ಯಾಕೋ ಹಳೆಯದೆಲ್ಲಾ ನೆನಪಾಯಿತು ಅದು 1984, 7ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದಿದ್ದಕ್ಕಾಗಿ ಚಿಕ್ಕಮಗಳೂರಿನಲ್ಲಿ ನವೋದಯ ಪರೀಕ್ಷೆ ಬರೆಯಲು ನಾನು ಮತ್ತು ಇನ್ನೊಬ್ಬ ಗೆಳೆಯನನ್ನು ಆಯ್ಕೆ ಮಾಡಿ ಕಳಿಸಲಾಗಿತ್ತು.
ಚಿಕ್ಕಮಗಳೂರಿನಲ್ಲಿ ನಮ್ಮ ತಾಯಿ ತಮ್ಮ ಟೀ ಹೋಟೆಲ್ ನಡೆಸುತ್ತಿದ್ದರಿಂದ ನನಗೆ ಉಳಿದುಕೊಳ್ಳಲು ಅಂತಹ ತಾಪತ್ರೆಯಗಲಿಲ್ಲ, ನಮ್ಮವರೇ ಎಂದು ಮನೆಯೊಂದರಲ್ಲಿ ನನ್ನ ಬಿಟ್ಟು ಪರೀಕ್ಷೆಗೆ ಓದಿಕೋ ಅಂತ ನಮ್ಮ ಮಾವ ಹೋಟೆಲ್‍ಗೆ ಹೋದರು, ಆಗ ನಮ್ಮ ಅಣ್ಣ ಮೆಡಿಕಲ್ ದಾವಣಗೆರೆಯಲ್ಲಿ ಓದುತ್ತಿದ್ದರಿಂದ, ನಾನು ದಾವಣಗೆರೆಯಲ್ಲಿ 8ನೇ ತರಗತಿಯಲ್ಲಿ ಇಂಗೀಷ್ ಮಾಧ್ಯಮದಲ್ಲಿ ಓದುತ್ತಿದ್ದೆ.
ನಾನು ಬಲು ಬುದ್ದಿವಂತ ಅಂತ ನಾನು ಉಳಿದುಕೊಂಡಿದ್ದ ಮನೆಯವರು ರಾಜ್ಯಾತಿಥ್ಯ ಮಾಡುತ್ತಿದ್ದರು, ಆ ಮನೆಯಲ್ಲಿ 4 ಜನ ಹೆಣ್ಣು ಮಕ್ಕಳಿದ್ರು, ಅವಾಗಲೇ ಆ ಹೆಣ್ಣು ಮಕ್ಕಳು ಫಿಲ್ಮ್ ಸ್ಟಾರ್‍ಗಳಂತೆ ಇದ್ದಿದ್ದರಿಂದ ಅವರನ್ನು ಸಿನಿಮಾ ಇಂಡಸ್ಟ್ರೀಯವರು ಹೀರೋಯಿನ್ ಮಾಡಲು ಬಂದಿದ್ದರು ಒಂದು ಹುಡುಗಿಯನ್ನ ಅಂತ ಹೇಳಿದರು.
ಆ ಮನೆಯಲ್ಲಿ 8ನೇ ತರಗತಿ ಓದುತ್ತಿದ್ದ ಹುಡುಗಿ ನನ್ನ ಬಳಿ ಬಂದು ಕೆಲ ಲೆಕ್ಕ ಮತ್ತು ಭೌತಶಾಸ್ತ್ರದ ಪ್ರಾಬ್ಲಮ್‍ಗಳನ್ನು ಹೇಳಿ ಕೊಡುವಂತೆ ಕೇಳಿದಾಗ ನಾನು ಸಲೀಸಾಗಿ ಹೇಳಿ ಕೊಟ್ಟೆ, ಲೆಕ್ಕಗಳನ್ನು ನೋಡಿಕೊಳ್ಳದೆ ಹೇಳಿ ಕೊಟ್ಟಿದ್ದಕ್ಕೆ ಆ ಹುಡುಗಿ ಅಯ್ಯೋ ಇಷ್ಟೊಂದು ಚೆನ್ನಾಗಿ ಲೆಕ್ಕ ಮಾಡುತ್ತೀಯ ಅಂತ ಗುಣಗಾನ ಮಾಡಿದಳು.
ಪರೀಕ್ಷೆ ಬರೆದು ಹಿಂತಿರುಗುವಾಗ ಆ ಹುಡುಗಿ ದಾವಣಗೆರೆಯ ಹಾಸ್ಟಲ್ ವಿಳಾಸ ತೆಗೆದುಕೊಂಡಳು, ಆಗಾಗ್ಗೆ ಪತ್ರ ಬರೆಯುತ್ತಿದ್ದಳು, ಪಿಯುಸಿಗೆ ಬರುವ ವೇಳೆಗೆ ನಮ್ಮಿಬ್ಬರದು ಸ್ನೇಹ ಪ್ರೇಮಕ್ಕೆ ತಿರುಗಿತು,ನಾನು ಆಗಿನ ಕಾಲಕ್ಕೆ ಕವನ, ಪ್ರೇಮ ಪತ್ರಗಳನ್ನು, ರಸವತ್ತಾಗಿ ಬರೆಯುತ್ತಿದ್ದರಿಂದ ಕಾಲೇಜಿನಲ್ಲೂ ನನಗೆ ಗ್ರೇಡಿತ್ತು, ಹುಡುಗಿಯೂ ಮೆಚ್ಚಿಕೊಂಡಿದ್ದಳು.
ಅವರಕ್ಕನನ್ನು ತುಮಕೂರಿಗೆ ಮದುವೆ ಮಾಡಿ ಕೊಟ್ಟಿದ್ದರಿಂದ ಆ ಹುಡುಗಿ ತುಮಕೂರಿಗೆ ಬಂದಾಗಲೆಲ್ಲಾ ಅವಳ ಜೊತೆ ಸುತ್ತಾಟ ನಡೆಯುತ್ತಾ ಇತ್ತು, ಹೀಗೆ ಸುತ್ತುವಾಗ ದಿಢೀರನೇ ನಮ್ಮ ಬುದ್ಧ ಗುರುಗಳಾದ ಕೆ.ಎಂ.ಶಂಕರಪ್ಪನವರು ಎದುರಿಗೆ ಸಿಕ್ಕಿ, ತಮ್ಮ ಬಿಳಿ ಗಡ್ಡ ನೀವಿಕೊಳ್ಳುತ್ತಾ, ಕನ್ನಡಕದಲ್ಲೇ ನಮ್ಮಿಬ್ಬರನ್ನೂ ನೋಡುತ್ತಾ ಏನಯ್ಯ ಓದಯ್ಯ ಅಂದ್ರೆ ಹುಡುಗಿ ಜೊತೆ ತಿರುಗುತ್ತೀಯ, ಅವಳ ಓದನ್ನು ಹಾಳು ಮಾಡಿ ನೀನು ಹಾಳಾಗಬೇಡ ಇಬ್ಬರೂ ಚೆನ್ನಾಗಿ ಓದ್ರಿ ಅಂದು ಮುಂದಕ್ಕೆ ಹೋದರು.
ಕೆಲ ದಿನಗಳ ನಂತರ ಮತ್ತೆ ಸಿಕ್ಕ ಬುದ್ಧ ಗುರುಗಳು ಏನಯ್ಯ ಆ ಹುಡುಗಿ ಲಿಪ್ಟ್‍ಕಿಗೆ ನೀನು ದುಡ್ಡು ಇಕ್ಕಲಾಗಲ್ಲ, ಮೊದಲು ಬಿಟ್ಟಾಕಯ್ಯ, ಅವಳು ಸರಿಯಿಲ್ಲ ಅಂದ್ರು, ಬುದ್ದ ಗುರುಗಳ ಮಾತು ನನ್ನ ತಲೆಯಲ್ಲಿ ಹಾಗೆ ಇತ್ತು.
ನಮ್ಮ ಓದೆಲ್ಲಾ ಮುಗಿದ ನಂತರ ದುಡಿಮೆ ಅಂತ ಕಂಡುಕೊಂಡ ಮೇಲೆ ನನ್ನ ಗೆಳೆಯನೊಬ್ಬನನ್ನು ಕರೆದುಕೊಂಡು ಚಿಕ್ಕಮಗಳೂರಿಗೆ ಹೋದೆ, ಆ ಹುಡುಗಿ ಮನೆಗೆ ಹೋಗುವಾಗ ಹೊರಲಾರದಷ್ಟು ಬಾರದ ಕಲ್ಲಂಗಡಿ ಹಣ್ಣು ತೆಗೆದುಕೊಂಡು ಹೋದೆವು ರಾತ್ರಿಯೆಲ್ಲಾ ಅಲ್ಲೆ ಉಳಿದಿದ್ದು, ಬೆಳಿಗ್ಗೆ ವಿಷಯ ಪ್ರಸ್ತಾಪಿಸಿದಾಗಿ ಹುಡುಗಿ ನೀನು ಡಾಕ್ಟರ್ ಆಗಲಿಲ್ಲ, ನನಗೆ ಇಷ್ಟವಾಗಲಿಲ್ಲ ಎಂದಳು.
ಗೆಳೆಯ, ನಾನು ಈ ಪ್ರೇಮದ ಪರಿಯ ಎಂಬ ನರಸಿಂಹಸ್ವಾಮಿಯವರ ಹಾಡನ್ನು ನೆನೆಯುತ್ತಾ ನಮ್ಮ ಮಾವನವರ ಹೋಟೆಲ್‍ಗೆ ಹೋಗಿ ವಿಷಯ ತಿಳಿಸಿದಾಗ ಆ ಹುಡುಗಿ ಬೇರೊಬ್ಬನ ಜೊತೆ ಪ್ರೇಮ ಬೆಳಸಿರುವುದಾಗಿ ತಿಳಿಸಿದಾಗ, ನನಗೆ ಬುದ್ಧ ಗುರುಗಳ ಮಾತು ನೆನಪಾಗಿ, ಗುರುಗಳು ನನ್ನ ಒಂದು ಗಂಡಾಂತರದಿಂದ ಪಾರು ಮಾಡಿದರೆಂದು ಖುಷಿ ಪಟ್ಟುಕೊಂಡೆ.
ಈಗಲೂ ಚಿಕ್ಕಮಗಳೂರಿಗೆ ಹೋದಾಗ ದಂಡರಮುಖಿ ಕೆರೆ ಏರಿಯಾ ಮೇಲೆ ನಾವಿಬ್ಬರೂ ತಂಗಾಳಿಯಲ್ಲಿ ನಡೆದ ನಡಿಗೆ, ಮಾತುಕತೆ, ಬಸವನಹಳ್ಳಿಯ ಆ ಮನೆ ಕಾಡುತ್ತದೆ, ಆದರೆ ನನ್ನ ಬುದ್ಧ ಗುರುಗಳು ಹೇಳಿದ ಮಾತು ಆ ನಂತರ ಎಷ್ಟೊಂದು ಸತ್ಯವಾಯಿತು, ಆ ನಂತರವೂ ನನ್ನನ್ನು ಹಲವು ಹುಡುಗಿಯರು ಪ್ರೀತಿಸಿದ್ದು, ಪ್ರೇಮ ಪತ್ರಗಳನ್ನು ಬರೆದದ್ದು, ಅವುಗಳನ್ನೆಲ್ಲಾ ನನ್ನ ಹೆಂಡತಿ, ಮಕ್ಕಳು ಇತ್ತೀಚೆಗೆ ಓದಿ ಪಕಾರನೇ ನಕ್ಕಿದ್ದು ಎಲ್ಲವೂ ಒಂದು ಕನಸಿನಂತೆ, ನಾನು ಹೇಗೆ ಸಮಾಜದ ಜನರ ದುಃಖ-ಸಂಕಷ್ಟಗಳಿಗೆ ಮಿಡಿಯುವ ಮನಸ್ಸು ಬಂತು, ಕಳೆದು ಹೋದ ಹುಡುಗಿ ಏನಾದಳು ಎನ್ನುವುದಕ್ಕಿಂತ ನಾನು ಏನಾದೆ, ನನ್ನ ಪ್ರೀತಿಸುವ ಜನ ನನ್ನ ಹೃದಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿದಾಗ ಈ ಪ್ರೇಮಿಗಳ ದಿನಕ್ಕಿಂತ ನನ್ನ ಪ್ರೀತಿಸುವ ಜನಗಳ ಪ್ರೀತಿಯ ಇಬ್ಬನಿಯ ಮುಂದೆ ಬೆಳದಿಂಗಳು ಸಹ ಮಸುಕೇನೋ ಅನ್ನಿಸುತ್ತದೆ.
ನನ್ನನ್ನು ಲವ್ವರ್ ಆಗಿ, ಅಣ್ಣನಾಗಿ, ಗೆಳೆಯನಾಗಿ, ಅಂಕಲ್‍ನನ್ನಾಗಿ, ಇನ್ನೇನೋ ಆಗಿ ನನಗೆ ಪ್ರೀತಿಯನ್ನು ನೀಡುತ್ತಿರುವ ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು.
-ವೆಂಕಟಾಚಲ.ಹೆಚ್.ವಿ.
Agidella olledakke