‘ಹಿಂದಿ’ ಎಂಬ ಘಟಸರ್ಪ ತಲೆಯೆತ್ತದಂತೆ ಮೊಟಕುತ್ತಿರಬೇಕು- ಡಾ.ಅಗ್ರಹಾರ ಕೃಷ್ಣಮೂರ್ತಿ ಅಭಿಮತ

ತುಮಕೂರು : ಭಾರತ ಬಹುಭಾಷ ಸಂಸ್ಕøತಿ ದೇಶವಾಗಿದ್ದು, ಕೇಂದ್ರ ಸರ್ಕಾರವು ಹಿಂದಿ ಭಾಷೆ ಎಂಬ ಘಟ ಸರ್ಪವನ್ನು ಹೇರಲು ಪ್ರಯತ್ನಿಸುತ್ತಲೇ ಇರುತ್ತದೆ, ಈ ಘಟಸರ್ಪ ನಮ್ಮ ಭಾಷೆಯನ್ನು ನುಂಗಲು ಬಿಡದಂತೆ, ಆ ಘಟಸರ್ಪ ಹೆಡೆ ಎತ್ತದಂತೆ ಆಗಾಗ ಹೆಡೆಯ ಮೇಲೆ ಮೊಟಕುತ್ತಿರಬೇಕೆಂದು ತುಮಕೂರು ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಡಾ.ಅಗ್ರಹಾರ ಕೃಷ್ಣಮೂರ್ತಿ ಅವರು ಅಭಿಪ್ರಾಯಪಟ್ಟರು.

ಅವರು ನಗರದ ಗಾಜಿನಮನೆಯಲ್ಲಿ ಜಿಲ್ಲಾ ಕಸಾಪವತಿಯಿಂದ ಆಯೋಜಿಸಿದ್ದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡುತ್ತಿದ್ದ ಅವರು, ಭಾರತದ ಬಹುಭಾಷಿಕ ಸಮುದಾಯ ಬಹು ಸಂಸ್ಕøತಿಗಳ ದೇಶದಲ್ಲಿ ಹುಟ್ಟರುತಕ್ಕಂತಹ ನಮಗೆ ಯಾವುದೇ ಒಂದು ಭಾಷೆ ಮಾತ್ರ ಬಹಳ ದೊಡ್ಡದು, ಬಹಳ ಚಿಕ್ಕದು ಎಂದು ಹೇಳುವ ಕೆಲಸವನ್ನು ಮಾಡಬಾರದು ಎಂದು ಮಾರ್ಮಿಕವಾಗಿ ಹೇಳಿದರು.

ಲೇಖಕರು, ಕಲಾವಿದರು,ಪತ್ರಕರ್ತರು ಈಗ ಒಂದು ಆತಂಕದ ಸ್ಥಿತಿಯಲ್ಲಿದ್ದಾರೆ.ಅವರ ಸಾಚಾ ಅಭಿವ್ಯಕ್ತಿಗೆ ಧಕ್ಕೆ ಒದಗಿರುವುದು ಎದ್ದು ಕಾಣುತ್ತಿದೆ.ಜಗತ್ತಿನ ಅನೇಕ ಕಡೆಗಳಲ್ಲಿ ಯುದ್ಧ, ಭಯೋತ್ಪಾದನೆ, ಹಿಂಸೆ ತಲೆಯೆತ್ತುತ್ತಲೇ ಇವೆ. ಈಶಾನ್ಯ ಭಾರತದ ಗುಡ್ಡಗಾಡು ಜನಸಮುದಾಯಗಳ ನಡುವಿನ ಆತಂಕಕಾರಿ ಬೆಳವಣಿಗೆಗಳನ್ನು,ರಾಜಕಾರಣ ಹಿಂಸೆಯನ್ನೂ ತನ್ನ ಸ್ವಾರ್ಥಕ್ಕೆ ಬಳಸಿ ಕೊಳ್ಳುತ್ತಿರುವುದನ್ನು ದಿನನಿತ್ಯ ಕಾಣುತ್ತಿದ್ದೇವೆ.ಎನ್ಕೌಂಟರುಗಳು ನಮ್ಮ ಮನೆಯಂಗಳಕ್ಕೂ ಕಾಲಿಟ್ಟಿರಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ನೈಸರ್ಗಿಕ ವಿಪತ್ತುಗಳುಂಟಾದಾಗ ಆಡಳಿತ ವ್ಯವಸ್ಥೆಯ ಜೊತೆಗೆ ಜನರೂ ಸೇರಿಕೊಳ್ಳುತ್ತಾರೆ.ಪರಿಹಾರ ಕಾರ್ಯಗಳಲ್ಲಿ ಒಂದಾಗುವ ಮೂಲಕ ನೆಮ್ಮದಿ ಕಾಣುತ್ತಾರೆ.ಆದರೆ ಹಿಂಸೆ ತಲೆಯೆತ್ತಿದಾಗ ಜನ ಸಾಮಾನ್ಯರು ಹತಾಶರಾಗುತ್ತಾರೆ.ಜನ ನಾಯಕರುಗಳು ಕೂಡ ತನಿಖೆ ಇತ್ಯಾದಿಗಳ ಬೇಡಿಕೆಯಿಟ್ಟು ಮರೆತು ಬಿಡುತ್ತಾರೆ. ಹಿಂಸಕರು ತೃಪ್ತರಾಗಿದ್ದಾರೆ, ಮತ್ತೊಮ್ಮೆ ಇಂಥ ಹಿಂಸೆ ಜರುಗುವುದಿಲ್ಲ ಎಂದು ನಿರಾತಂಕ ಸ್ಥಿತಿ ತಲುಪುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿರುತ್ತದೆ.ದೈಹಿಕ ಅಥವಾ ಮಾನಸಿಕ ಹಿಂಸೆಯುಂಟು ಮಾಡುವುದರ ಹಿಂದೆ ಸದಾ ಹೇಡಿತನ ಅಡಗಿರುತ್ತದೆ.ಹೇಡಿಗಳು ಅಮಾಯಕರ ಮೇಲೆ ಹಿಂಸೆಯನ್ನು ಚೆಲ್ಲಿ ಪರಾರಿಯಾಗಿ ಬಿಡುತ್ತಾರೆ.ಇದು ಮೂಲಭೂತವಾಗಿ ಧಾರ್ಮಿಕ ಮತ್ತು ರಾಜಕೀಯ ದುರುದ್ದೇಶ ವುಳ್ಳಂಥದ್ದು.ಹಿಂಸಕರು ತಾವು ಅಮಾಯಕರನ್ನು ಕೊಲ್ಲುತ್ತಿದ್ದೇವೆಂಬ ಪರಿಜ್ಞಾನವೇ ಇಲ್ಲದ ಕುರುಡರಂತಿರುತ್ತಾರೆ. ಹಿಂಸೆಯು ಹಲವು ಭಯಾನಕ ಮುಖಗಳಲ್ಲೊಂದು ಭಯೋತ್ಪಾದನೆ.ಹಿಂಸೆಯ ಕೂಸು. ಇದು ರಚ್ಚೆ ಹಿಡಿಯುವುದು,ಹಟ ಹಿಡಿಯುವುದೇ ಹೆಚ್ಚು. ಹಿಂಸೆಯನ್ನು ಯಶಸ್ವಿಯಾಗಿ ಪಳಗಿಸಿದವರು ಮಹಾತ್ಮ ಗಾಂಧೀಜಿ ಎಂದು ಡಾ.ಆಗ್ರಹಾರ ಕೃಷ್ಣಮೂರ್ತಿ ನುಡಿದರು.

ನಮ್ಮ ಅಂಗಳದಲ್ಲೂ, ದೇಶದ ಮತ್ತು ವಿಶ್ವದ ಅನೇಕ ಕಡೆಗಳಲ್ಲಿ ತಾಂಡವವಾಡುತ್ತಿರುವ ಹಿಂಸೆಯ ಈ ದಿನಗಳಲ್ಲಿ ಬುದ್ಧ, ಬಸವ, ಗಾಂಧೀಜಿಯವರ ಅಹಿಂಸಾವಾದಕ್ಕೆ ಹೆಚ್ಚಿನ ಮಹತ್ವ ಸಿಗಬೇಕು.ಹಿಂಸೆಗೆ ಜಯ ದೊರೆಯುವುದಿಲ್ಲ. ಅಹಿಂಸೆ, ಶಾಂತಿ, ಪ್ರೀತಿ ಗೆದ್ದಿರುವ ಸಾವಿರಾರು ಘಟನೆಗಳನ್ನು ನಾವು ಚರಿತ್ರೆಯಲ್ಲಿ ಕಾಣಬಹುದು.ನಾವು ಮುಂದಿನ ಪೀಳಿಗೆಗೆ ಈ ಪಾಠಗಳನ್ನು ಕಲಿಸದಿದ್ದರೆ ಅವರ ಭವಿಷ್ಯವನ್ನು ನಾವೇ ಅಳಿಸಿ ಹಾಕಿ ದಂತಾಗುತ್ತದೆ.ನಾವು ಎಚ್ಚರವನ್ನು ಕಾಯ್ದುಕೊಳ್ಳಬೇಕು ಎಂದು ಡಾ.ಅಗ್ರಹಾರ ಕೃಷ್ಣಮೂರ್ತಿ ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕೊರಟಗೆರೆ ಅಕ್ಕಿರಾಂಪುರದ ವಿಶ್ವ ಕುಂಚಿಟಿಗರ ಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ಶ್ರೀಶ್ರೀಹನುಮಂತನಾಥಸ್ವಾಮೀಜಿ ಆಶೀರ್ವನ ನೀಡಿ,ನಾಡು, ನುಡಿಯ ರಕ್ಷಣೆಯಲ್ಲಿ ಎಲ್ಲರೂ ಸಂಘಟಿತರಾಗಿ ಹೋರಾಡಬೇಕಿದೆ.ಆಗ ಮಾತ್ರ ನಮ್ಮ ಆಸ್ಥಿತ್ವ ಉಳಿಸಿಕೊಳ್ಳಲು ಸಾಧ್ಯ. ನವೆಂಬರ್ ಎಂದರೆ ಕನ್ನಡದ ತಿಂಗಳು, ಇದು ಕೇವಲ ಒಂದು ತಿಂಗಳಿಗೆ ಸೀಮಿತವಾಗದೆ, ಹಿರಿಯರನ್ನು ಗೌರವಿಸುತ್ತಾ, ಕಿರಿಯರನ್ನು ಪ್ರೋತ್ಸಾಹಿಸುತ್ತಾ ಭಾಷೆಯ ಬೆಳವಣಿಗೆಗೆ ಒಟ್ಟಾಗಿ ದುಡಿಯೋಣ ಎಂದರು.

ಆಶಯ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಜಿಲ್ಲಾಡಳಿತದ ಒತ್ತಾಸೆಯಿಂದ 2 ದಿನಗಳ ಈ ಕನ್ನಡ ನುಡಿ ಹಬ್ಬವನ್ನು ಕಸಾಪ ಹಮ್ಮಿಕೊಂಡಿದೆ.ಎರಡು ದಿನದ ಈ ಕಾರ್ಯಕ್ರಮದಲ್ಲಿ 8 ವಿವಿಧ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.ಮಹಿಳಾಗೋಷ್ಠಿ, ಯುವಜನತೆಗಾಗಿ ಕೌಶಲ್ಯಾಭಿವೃದ್ದಿ,ಜಾನಪದ ಕಲೆಗಳ ಗೋಷ್ಠಿ ಆಯೋಜಿಸಿದ್ದು, ಕಲೆಯ ತವರೂರಾದ ಕರ್ನಾಟಕದ ಹೆಬ್ಬಾಗಿಲು ತುಮಕೂರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲು ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಪರಿಷತ್ತಿನ ದ್ವಜಾರೋಹಣವನ್ನು ಎಡಿಸಿ ಡಾ.ಎನ್.ತಿಪ್ಪೇಸ್ವಾಮಿ ನೆರವೇರಿಸಿದರು.ನಗರದ ಬಿಜಿಎಸ್ ವೃತ್ತದಿಂದ ಗಾಜಿನ ಮನೆಯವರಗೆ ಸಮ್ಮೇಳಾನಾಧ್ಯಕ್ಷರಾದ ಡಾ.ಆಗ್ರಹಾರ ಕೃಷ್ಣಮೂರ್ತಿ ದಂಪತಿಗಳನ್ನು ಮೆರವಣಿಗೆಯ ಮೂಲಕ ಕರೆತರಲಾಯಿತು.ಕಾರ್ಯಕ್ರಮದಲ್ಲಿ ಸಿಇಓ ಜಿ.ಪ್ರಭು ಮತ್ತು ಪಾಲಿಕೆ ಆಯುಕ್ತರಾದ ಅಶ್ವಿಜ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಗೌರವ ಕಾರ್ಯದರ್ಶಿ ಡಾ.ಡಿ.ಎನ್.ಯೋಗೀಶ್ವರಪ್ಪ,ಡಾ.ಕಂಟಲಗೆರೆ ಸಣ್ಣಹೊನ್ನಯ್ಯ,ಮುರುಳಿಕೃಷ್ಣಪ್ಪ, ಡಾ.ಅಸ್ಗರ್ ಬೇಗ್, ಡಾ.ಚೇತನ್, ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಚಾಂದು, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *