
ತುಮಕೂರು : ಇರುವೆ ಸಾಲುಗಟ್ಟಿದಂತಹ ಬೃಹತ್ ಜನಸ್ತೋಮದೊಂದಿಗೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಸಿ.ಗೌರಿಶಂಕರ್ ಜಲ್ಲಾಧಿಕಾರಿಗಳ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದರು, ನಗರದ ಬಿಜಿಎಸ್ ಸರ್ಕಲ್‍ನಿಂದ ಹಿಡಿದು ಜಿಲ್ಲಾಧಿಕಾರಿಗಳ ಕಛೇರಿಯ ತನಕ ಜೆಡಿಎಸ್ ಬಾವುಟ ಹಿಡಿದ ಗೌರಿಶಂಕರ್ ಅಭಿಮಾನಿಗಳು ಜೈಕಾರ, ಸಿಳ್ಳೆ, ಕೇಕೆ ಹಾಕುತ್ತಿರುವುದು ಕಂಡು ಬಂದಿತು.

ನಗರದ ಟೌನ್ ಹಾಲ್ ವೃತ್ತದಿಂದ ಚರ್ಚ್ ಸರ್ಕಲ್‍ವರೆಗೆ ರಸ್ತೆಯ ಎರಡೂ ಇಕ್ಕಲೆಗಳಲ್ಲಿ ಜನಸ್ತೋಮ ತುಂಬಿ ತುಳುಕುತಿತ್ತು, ಎಷ್ಟು ದೂರ ಕಣ್ಣಾಯಿಸಿದರೂ ಜನವೋ ಜನ, ಚರ್ಚ್ ಸರ್ಕಲ್‍ನಲ್ಲಿ ನಿಂತು ಟೌನ್ ಹಾಲ್ ಕಡೆಗೆ ನೋಡಿದರೆ ರಸ್ತೆಯ ತುಂಬಾ ಜೆಡಿಎಸ್ ಶಾಲು, ಬಾವುಟಗಳನ್ನು ಹಿಡಿದ ಇರುವೆಯಂತಹ ಸಾಲು ಕಂಡು ಬಂದಿತು.
ಬೆಳಿಗ್ಗೆ 11.45ರ ಸುಮಾರಿಗೆ ಪ್ರಾರಂಭವಾದ ಮೆರವಣಿಗೆ ಒಂದೂವರೆಯಾದರೂ ಚರ್ಚ್ ಸರ್ಕಲ್ ಮುಟ್ಟಲು ಆಗಲಿಲ್ಲ, ಆಗ ಡಿ.ಸಿ.ಗೌರಿಶಂಕರ್ ಅವರು ಸಮಯವಾಗುತ್ತಿರುವುದರಿಂದ ನಾಮಪತ್ರ ಸಲ್ಲಿಸಿ ಬಂದು ನನ್ನ ಅಭಿಮಾನಿಗಳನ್ನು ಕುರಿತು ಮಾತನಾಡುವುದಾಗಿ ತಿಳಿಸಿ, ಮೆರವಣಿಗೆಯ ವಾಹನದಿಂದ ಜನರ ಮೇಲೆಯೇ ಜಿಗಿದು ತಮ್ಮ ಕಾರಿನಲ್ಲಿ ತೆರಳಿ ನಾಮಪತ್ರವನ್ನು ಸಲ್ಲಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಗೌರಿಶಂಕರ್ ಅವರು, ಒಂದು ಲಕ್ಷಕ್ಕೂ ಹೆಚ್ಚು ಜನರು ಇಂದು ನಾಮಪತ್ರ ಸಲ್ಲಿಸಲು ಬಂದಿದ್ದು, ನನ್ನ ಮತದಾರ ದೇವರುಗಳೇ ನನ್ನನ್ನು ಗೆಲ್ಲಿಸಿ ಕಳುಹಿಸಲಿದ್ದಾರೆ, ನಾನು ಅವರ ಮಗನಾಗಿ ಕೆಲಸ ಮಾಡಿದ್ದೇನೆ, ಮಗನನ್ನು ಯಾರಾದರೂ ಹೊರಗೆ ಹಾಕುತ್ತಾರೆಯೇ, ನಾನು ಅವರಿಗೆ, ಅವರು ನನಗೆ ಎಂದು ಹೇಳಿದರು.
ಮೆರವಣಿಗೆಯಲ್ಲಿ ತುಮಕೂರು ನಗರ ಕ್ಷೇತ್ರದ ಅಭ್ಯರ್ಥಿ ಗೋವಿಂದರಾಜು ಪಾಲ್ಗೊಂಡು ತುಮಕೂರು ಮಹಾನಗರ ಪಾಳಿಕೆಯಲ್ಲಿ ನಾಮಪತ್ರವನ್ನು ಸಲ್ಲಿಸಿದರು.
ನಾಮಪತ್ರ ಮೆರವಣಿಗೆಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಆರ್.ಸಿ.ಆಂಜಿನಪ್ಪ, ಮಾಹನಗರ ಪಾಳಿಕೆಯ ಮಾಜಿ ಉಪಮೇಯರ್ ನಾಗರಾಜು, ಇನ್ನಿತರರು ಭಾಗವಹಿಸಿದ್ದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ ಸಿ ಗೌರಿಶಂಕರ್ ನಾಮಪತ್ರ ಸಲ್ಲಿಕೆಗೂ ಮುನ್ನ ಮನೆದೇವರಾದ ಹದ್ದಿನ ಕಲ್ಲು ಆಂಜನೇಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಭೈರನಾಯಕನಹಳ್ಳಿಯ ತಮ್ಮ ಮನೆಗೆ ಭೇಟಿ ನೀಡಿ ತಾಯಿ ಸಿದ್ದಗಂಗಮ್ಮ ಅವರ ಆಶೀರ್ವಾದ ಪಡೆದರು, ಬಳಿಕ ಸಿದ್ದಗಂಗಾ ಮಠಕ್ಕೆ ತೆರಳಿ ಪರಮ ಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆ ಪೂಜೆ ಸಲ್ಲಿಸಿ ನಂತರ ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಗ್ರಾಮಾಂತರ ಕ್ಷೇತ್ರದ ಗುಳೂರು ಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗೂಳೂರು ಸರ್ಕಲ್ ನಿಂದ 5,000ಕ್ಕೂ ಹೆಚ್ಚು ಬೈಕ್ ಗಳಲ್ಲಿ ಕಾರ್ಯಕರ್ತರು ಡಿ ಸಿ ಗೌರಿಶಂಕರ್ ಅವರನ್ನು ತುಮಕೂರು ನಗರದವರೆಗೂ ಮೆರವಣಿಗೆಯಲ್ಲಿ ಕರೆತಂದರು.
-ಹೆಚ್.ವಿ.ವಿ.