ಮರಳೂರು ಕೆರೆ ಕೋಡಿ, ಶಾಸಕ ಜಿ.ಬಿ.ಜ್ಯೋತಿಗಣೇಶ್ ರಿಂದ ಗಂಗಾಪೂಜೆ

ತುಮಕೂರು- ನಗರದ ಮರಳೂರು ಅಮಾನಿಕೆರೆ ಮಳೆಯಿಂದ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಗಂಗಾಪೂಜೆ ನೆರವೇರಿಸಿ ಬಾಗಿ ಅರ್ಪಿಸಿದರು.

ಕೋಡಿ ಬಿದ್ದಿರುವ ಮರಳೂರು ಅಮಾನಿಕೆರೆಗೆ ಇಂದು ಬೆಳಿಗ್ಗೆ ಮರಳೂರು ಗ್ರಾಮದ ಪ್ರಧಾನರಾದ ಅಶೋಕಕುಮಾರ್, ಮಹಾನಗರ ಪಾಲಿಕೆಯ 28ನೇ ವಾರ್ಡ್‍ನ ಮಾಜಿ ಸದಸ್ಯ ಧರಣೇಂದ್ರಕುಮಾರ್ ಸೇರಿದಂತೆ ಈ ಭಾಗದ ಗ್ರಾಮಸ್ಥರ ಸಮ್ಮುಖದಲ್ಲಿ ಗಂಗಾಪೂಜೆ ನೆರವೇರಿಸಿದ ಶಾಸಕ ಜ್ಯೋತಿಗಣೇಶ್ ಅವರು ಕೆರೆಗೆ ಬಾಗಿನ ಅರ್ಪಿಸಿದರು.

ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ಮರಳೂರು ಅಮಾನಿಕೆರೆ ಕಳೆದ 25-30 ವರ್ಷಗಳಲ್ಲಿ ಇದು 3ನೇ ಬಾರಿಗೆ ಭರ್ತಿಯಾಗಿದೆ. ಕಳೆದ ವರ್ಷವೂ ಸುರಿದ ಭಾರೀ ಮಳೆಯಿಂದಾಗಿ ಕೆರೆ ತುಂಬಿತ್ತು. ಆ ಸಂದರ್ಭದಲ್ಲೂ ಸಹ ಕೆರೆಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಗಿತ್ತು. ಅದೇ ರೀತಿ ಇಂದು ಸಹ ಗ್ರಾಮಸ್ಥರ ಸಮ್ಮುಖದಲ್ಲಿ ಕೆರೆಗೆ ಬಾಗಿನ ಅರ್ಪಿಸಲಾಗಿದೆ ಎಂದರು.

ಮರಳೂರು ಅಮಾನಿಕೆರೆ ತುಂಬಿರುವುದು ಗಂಗಸಂದ್ರ, ಮರಳೂರು, ಕುಮ್ಮಂಜಿಪಾಳ್ಯ ಸೇರಿದಂತೆ ಈ ಭಾಗದ ಹಳ್ಳಿಗಳ ರೈತರಿಗೆ ತುಂಬಾ ಅನುಕೂಲವಾಗಲಿದೆ. ಕೆರೆಯಿಂದ ಭರ್ತಿಯಾಗಿರುವುದರಿಂದ ಅಂತರ್ಜಲವೂ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ನೀರು ಬರುತ್ತದೆ. ಹಾಗಾಗಿ ಈ ಭಾಗದ ರೈತರು ಸಹ ಸಂತಸಗೊಂಡಿದ್ದಾರೆ ಎಂದರು.

ಮರಳೂರು ಅಮಾನಿಕೆರೆಯನ್ನು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಮುಂದಿನ ದಿನಗಳಲ್ಲಿ ಬಳಕೆ ಮಾಡಿಕೊಳ್ಳಲಾಗುವುದು. ಹಾಗಾಗಿ ಕೆರೆಯನ್ನು ಸಂಪೂರ್ಣವಾಗಿ ಅಚ್ಚುಕಟ್ಟುಗೊಳಿಸಿ ಹೇಮಾವತಿ ನೀರನ್ನು ಹರಿಸಿ, ಕುಡಿಯುವ ನೀರು ಪೂರೈಕೆಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮರಳೂರು ಗ್ರಾಮಕ್ಕೆ ಈ ಕೆರೆ ತಾಯಿ ಇದ್ದಂತೆ. ಕಳೆದ 3-4 ವರ್ಷಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಕೆರೆ ಕೋಡಿಯಾಗುತ್ತಿದೆ. ತುಮಕೂರಿನ ದಕ್ಷಿಣ ಭಾಗದ ಆರೇಳು ವಾರ್ಡ್‍ಗೆ ನೀರು ಒದಗಿಸಲು ಹೇಮಾವತಿ ನೀರನ್ನು ಕೆರೆಗೆ ತುಂಬಿರುವ ಕಾರ್ಯ ಮಾಡಲಾಗುವುದು. ಗಂಗಸಂದ್ರ, ಮೆಳೇಕೋಟೆ ಟೂಡಾ ಜಾಗದಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗುವುದು ಎಂದರು.

ಬುಗುಡನಹಳ್ಳಿ ಕೆರೆಗೆ ನೀರು ಬರುವುದು ನಿಂತು ಹೋದರೆ ಇಡೀ ತುಮಕೂರು ಕೆರೆಗೆ ನೀರು ನಿಂತು ಹೋಗುತ್ತದೆ. ಮುಂಬರುವ ದಿನಗಳಲ್ಲಿ ಮರಳೂರು ಕೆರೆಗೆ ಹೇಮಾವತಿ ನೀರು ತುಂಬಿಸಿ ನಗರದ ಜನತೆಗೆ ನೀರು ಪೂರೈಸುವ ಕೆಲಸವನ್ನು ಮಾಡಲಾಗುವುದು ಎಂದರು.

ಪಾಲಿಕೆ ಮಾಜಿ ಸದಸ್ಯ ಧರಣೇಂದ್ರಕುಮಾರ್ ಮಾತನಾಡಿ, ಮರಳೂರು ಅಮಾನಿಕೆರೆ ಈ ಭಾಗದ ರೈತರಿಗೆ ಜೀನವಾಡಿ. ಕಳೆದ 25-30 ವರ್ಷಗಳಲ್ಲಿ 3ನೇ ಬಾರಿಗೆ ಕೆರೆ ತುಂಬಿರುವುದು ನಮ್ಮೆಲ್ಲರಿಗೂ ಹರ್ಷ ತಂದಿದೆ. ಈ ಕೆರೆಯಲ್ಲಿ ನೀರು ತುಂಬಿದ್ದರೆ ಅಂತರ್ಜಲ ಮಟ್ಟವೂ ವೃದ್ಧಿಯಾಗಿ ರೈತರ ತೋಟ, ಜಮೀನುಗಳಿಗೆ ಬೋರ್‍ವೆಲ್‍ಗಳಿಂದ ನೀರು ಹರಿಸಲು ಅನುಕೂಲವಾಗುತ್ತದೆ ಎಂದರು.

ಮರಳೂರು ಅಮಾನಿಕೆರೆ ನಮ್ಮೆಲ್ಲರಿಗೂ ತಾಯಿ ಸಮಾನ. ನಮ್ಮ ಪೂರ್ವಜರ ಕಾಲದಿಂದಲೂ ಸಂಪ್ರದಾಯ ಬದ್ಧವಾಗಿ ಪೂಜೆ ನೆರವೇರಿಸಿಕೊಂಡು ಬರಲಾಗುತ್ತಿದೆ. ಹಾಗೆಯೇ ಇಂದು ಸಹ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಗಿದೆ ಎಂದು ಅವರು ಹೇಳಿದರು.

ಮಳೆಯಿಂದ ಮರಳೂರು ಕೆರೆ ತುಂಬುತ್ತಿರುವುದರಿಂದ ಕೆರೆಯ ಸ್ವಚ್ಛತೆ ಕಾಪಾಡಿ ತುಮಕೂರು ನಗರಕ್ಕೆ ನೀರು ಒದಗಿಸುವ ಕಾರ್ಯಕ್ಕೆ ಮುಂದಾಗಲಾಗುತ್ತಿದೆ. ಕೆರೆಯ ಏರಿ ಮೇಲೆ ಕುಣಿಗಲ್ ರಸ್ತೆ ಹೋದು ಹೋಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಡೆಗೋಡೆ ನಿರ್ಮಿಸಬೇಕು. ಕೆರೆಯ ಕೋಡಿ ಭಾಗದಲ್ಲಿ ಕಲ್ಯಾಣಿ ನಿರ್ಮಾಣ ಮಾಡಬೇಕು ಎಂದು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಮಹಾನಗರಪಾಲಿಕೆ ಸದಸ್ಯರಾದ ಧರಣೇಂದ್ರ, ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮೂಡ್ಲಗಿರಿಯಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಪ್ಪೇಸ್ವಾಮಿ, ಸಂತೋಷ್, ಗ್ರಾಮಸ್ಥರಾದ ಕೃಷ್ಣಮೂರ್ತಿ, ಚಿಕ್ಕಣ್ಣಯ್ಯ, ರಾಮಣ್ಣ, ರವಿಗೌಡ, ಮರಳೂರು ನಾಗರಾಜು, ಕೃಷ್ಣಪ್ಪ, ಚೇರ್‍ಮನೆ ಭೀಮಣ್ಣ, ಪ್ರಧಾನ್ ಅಶೋಕ್ ಕುಮಾರ್, ಮರಳೂರು ರಾಜು, ಕುಮಾರ್, ಸುರೇಶ್, ರವೀಶಯ್ಯ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *