ತುಮಕೂರು: ಬಡತನದ ನಡುವೆಯೂ ವಿದ್ಯಾಭ್ಯಾಸ ಮಾಡಿ, ಶಾಸನ ಹಾಗೂ ಹಸ್ತ ಪ್ರತಿ ಕ್ಷೇತ್ರಕ್ಕೆ ವಿಭಿನ್ನ ಕೊಡುಗೆ ನೀಡಿದವರ ಪೈಕಿ ಪರಮಶಿವಮೂರ್ತಿಯವರು ಪ್ರಮುಖರು ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ರಾಜಶೇಖರ್ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವ ವಿದ್ಯಾನಿಲಯದ ಡಿ.ವಿ.ಜಿ ಕನ್ನಡ ಅಧ್ಯಯನ ಹಾಗೂ ಸಂಶೋಧನ ವಿಭಾಗದ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರೊ.ಡಿ.ವಿ ಪರಮಶಿವಮೂರ್ತಿ ಅವರ ಶುಭ ವಿದಾಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರೊ. ಪರಮಶಿವಮೂರ್ತಿಯವರು ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ.
“ವೃತ್ತಿಗೆ ಮಾತ್ರ ನಿವೃತ್ತಿ. ಸೃಜನಶೀಲ ಮನಸ್ಸಿಗೆ ಎಂದಿಗೂ ನಿವೃತ್ತಿ ಇರುವುದಿಲ್ಲ. ವಿದ್ಯಾಶಂಕರ, ಎಂ.ಎಂ ಕಲಬುರ್ಗಿ, ಚಿದಾನಂದ ಮೂರ್ತಿಗಳ ಮಾರ್ಗ ದರ್ಶನದಲ್ಲಿ ಅರಳಿದ ಪ್ರತಿಭೆ ಇವರು. ಬದುಕು ಹಾಗೂ ಬರಹ ಎರಡನ್ನು ಗೆದ್ದವರು ಪರಮಶಿವಮೂರ್ತಿಯವರು” ಎಂದು ರಾಜಶೇಖರ್ ಹೇಳಿದರು.
ಶಾಸನ ಸಂಶೋಧನೆ, ಸಾಹಿತ್ಯ ಕರ್ನಾಟಕ, ಅಭಿಜಾತ, ಚಿಂತಾಮಣಿ ಎಂಬ ಕೃತಿಗಳು ಹಾಗೂ ಪ್ರೌಢ ದೇವರಾಯ, ಕೃಷ್ಣ ದೇವರಾಯ, ಹಾಗೂ ನೊಳಂಬ ಶಾಸನಗಳೆಂಬ ಶಾಸನ ಸಂಪುಟಗಳನ್ನು ನಮ್ಮ ನಾಡಿಗೆ ನೀಡಿದ್ದಾರೆ ಎಂದರು.
ವಿವಿಯ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ ನಮ್ಮ ತುಮಕೂರು ವಿವಿಯಿಂದ ಹಂಪಿಯ ಕನ್ನಡ ವಿಶ್ವ ವಿದ್ಯಾನಿಲಯಕ್ಕೆ ಕುಲಪತಿಯಾಗಿ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿ. ಪ್ರಾಧ್ಯಾಪಕರು ತಮ್ಮ ಸ್ಥಾನಕ್ಕೆ ನ್ಯಾಯವನ್ನು ಒದಗಿಸಬೇಕು. ನೀವು ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ನಿಮ್ಮ ಕರ್ತವ್ಯವೇ ನಿಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದರು.
ವಿವಿಯ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ ನಮ್ಮ ತುಮಕೂರು ವಿಶ್ವ ವಿದ್ಯಾನಿಲಯಕ್ಕೆ ಪರಮಶಿವಮೂರ್ತಿಯವರ ಕೊಡುಗೆ ಅಪಾರ. ನಿವೃತ್ತಿಯ ನಂತರ ಅವರ ಬದುಕು ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಆಶಿಸಿದರು.
ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ .ಕೆ., ಮಾತನಾಡಿ ಒಳ್ಳೆಯ ಬರಹಕಾರ, ಸಂಶೋಧಕ, ಇತಿಹಾಸಕಾರ, ಹೀಗೆ ಹತ್ತು ಹಲವು ಹೆಸರುಗಳಿಂದ ಪರಮಶಿವಮೂರ್ತಿಯವರನ್ನು ಕರೆಯಬಹುದು. ಅವರ ಸಾಧನೆ ಯುವಕರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ. ನಿತ್ಯಾನಂದ ಶೆಟ್ಟಿ. ಬಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.