ ಈ ದೇಶದಲ್ಲಿ ದ್ವೇಷ ಅಳಿಯಬೇಕು, ಪ್ರೀತಿ ಉದಯಿಸಲಿ ಎಂಬ ಮಹತ್ವದ ಉದ್ದೇಶ ಇಟ್ಟುಕೊಂಡು ಅವರು ನಡೆಸಿರುವ ಈ ಹೋರಾಟಕ್ಕಾಗಿ ಅವರಿಗೆ ಜಿಲ್ಲಾ ಕಾಮಗ್ರೆಸ್ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‍ಗೌಡ ಮಾತನಾಡಿ,ಕಾಂಗ್ರೆಸ್ ನಾಯಕರ ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿ ನೀಡಿದ್ದಾರೆ.ಅವರ ಸಾವು ವ್ಯರ್ಥವಾಗಬಾರದೆಂಬ ಆಶಯ ಕಾಂಗ್ರೆಸ್ ಕಾರ್ಯಕರ್ತರಲ್ಲಿದ್ದರೆ ಮೊದಲು ಗೊಂದಲಗಳ ಸೃಷ್ಟಿಯನ್ನು ಕೈಬಿಡಬೇಕು.ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೇ ಪಡೆಯದ ವ್ಯಕ್ತಿಗಳು ನಾನು ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ.ಅವರಿಗೆ ಕೆಲ ಕಾಂಗ್ರೆಸ್ ಮುಖಂಡರು ಕೈಜೋಡಿಸಿರುವುದು ವಿಷಾದದ ಸಂಗತಿ ಎಂದರು.
ಈ ದೇಶಕ್ಕೆ ಸ್ವಾತಂತ್ರ ತಂದುಕೊಡಬೇಕೆಂದು ಹೋರಾಟ ನಡೆಸಿದ ಮಹಾತ್ಮಗಾಂಧಿ ಗುಂಡಿಗೆ ಬಲಿಯಾದರೆ,ಪಂಜಾಬ್‍ನ್ನು ಪ್ರತ್ಯೇಕ ರಾಜ್ಯವನ್ನಾಗಿಸಬೇಕೆಂಬ ಉಗ್ರರ ಆಸೆಗೆ ತಣ್ಣೀರೆರಚಿ,ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಿದ ಇಂದಿರಾಗಾಂಧಿ,ಹಾಗೂ ಶ್ರೀಲಂಕಾ ಮತ್ತು ತಮಿಳಿರ ನಡುವಿನ ಯುದ್ದವನ್ನು ತಡೆಯುವ ನಿಟ್ಟಿನಲ್ಲಿ ಶ್ರೀಲಂಕಾಕ್ಕೆ ಶಾಂತಿ ಪಾಲನಾ ಪಡೆ ಕಳುಹಿಸಿ, ಪ್ರಪಂಚದಲ್ಲಿ ಶಾಂತಿ ನೆಲಸುವಂತೆ ಮಾಡಿದವರು ರಾಜೀವ್‍ಗಾಂಧಿ ಅವರು ಸಹ ಹುತಾತ್ಮರಾದರು.ಇಂತಹ ಮಹನೀಯರು ನಮ್ಮ ಪಕ್ಷದ ನೇತಾರರು ಎಂಬುದ ನಾವು ಹೆಮ್ಮೆ ಪಡುವ ವಿಚಾರ.ನಾವು ಹೆಚ್ಚು ಸಕ್ರಿಯರಾಗಿ ಕೆಲಸ ಮಾಡಬೇಕೆಂದು ಚಂದ್ರಶೇಖರ್ ಗೌಡ ತಿಳಿಸಿದರು.

ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ,ಡಿಸಿಸಿ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ,ಮುರುಳೀಧರ್ ಹಾಲಪ್ಪ,ರೇವಣ್ಣಸಿದ್ದಯ್ಯ, ಶಿವಾಜಿ,ಜಿ.ಎಸ್.ಪ್ರಸನ್ನಕುಮಾರ್ ಅವರುಗಳು ಹುತಾತ್ಮರ ದಿನ ಕುರಿತು ಮಾತನಾಡಿದರು, ಮರಿಚನ್ನಮ್ಮ, ಡಾ.ಫಹ್ಹಾನ್, ಸುಜಾತ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *