21 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜುಲೈ 9ರಂದು ಸಾರ್ವತ್ರಿಕ ಮುಷ್ಕರ

ತುಮಕೂರು:ಕೆಲಸದ ಅವಧಿ ಹೆಚ್ಚಳ,ಕಾನೂನು ಸಂಹಿತೆಗಳನ್ನು ಹಿಂಪಡೆಯುವುದು,ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ವೇತನ ಹೆಚ್ಚಳ ಸೇರಿದಂತೆ 21 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಜುಲೈ 09 ರಂದು 10 ಕಾರ್ಮಿಕ ಸಂಘಟನೆಗಳು ಒಗ್ಗೂಡಿ ಸಾರ್ವತ್ರಿಕ ಮುಷ್ಕರ ಹಮ್ಮಿಕೊಂಡಿರುವುದಾಗಿ ಸಿಐಟಿಯು ಅಧ್ಯಕ್ಷರು ಮತ್ತು ಜೆಸಿಟಿಯ ಸಂಚಾಲಕ ಕೆಂಬೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಸರಕಾರದ ರೈತ ವಿರೋಧಿ, ಕಾರ್ಮಿಕರ ವಿರೋಧಿ ನೀತಿಗಳನ್ನು ಖಂಡಿಸಿ, ಈ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದ್ದು,ಮುಷ್ಕರದಲ್ಲಿ 10 ಕಾರ್ಮಿಕ ಸಂಘಟನೆಗಳ ಜೊತೆಗೆ, ಬ್ಯಾಂಕ್, ವಿಮೆ, ಅಂಚೆ, ಕೇಂದ್ರ ಸರಕಾರಿ ನೌಕರರ ಸಂಘಟನೆಗಳು ಪಾಲ್ಗೊಳ್ಳುತ್ತಿವೆ ಎಂದರು.

ಆಳುವ ಸರಕಾರಗಳು ರೈತರು ಮತ್ತು ಕಾರ್ಮಿಕರ ಮೇಲಿನ ದಾಳಿ ಇದೆ ಮೊದಲಲ್ಲ.ವಾಜಪೇಯಿ ಸರಕಾರವಿದ್ದಾಗ ಹೇರ್ ಅಂಡ್ ಫೇರ್ ಹೆಸರಿನ ಕಾನೂನಿನ ವಿರುದ್ದ ನಿರಂತರ ಹೋರಾಟದ ಫಲವಾಗಿ ಕಾಯ್ದೆಯನ್ನು ವಾಪಸ್ ಪಡೆದರು. ಆದರೆ ಈಗ ವೈಜ್ಞಾನಿಕವಾಗಿ ನಿಗಧಿ ಮಾಡಿದ್ದ 8 ಗಂಟೆಗಳ ಕೆಲಸದ ಅವಧಿಯನ್ನು 12ಗಂಟೆಗೆ ಹೆಚ್ಚಿಸಲು ಮುಂದಾಗಿದೆ. ಅಲ್ಲದೆ 1947ರಲ್ಲಿ ಜಾರಿಗೆ ಬಂದ ಕಾರ್ಮಿಕ ಕಾಯ್ದೆಗಳ ಬದಲಿಗೆ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿ ಬಂಡವಾಳಗಾರರ ಹಿತ ಕಾಯಲು ಮುಂದಾಗಿದೆ.ವಿರೋಧಪಕ್ಷದ ನಾಯಕನಾಗಿದ್ದಾಗ ವಿರೋಧಿಸಿದ್ದ ಚನ್ನರಾಯಪಟ್ಟಣ ಭೂ ಸ್ವಾಧೀನವನ್ನು ತಾವೇ ಮುಖ್ಯಮಂತ್ರಿಯಾಗಿದ್ದಾಗ ಅನುಷ್ಠಾನಕ್ಕೆ ಮುಂದಾಗಿರುವ ಸಿದ್ದರಾಮಯ್ಯ ಅವರ ದ್ವಂದ್ವ ನೀತಿಯನ್ನು ವಿರೋಧಿಸಿ ಈ ಮುಷ್ಕರ ನಡೆಯುತ್ತಿದೆ.ಎಲ್ಲಾ ಕೈಗಾರಿಕೆಗಳ ಕಾರ್ಮಿಕರು ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕೆಂಬೇಗೌಡ ಮನವಿ ಮಾಡಿದರು.

ಸಿಐಟಿಯು ಅಧ್ಯಕ್ಷರಾದ ಸೈಯದ್ ಮುಜೀಬ್ ಮಾತನಾಡಿ,ಸರಕಾರದ ನೀತಿಗಳಿಂದ ಅಸಂಘಟಿತವಲಯದ ಕಾರ್ಮಿಕರಿಗೆ ಸೇವಾ ಬದ್ರತೆಯಿಲ್ಲದೆ ಅತಂತ್ರದ ಸ್ಥಿತಿಯಲ್ಲಿದ್ದಾರೆ.ರಾಷ್ಟ್ರದ ಜಿಡಿಪಿಗೆ ಇವರ ಕೊಡುಗೆ ಶೇ50 ರಷ್ಟಿದೆ. ಆದರೂ ಇವರ ಬಗ್ಗೆ ಯಾರು ಸಹ ಕಾಳಜಿ ವಹಿಸುತ್ತಿಲ್ಲ. ಈಶ್ರಮ್ ಕಾರ್ಡು ಅಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ.ಆದರೆ ಸರಕಾರ ಮಾತ್ರ ಇಎಲ್‍ಐ ಹೆಸರಿನಲ್ಲಿ ಉದ್ಯೋಗ ಸೃಷ್ಟಿಸುವ ಉದ್ದಿಮೆದಾರರಿಗೆ ಪ್ರೋತ್ಸಾಹಧನ ನೀಡಲು 2ಲಕ್ಷ ಕೋಟಿ ರೂಗಳನ್ನು ಕಾಯ್ದಿರಿಸುವ ಮೂಲಕ ಬಂಡವಾಳಗಾರರನ್ನು ರಕ್ಷಿಸಲು ರೂಪಿಸಿರುವ ಹೊಸ ದಂಧೆಯಾಗಿದೆ.ಗುತ್ತಿಗೆ ಕಾರ್ಮಿಕ ಪದ್ದತಿಯ ಮೂಲಕ ಎಲ್ಲಾ ಪ್ರಮುಖ ಕೆಲಸಗಳನ್ನು ಗುತ್ತಿಗೆ ನೌಕರನ್ನು ನೇಮಕ ಮಾಡಿ, ಅವರನ್ನು ಆತಂತ್ರ ಸ್ಥಿತಿಯಲ್ಲಿ ಇರಿಸಲಾಗಿದೆ.ಹಾಗಾಗಿ ಗುತ್ತಿಗೆ ನಿಯಂತ್ರಣ ಕಾಯ್ದೆ ಜಾರಿಗೆ ತರಬೇಕೆಂಬುದು ಕಾರ್ಮಿಕ ಸಂಘಟನೆಗಳ ಒಕ್ಕೊರಲ ಒತ್ತಾಯವಾಗಿದೆ. ಇದರ ಜೊತೆಗೆ,ವಿದ್ಯುತ್ ಖಾಸಗೀಕರಣ,ಬಗರ್‍ಹುಕ್ಕಂ ಸಾಗುವಳಿ ಮಂಜೂರು, ಕೈಗಾರಿಕೆಗಳಿಗೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ಈ ಮುಷ್ಕರ ಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ರೈತರು, ಕಾರ್ಮಿಕರು ಪಾಲ್ಗೊಳ್ಳುವಂತೆ ಕರೆ ನೀಡಿದರು.

ಎಎನ್‍ಟಿಯುಸಿ ಅಧ್ಯಕ್ಷರಾದ ಗೋವಿಂದರಾಜು, ಎಐಯುಟಿಯಸಿಯ ಅಧ್ಯಕ್ಷರಾದ ಮಂಜುಳ ಗೋನಾವರ ಮಾತನಾಡಿದರು.

ಜುಲೈ 09 ರಂದು ಬೆಳಗ್ಗೆ 10 ಗಂಟೆಗೆ ತುಮಕೂರು ನಗರಕ್ಕೆ ಹಿರೇಹಳ್ಳಿ, ಅಂತರಸನಹಳ್ಳಿ, ವಸಂತನರಸಾಪುರ ಕೈಗಾರಿಕಾ ಪ್ರದೇಶಗಳಿಂದ ಕಾರ್ಮಿಕರು ಜಾಥಾ ಮೂಲಕ ಆಗಮಿಸಿ, ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಿಐಟಿಯನ ನಗರ ಅಧ್ಯಕ್ಷರಾದ ಎ.ಲೋಕೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *