ಸ್ವಚ್ಛ ತುಮಕೂರಿಗೆ ಆಧ್ಯತೆ ನೀಡಿ – ಶಾಸಕ ಜಿ.ಬಿ.ಜ್ಯೋತಿಗಣೇಶ್

ತುಮಕೂರು : ನಗರವು ಬೆಳೆಯುತ್ತಿರುವ ನಗರವಾಗಿದ್ದು, ಸ್ವಚ್ಛತೆ ವಿಷಯದಲ್ಲಿ ಹಿಂದುಳಿದಿರುವುದು ಬೇಸರ ತರಿಸಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ತಿಳಿಸಿದರು.

ಅವರು ತಮ್ಮ ಶಾಸಕರ ಕಛೇರಿಯಲ್ಲಿ ತುಮಕೂರು ಮಹಾನಗರಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿಗಳ ಸಭೆ ಕರೆದು ಮಾತನಾಡುತ್ತಾ ಮಹಾನಗರಪಾಲಿಕೆ ಸದಸ್ಯರು ಇಲ್ಲದ ಕಾರಣ ವಾರ್ಡ್‍ಗಳಲ್ಲಿ ವ್ಯವಸ್ಥಿತವಾಗಿ ಸ್ವಚ್ಛತೆ ಕಾರ್ಯ ನಡೆಯುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಈ ಲೋಪವನ್ನು ತುರ್ತಾಗಿ ಸರಿಪಡಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಶಾಸಕರು ತಿಳಿಸಿದರು.

ಬೀದಿ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ತುಮಕೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಾಯಿ ಕಡಿತ ನಿಯಂತ್ರಣಕ್ಕೆ ಕ್ರಮವಹಿಸಿ ಎಂದು ಸಭೆಯಲ್ಲಿ ಶಾಸಕರು ತಿಳಿಸಿದರು. ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಣ ಮಾಡಲು ಶ್ವಾನಗಳ ಆರೈಕೆ ಕೇಂದ್ರ ತೆರೆಯಲು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವನ್ನು ಹುಡುಕಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಉದ್ದಿಮೆ ಪರವಾನಗಿ ನೀಡಲು ವರ್ತಕರನ್ನು ಅಲೆದಾಡಿಸುವುದು ಬೇಡ, ತುಮಕೂರು ಮಹಾನಗರಪಾಲಿಕೆಗೆ ತೆರಿಗೆ ಹಣವನ್ನು ತಡ ಮಾಡದೇ ನೀಡುತ್ತಾ ಪಾಲಿಕೆಯ ಬೆಳವಣಿಗೆಗೆ ಶ್ರಮವಹಿಸುತ್ತಿರುವ ವರ್ತಕರಿಗೆ ಸಮಸ್ಯೆ ಮಾಡದೇ ‘ವರ್ತಕರ ಸ್ನೇಹಿ’ಯಾಗಿ ವರ್ತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಶಾಸಕರ ಸಭೆಯಲ್ಲಿ ತುಮಕುರು ಮಹಾನಗರಪಾಲಿಕೆಯ ಆರೋಗ್ಯ ಶಾಖೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ಯೋಗೀಶ್ ಮತ್ತು ಆರೋಗ್ಯ ಶಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *