ತುಮಕೂರು : ಕಲ್ಪತರು ನಾಡು ತುಮಕೂರಿನ ಅಭಿವೃದ್ಧಿಗೂ ಸರ್ಕಾರ ಬದ್ಧವಾಗಿದ್ದು, ತುಮಕೂರನ್ನು ಸ್ಯಾಟಲೈಟ್ ನಗರವನ್ನಾಗಿ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರ 75ನೇ ಹುಟ್ಟುಹಬ್ಬ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದರು.
ರೈತರಿಗೆ ಪಿಂಚಣಿ ಇಲ್ಲ. ಆದರೆ ಸಹಕಾರ ಕ್ಷೇತ್ರದ ಮೂಲಕ ರೈತರ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ಸಹಕಾರ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ರಾಜಣ್ಣನವರಿಗೆ ನಮ್ಮ ಸರ್ಕಾರ ಜವಾಬ್ದಾರಿಯನ್ನು ವಹಿಸಿದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುವುದೇ ಕಾಂಗ್ರೆಸ್ ತತ್ವ ಎಂದು ಹೇಳಿದರು.
2027ರ ವೇಳೆಗೆ ಕೋಲಾರ, ತುಮಕೂರು ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ಎತ್ತಿನಹೊಳೆ ನೀರನ್ನು ಹರಿಸಬೇಕೆನ್ನುವುದು ನಮ್ಮ ಸರ್ಕಾರದ ಸಂಕಲ್ಪ. ಎತ್ತಿನಹೊಳೆ ಯೋಜನೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ನನಗೆ ನಿರ್ದೇಶನ ನೀಡಿದ್ದು, ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.