ತುಮಕೂರು : ಗಣಪತಿ ವಿಸರ್ಜನೆ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ ಘಟನೆ ತುರುವೇಕೆರೆ ತಾಲ್ಲೂಕಿನಲ್ಲಿ ನಡೆದಿದೆ.
ಗಣಪತಿ ಬಿಡಲು ನೀರಿನ ಕಟ್ಟಗೆ ಇಳಿದಾಗ ಕೆಸರಿನಿಂದ ಹೊರಬರಲು ಸಾಧ್ಯವಾಗದೆ ಮೂವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾರಸಂದ್ರ ಸಮೀಪದ ರಂಗನಹಟ್ಟಿ ಕಟ್ಟೆಯಲ್ಲಿ ಸೆ.15ರಂದು ನಡೆದಿದೆ.
ಮೃತರನ್ನು ರಂಗನಹಟ್ಟಿ ಗ್ರಾಮದ 50 ವರ್ಷದ ರೇವಣ್ಣ, ಆತನ ಪುತ್ರ 26 ವರ್ಷದ ಶರತ್ ಮತ್ತು 22 ವರ್ಷದ ದಯಾನಂದ್ ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಮೆರವಣಿಗೆ ನಡೆಸಿ ಮಧ್ಯಾಹ್ನ 3ಗಂಟೆಯ ಬಳಿಕ ರಂಗನಕಟ್ಟೆಯಲ್ಲಿ ಗಣಪತಿ ವಿಸರ್ಜನೆ ಮಾಡಲು ಬಂದಿದ್ದು ಈ ಸಂದರ್ಭದಲ್ಲಿ ಶರತ್ ಮತ್ತು ದಯಾನಂದ್ ಗಣೇಶನನ್ನು ಹಿಡಿದು ನೀರಿಗೆ ಇಳಿದರು ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಕಟ್ಟೆಯಲ್ಲಿನ ಕೆಸರಿನಿಂದ ಕಾಲುಗಳು ಕೆಸರಿನಲ್ಲಿ ಸಿಲುಕೊಂಡು ಈಜಲು ಸಾಧ್ಯವಾಗದೆ ರಕ್ಷಣೆಗಾಗಿ ಕೂಗಿಕೊಂಡರು ಎನ್ನಲಾಗಿದ್ದು ಆಗ ಶರತ್ ತಂದೆ ರೇವಣ್ಣನೂ ನೀರಿಗೆ ಧುಮುಕಿದರು. ಆದರೆ ಆತನಿಗೂ ಈಜು ಬಾರದೆ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯೂ ಆಗಮಿಸಿ, ಶವಗಳನ್ನು ಕಟ್ಟೆ ಯಿಂದ ಹೊರ ತೆಗೆಯಲು ತೆಗೆಯಲು ಶೋಧಕಾರ್ಯ ನಡೆಸಿದರು ಎಂದು ತಿಳಿದು ಬಂದಿದೆ.