ಎಂ.ಸಿ.ವೇಣುಗೋಪಾಲ್‍ರಿಗೆ ಎಂಎಲ್‍ಸಿ ಸ್ಥಾನ ನೀಡಿ- ಎಸ್.ಟಿ.ಶ್ರೀನಿವಾಸ್

ತುಮಕೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಂ.ಸಿ.ವೇಣುಗೋಪಾಲ್ ಅವರಿಗೆ ಪಕ್ಷದಿಂದ ವಿಧಾನ ಪರಿಷತ್‍ಗೆ ಅವಕಾಶ ಮಾಡಿಕೊಡಬೇಕು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮುಖಂಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ.ಶ್ರೀನಿವಾಸ್ ಅವರು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ.

ಭಾನುವಾರ ನಗರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್.ಟಿ.ಶ್ರೀನಿವಾಸ್, ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ, ಸರ್ವರಿಗೂ ಸಮಾನ ಅಧಿಕಾರದ ಅವಕಾಶ ನೀಡುತ್ತಾ ಬಂದಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರವೇ ನಿರ್ಲಕ್ಷಿತ ಸಮಾಜದವರು, ಸಾಮಾನ್ಯ ಕಾರ್ಯಕರ್ತರೂ ರಾಜಕೀಯ ಅಧಿಕಾರ ಪಡೆಯಲು ಅವಕಾಶವಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವ ಪಕ್ಷದ ಸಂಘಟನೆಗೆ ನಿರಂತರ ಶ್ರಮಿಸುತ್ತಿರುವ ಎಂ.ಸಿ.ವೇಣುಗೋಪಾಲ್ ಅವರು ಪಕ್ಷಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಪಕ್ಷದ ಅಭ್ಯರ್ಥಿಗಳು ಅನೇಕ ಚುನಾವಣೆ ಗೆಲ್ಲಲು ಇವರ ಕಾಣಿಕೆಯೂ ಅಪಾರವಾಗಿದೆ. ದಕ್ಷ ನಾಯಕರಾಗಿರುವ ಎಂ.ಸಿ.ವೇಣುಗೋಪಾಲ್ ಅವರಿಗೆ ಕಾಂಗ್ರೆಸ್ ಪಕ್ಷ ಈ ಬಾರಿ ವಿಧಾನ ಪರಿಷತ್ ಸದಸ್ಯರಾಗಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರು. ವೇಣುಗೋಪಾಲ್ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಲು ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್, ಸಚಿವ ಕೆ.ಎನ್.ರಾಜಣ್ಣ ಅವರು ಬೆಂಬಲ ನೀಡಿ ಸಹಕರಿಸಬೇಕು ಎಂದು ಎಸ್.ಟಿ.ಶ್ರೀನಿವಾಸ್ ವಿನಂತಿಸಿಕೊಂಡರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಗಿರುವ ತಾವು ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಪಕ್ಷ ಅವಕಾಶ ನೀಡುತ್ತದೆ ಎಂಬ ವಿಶ್ವಾಸವಿದೆ. ಆದಾಗ್ಯೂ ಪಕ್ಷದ ನಾಯಕರ ನಿರ್ದೇಶನ, ಆದೇಶ ಪಾಲಿಸಿಕೊಂಡು ಪಕ್ಷದ ಬೆಳವಣಿಗೆಗೆ ದುಡಿಯುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ, ಚಲನಚಿತ್ರ ನಟ ತುಮಕೂರು ಮೋಹನ್, ಮುಖಂಡರಾದ ವಿಜಯ್ ಹೆಗ್ಗೆರೆ, ಅರೆಯೂರು ಲೋಕೇಶ್, ಸೈಯದ್ ಸಾದರ್, ಪಿ.ಶಿವಾಜಿ, ಜಿ.ಟಿ.ಪ್ರಕಾಶ್, ಸುರೇಶ್, ಮಲ್ಲಸಂದ್ರ ಉಮಾಶಂಕರ್, ರವಿಕುಮಾರ್, ಶಿವರಾಜ್ ಕುಚ್ಚಂಗಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *