ಸೌಹಾರ್ಧತೆಯಿಂದ ಗಣೇಶ ಚತುರ್ಥಿ ಆಚರಣೆಗೆ ಸೂಚನೆ

ತುಮಕೂರು : ಗೌರಿ ಗಣೇಶ ಚತುರ್ಥಿಯನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸುವಂತೆ ತಿಲಕ್‌ಪಾರ್ಕ್ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ನವೀನ್ ಕರೆ ನೀಡಿದರು.


ಇಲ್ಲಿನ ಜಯನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಗೌರಿಗಣೇಶ ಚತುರ್ಥಿ ಅಂಗವಾಗಿ ಸ್ಥಳೀಯರ ಶಾಂತಿ ಸಭೆ ನಡೆಸಿ ಮಾತನಾಡಿದ ಅವರು, ಗಣೇಶೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು. ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆವರೆಗೆ ವಿಜೃಂಭಣೆಯಿಂದ ಆಚರಿಸಬೇಕು. ಆದರೆ ಯಾವುದೇ ಕಾರಣಕ್ಕೂ ಶಾಂತಿಗೆ ಭಂಗ ತರುವಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.


ಗಣೇಶ ಪ್ರತಿಷ್ಠಾಪನೆ ಬಳಿಕ ಪ್ರತಿದಿನ ರಾತ್ರಿ ವೇಳೆ ಪೂಜಾ ಕೈಂಕರ್ಯಗಳು ನಡೆಯುವ ವೇಳೆ ಧ್ವನಿವರ್ಧಕಗಳನ್ನು ಬಳಸುವುದು ಸಾಮಾನ್ಯ. ಆದರೆ ಪೂಜೆ ಮುಗಿದ ಬಳಿಕ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸಬೇಕು. ವಿನಾ ಕಾರಣ ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡಬಾರದು ಎಂದು ಗಣೇಶ ಪ್ರತಿಷ್ಠಾಪಿಸುವ ಸಂಘಟನೆಗಳು ಹಾಗೂ ಯುವಕರಿಗೆ ಸೂಚನೆ ನೀಡಿದರು.


ಗಣೇಶೋತ್ಸವ ವೇಳೆ ಭಕ್ತರಿಗೆ ಅನ್ನದಾನ ಮಾಡಿ ವಿಜೃಂಭಣೆಯಿಂದ ಆಚರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಗೊಂದಲಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ತಿಳಿಸಿದರು.


ಗಣಪತಿ ವಿಸರ್ಜನೆಗೆ ಮೊಬೈಲ್ ಟ್ಯಾಂಕರ್, ಮರಳೂರು ಕೆರೆ, ಸಿರಾ ಗೇಟ್ ಬಳಿ ವ್ಯವಸ್ಥೆ ಮಾಡಲಾಗಿದೆ. ವಿಸರ್ಜನೆ ವೇಳೆ ಈಜುಗಾರರನ್ನೆ ನೀರಿಗೆ ಇಳಿಸಬೇಕು ಎಂದು ಸೂಚನೆ ನೀಡಿದರು.


ಗಣೇಶಮೂರ್ತಿ ವಿಸರ್ಜನೋತ್ಸವದ ವೇಳೆ ಡಿ.ಜೆ. ಬಳಕೆಗೆ ಅವಕಾಶ ಇರುವುದಿಲ್ಲ. ಹಾಗೆಯೇ ವಿಸರ್ಜನೆ ಮಾಡುವಾಗ ಯಾರೂ ಸಹ ಮದ್ಯಪಾನ ಮಾಡಬಾರದು. ಈ ಮೂಲಕ ಅನಾಹುತಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.


ಗಣೇಶೋತ್ಸವದಲ್ಲಿ ಯುವಕರು ಹಿರಿಯರ ಮಾತುಗಳಿಗೆ ಮನ್ನಣೆ ನೀಡಬೇಕು ಎಂದು ಅವರು ಹೇಳಿದರು.


ಜಯನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ 700 ಸಿ.ಸಿ. ಕ್ಯಾಮೆರಾಗಳು ಇವೆ. ಹೀಗಾಗಿಯೇ ಈ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಕಡಿಮೆಯಾಗಲು ಸಾಧ್ಯವಾಗಿದೆ ಎಂದ ಅವರು ತಿಳಿಸಿದರು.


ಕಾನೂನು ಅಡಿಯಲ್ಲಿ ಕೆಲಸ ಮಾಡಲು ನಾವು ಸದಾ ಸಿದ್ದರಿರುತ್ತೇವೆ. ಹಾಗಾಗಿ ಯಾರೂ ಸಹ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬಾರದು ಎಂದು ಅವರು ಹೇಳಿದರು.


ಸಭೆಯಲ್ಲಿ ಜಯನಗರ ಪಿಎಸ್ಐ ಮಹಾಲಕ್ಷ್ಮಮ್ಮ ಹಾಗೂ ಸ್ಥಳೀಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *